ಪಾಕ್‌ ಪರ ಘೋಷಣೆ ಕೂಗಿರುವುದು ಸಾಬೀತಾದರೆ ಕಠಿಣ ಕ್ರಮ: ಜಿ. ಪರಮೇಶ್ವರ್
x
ಡಾ. ಜಿ ಪರಮೇಶ್ವರ್‌ | ಫೋಟೋ G Parameshwara/facebook

ಪಾಕ್‌ ಪರ ಘೋಷಣೆ ಕೂಗಿರುವುದು ಸಾಬೀತಾದರೆ ಕಠಿಣ ಕ್ರಮ: ಜಿ. ಪರಮೇಶ್ವರ್

ಘೋಷಣೆ ಕೂಗಿರುವುದು ಎಫ್‌ಎಸ್‌ಎಲ್‌ ತನಿಖಾ ವರದಿಯಲ್ಲಿ ಸಾಬೀತಾದರೆ, ಅಂತಹವರನ್ನು ರಕ್ಷಣೆ ಮಾಡುವುದಿಲ್ಲ. ಕಾನೂನು ಪ್ರಕಾರ ಶಿಕ್ಷೆ ನೀಡುತ್ತೇವೆ. ಅವರನ್ನು ರಕ್ಷಿಸುವ ಅಗತ್ಯ ನಮಗಿಲ್ಲ ಎಂದು ಪರಮೇಶ್ವರ್‌ ಹೇಳಿದ್ದಾರೆ.


ಬೆಂಗಳೂರು: ವಿಧಾನಸೌಧದಲ್ಲಿ ಕಾಂಗ್ರೆಸ್‌ ರಾಜ್ಯಸಭಾ ನಾಯಕ ನಾಸಿರ್‌ ಹುಸೇನ್‌ ಅವರ ಬೆಂಬಲಿಗರು ʼಪಾಕ್‌ ಪರ ಘೋಷಣೆʼ ಕೂಗಿದ್ದಾರೆಂಬ ಬಿಜೆಪಿ ಆರೋಪಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರು ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದು, ಪಾಕ್‌ ಪರ ಘೋಷಣೆ ಕೂಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆ ನಡೆಯಬಾರದಿತ್ತು. ಎಫ್‌ಎಸ್‌ಎಲ್‌ ತನಿಖಾ ವರದಿಯಲ್ಲಿ ಸಾಬೀತಾದರೆ ಅಂತಹವರನ್ನು ರಕ್ಷಣೆ ಮಾಡುವುದಿಲ್ಲ. ಕಾನೂನು ಪ್ರಕಾರ ಶಿಕ್ಷೆ ನೀಡುತ್ತೇವೆ. ಅವರನ್ನು ರಕ್ಷಿಸುವ ಅಗತ್ಯ ನಮಗಿಲ್ಲ ಎಂದು ಪರಮೇಶ್ವರ್‌ ಹೇಳಿದ್ದಾರೆ.

ಅದಾಗ್ಯೂ, ಬಿಜೆಪಿ ನಾಯಕರು ಪಟ್ಟು ಬಿಡದೆ ಪ್ರತಿಭಟನೆ ನಡೆಸಿದೆ. ಬಳ್ಳಾರಿಯಲ್ಲಿ ನಾಸಿರ್‌ ಹುಸೇನ್‌ ಅವರ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಪಾಕ್‌ ಪರ ಘೋಷಣೆ ಕೂಗಿದವರನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕಚೇರಿಯ ನಾಮಫಲಕ ಕಿತ್ತು ಹಾಕಲು ಬಿಜೆಪಿಗರು ಪ್ರಯತ್ನಿಸಿದರಾದರೂ ಪೊಲೀಸರು ಅವರನ್ನು ತಡೆದಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮತಕ್ಕಾಗಿ ಕಾಂಗ್ರೆಸ್‌ ದೇಶದ್ರೋಹವನ್ನು ಬೆಂಬಲಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ದೇಶದ್ರೋಹಿಗಳಿಗೆ ಹೆಚ್ಚು ಬಲ ಬಂದಿದೆ ಎಂದು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ʻಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ನಿನ್ನೆಯೇ ಬಂಧಿಸಬೇಕಿತ್ತು. ದೇಶದ್ರೋಹಿ ಗಳನ್ನು ಬಂಧಿಸಲು ಯೋಚನೆ ಮಾಡಬೇಕಾʼ ಎಂದು ಕಿಡಿ ಕಾರಿದ್ದಾರೆ.

ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಘೋಷಣೆ ಕೂಗಿದ ಜಾಗದಲ್ಲೇ ಒದ್ದು ಆತನನ್ನು ಬಂಧಿಸಬೇಕಿತ್ತು. ಸರ್ಕಾರ ದೇಶದ್ರೋಹಿ ಗಳನ್ನು ರಕ್ಷಿಸುವ 6ನೇ ಗ್ಯಾರಂಟಿ ಘೋಷಿಸಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದೇಶದ್ರೋಹಿಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Read More
Next Story