
ಸಿಎಎ 'ರಂಜಾನ್ ಉಡುಗೊರೆ': ಒಮರ್ ಅಬ್ದುಲ್ಲಾ
ಶ್ರೀನಗರ, ಮಾ. 12- ಚುನಾವಣೆ ಘೋಷಣೆಗೆ ಮುನ್ನ ಸಿಎಎ ನಿಯಮಗಳ ಅಧಿಸೂಚನೆ ಹೊರಡಿಸಿರುವುದು ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ʻ2019 ರಲ್ಲಿ ಅಂಗೀಕರಿಸಲ್ಪಟ್ಟ ಕಾಯಿದೆಗೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳ ಮುನ್ನ ನಿಯಮಗಳಿಗೆ ಅಧಿಸೂಚನೆ ಹೊರಡಿಸುವುದರ ಗುರಿ ಏನೆಂದು ಸ್ಪಷ್ಟವಾಗುತ್ತದೆ. ಅವರು ಮೊದಲು ರಾಮ ಮಂದಿರದ ನಿರ್ಮಾಣದ ನಂತರ ತಾವು ಸೋಲುವುದು ಸಾಧ್ಯವಿಲ್ಲ ಎನ್ನುತ್ತಿದ್ದರು. ಆದರೆ, ಸ್ಥಾನ ದುರ್ಬಲವಾಗಿರುವುದರಿಂದಲೇ ಹೊಸ ಅಸ್ತ್ರಗಳನ್ನು ಬಳಸಬೇಕಾಗಿ ಬಂದಿದೆʼ ಎಂದು ಸುದ್ದಿಗಾರರಿಗೆ ತಿಳಿಸಿದರು.
ʻಮುಂಬರುವ ಚುನಾವಣೆಯಲ್ಲಿ ಬಿಜೆಪಿ ಧರ್ಮವನ್ನು ಬಳಸಲು ಬಯಸುತ್ತದೆ ಎಂಬುದು ಸ್ಪಷ್ಟವಾಗಿದೆ. ಮುಸ್ಲಿಮರು ಯಾವಾಗಲೂ ಬಿಜೆಪಿಯ ಗುರಿಯಾಗಿರುತ್ತಾರೆ. ಅದು ಪಕ್ಷಕ್ಕೆ ಹೊಸದಲ್ಲʼ ಎಂದರು. ʻ ಸಿಎಎ ದೇಶದ ಮುಸ್ಲಿಮರಿಗೆ ನೀಡಿದ ರಂಜಾನ್ ಉಡುಗೊರೆʼ ಎಂದರು.
ಚುನಾವಣೆ ಆಯೋಗಕ್ಕೆ ಭೇಟಿ ಕುರಿತು ಪ್ರತಿಕ್ರಿಯಿಸಿ, ʻಪಕ್ಷದ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಿ, ಸಂಸತ್ತು ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬೇಕೆಂದು ಒತ್ತಾಯಿಸಿದೆ.ಅವರು ಏನು ನಿರ್ಧರಿಸುತ್ತಾರೆ ಎಂಬುದನ್ನು ಕಾಯ್ದು ನೋಡೋಣ,ʼ ಎಂದರು.