ಯತ್ನಾಳ್‌ ಒಡೆತನದ ಕಾರ್ಖಾನೆ ಮುಚ್ಚಲು ಆದೇಶ: ಪರಿಸರ ಮಂಡಳಿ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್
x

ಯತ್ನಾಳ್‌ ಒಡೆತನದ ಕಾರ್ಖಾನೆ ಮುಚ್ಚಲು ಆದೇಶ: ಪರಿಸರ ಮಂಡಳಿ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಸಿದ್ಧಸಿರಿ ಇಥೆನಾಲ್‌ ಮತ್ತು ಪವರ್ ಘಟಕ ಆರಂಭಿಸಲು ಪರಿಸರ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ ಎಂದು ಆರೋಪಿಸಿ ಅಧಿಕಾರಿಗಳು ಘಟಕ ಮುಚ್ಚಲು ಆದೇಶ ನೀಡಿದ್ದರು


ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಹೊರವಲಯದಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬದ ಒಡೆತನದಲ್ಲಿರುವ ಸಿದ್ಧಸಿರಿ ಇಥೆನಾಲ್ ಕಾರ್ಖಾನೆಯನ್ನು ಮುಚ್ಚಲು ಆದೇಶಿಸಿರುವ ಬಗ್ಗೆ ಕರ್ನಾಟಕ ಹೈಕೋರ್ಟ್‌, ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ)ಯ ಪ್ರತಿಕ್ರಿಯೆ ಕೇಳಿದೆ.

ತಮ್ಮ ಮಾಲಿಕತ್ವದ ಇಥೆನಾಲ್‌ ಘಟಕವನ್ನು ಮುಚ್ಚಲು ಆದೇಶ ನೀಡಿರುವುದನ್ನು ಪ್ರಶ್ನಿಸಿ ಶಾಸಕ ಯತ್ನಾಳ್ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕ ರಾಮನಗೌಡ ಪಾಟೀಲ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ ಅಂಜಾರಿಯಾ ಮತ್ತು ಕೃಷ್ಣ ಎಸ್. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠವು, ಮಂಡಳಿಗೆ ಚಾಟಿ ಬೀಸಿದ್ದು, ʼನಮ್ಮದು ಮೊಘಲರ ಸರ್ಕಾರವಲ್ಲ, ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕಲ್ಯಾಣ ಸರ್ಕಾರ ಎಂಬುದನ್ನು ಮರೆಯಬೇಡಿʼ ಎಂದು ಹೇಳಿದೆ.

ವಿಚಾರಣೆ ವೇಳೆ, ಘಟಕ ಮುಚ್ಚಲು ಕಾರಣವೇನು ಎಂದು ಪ್ರಶ್ನಿಸಿದ ನ್ಯಾಯಪೀಠಕ್ಕೆ ಉತ್ತರಿಸಿದ ಕೆಎಸ್‌ಪಿಸಿಬಿ ಅಧಿಕಾರಿಗಳು, ʼಘಟಕ ಆರಂಭಿಸಲು ಪರಿಸರ ಮಂಡಳಿ ಅನುಮತಿ ನೀಡಿರಲಿಲ್ಲ‌ʼ ಎಂದಿದ್ದಾರೆ. ಇದರಿಂದ ತೃಪ್ತಿಗೊಳ್ಳದ ಹೈಕೋರ್ಟ್‌, ʼಏಕಾಏಕಿ ಮುಚ್ಚಲು ಆದೇಶ ನೀಡಿರುವ ಕಾರಣ ಹೇಳಬೇಕು. ನಿಮ್ಮ ತೀರ್ಮಾನದ ಹಿಂದಿರುವ ಕಾರಣ ಜನರಿಗೆ ತಿಳಿಯಬೇಕುʼ ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಹೊರವಲಯದಲ್ಲಿರುವ ಸಿದ್ಧಸಿರಿ ಇಥೆನಾಲ್‌ ಮತ್ತು ಪವರ್ ಘಟಕದಿಂದ ಕಲುಷಿತ ನೀರು ಹೊರಬರುತ್ತಿದ್ದು ಅದು ಹತ್ತಿರದ ಮಲ್ಲಾಮಾರಿ ಜಲಾಶಯಕ್ಕೆ ಹೋಗಿ ಸೇರುತ್ತಿದೆ ಎಂದು ಸ್ಥಳೀಯ ರೈತ ಸಂಘಟನೆಗಳು ದೂರು ನೀಡಿದ್ದವು.

ಕಾರ್ಖಾನೆಯನ್ನು ಮುಚ್ಚುವಂತೆ 2024ರ ಜನವರಿ 18ರಂದು ನೋಟಿಸ್ ಜಾರಿ ಮಾಡಿದ್ದ ಕಲಬುರಗಿ ವಲಯದ ಕೆಎಸ್‌ಪಿಸಿಬಿ ಅಧಿಕಾರಿಗಳು, ʼಇಥೆನಾಲ್‌ ಘಟಕಕ್ಕೆ ಅಗತ್ಯ ಅನುಮತಿ ಪಡೆದಿಲ್ಲ ಹಾಗೂ ಕೆಲವು ಪರಿಸರ ನಿಯಮಗಳನ್ನು ಉಲ್ಲಂಘಿಸಲಾಗಿದೆʼ ಎಂಬ ಆರೋಪಿಸಿದ್ದರು. ಕಾರ್ಖಾನೆಗೆ ನೀಡಲಾಗಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆಯೂ ಸ್ಥಳೀಯ ವಿದ್ಯುತ್ ಸರಬರಾಜು ಸಂಸ್ಥೆಗೆ ಮಂಡಳಿ ಸೂಚಿಸಿದ್ದರು.

ತಮ್ಮ ಕುಟುಂಬದ ಒಡೆತನದಲ್ಲಿರುವ ಕಾರ್ಖಾನೆಗೆ ನೋಟಿಸ್‌ ನೀಡಿರುವುದನ್ನು ಕಾಂಗ್ರೆಸ್‌ ಸರ್ಕಾರದ ಸೇಡಿನ ಕ್ರಮ ಎಂದು ಕರೆದಿದ್ದ ಶಾಸನ ಬಸನಗೌಡ ಪಾಟೀಲ್‌ ಯತ್ನಾಳ್‌, “ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಎದುರಿಸಲಾಗದೆ ನಮ್ಮ ಇಥೆನಾಲ್ ಕಾರ್ಖಾನೆಗೆ ನೋಟಿಸ್ ಕೊಡಿಸಿದೆ. ರೈತರಿಗೆ ನೆರವಾಗಲು ಹಾಗೂ ಹಿಂದುಳಿದ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಸ್ಥಾಪಿಸಲಾಗಿದೆ” ಎಂದು ಹೇಳಿದ್ದರು. ಅಲ್ಲದೆ, ಈ ನೋಟಿಸ್‌ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿಯೂ ಅವರು ಹೇಳಿದ್ದರು.

Read More
Next Story