ಹೊಸದಿಲ್ಲಿ, ಫೆ.28 - ದೇಶದಲ್ಲಿ ಅತಿ ಹೆಚ್ಚು ಶ್ರೀಮಂತರ ಸಂಖ್ಯೆ ವಾರ್ಷಿಕ ಶೇ. 6 ರಷ್ಟು ಏರಿಕೆಯಾಗಿ, 13,263 ಕ್ಕೆ ತಲುಪಿದೆ ಎಂದು ನೈಟ್ ಫ್ರಾಂಕ್ ಹೇಳಿದೆ.

ರಿಯಲ್ ಎಸ್ಟೇಟ್ ಸಲಹೆಗಾರ ಸಂಸ್ಥೆ ನೈಟ್ ಫ್ರಾಂಕ್ ಇಂಡಿಯಾ 'ದಿ ವೆಲ್ತ್ ರಿಪೋರ್ಟ್ 2024' ನ್ನು ಬುಧವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಗೊಳಿಸಿತು. ದೇಶದಲ್ಲಿ ಅಲ್ಟ್ರಾ ಹೈ ನೆಟ್ವರ್ತ್ ವ್ಯಕ್ತಿ (ಯುಎಚ್‌ಎನ್‌ಡಬ್ಲ್ಯುಐ) ಗಳ ಸಂಖ್ಯೆ 12,495ರಿಂದ 13,263 ಕ್ಕೆ ಹೆಚ್ಚಾಗಿದೆ. 2028 ರ ವೇಳೆಗೆ ಇಂಥ ಶ್ರೀಮಂತರ ಸಂಖ್ಯೆ ಸುಮಾರು 20,000 ಆಗಲಿದೆ. ಅಲ್ಟ್ರಾ ಹೈ ನೆಟ್ವರ್ತ್ ವ್ಯಕ್ತಿ (ಯುಎಚ್‌ ಎನ್‌ಡಬ್ಲ್ಯುಐ) ಅಂದರೆ 30 ದಶಲಕ್ಷ ಡಾಲರ್‌ ಮತ್ತು ಅದಕ್ಕಿಂತ ಹೆಚ್ಚು ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳು.

ನೈಟ್ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಾಲ್ ಮಾತನಾಡಿ, ʻನೈಟ್ ಫ್ರಾಂಕ್ ವರದಿ ಪ್ರಕಾರ, ಶೇ.90 ಭಾರತೀಯ ಯುಎಚ್‌ಎನ್‌ಡಬ್ಲ್ಯುಐ ಗಳು 2024ರಲ್ಲಿ ತಮ್ಮ ಸಂಪತ್ತಿನ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಶೇ.63 ರಷ್ಟು ಜನರು ತಮ್ಮ ಸಂಪತ್ತಿನ ಮೌಲ್ಯ ಶೇ.10 ಕ್ಕಿಂತ ಹೆಚ್ಚಳವನ್ನು ಅಂದಾಜಿಸಿದ್ದಾರೆʼ ಎಂದರು.

ಜಾಗತಿಕವಾಗಿ ಶ್ರೀಮಂತ ವ್ಯಕ್ತಿಗಳ ಸಂಖ್ಯೆ ಮುಂದಿನ ಐದು ವರ್ಷಗಳಲ್ಲಿ ಶೇ.28.1 ರಷ್ಟು ಹೆಚ್ಚಲಿದ್ದು, 2028 ರ ವೇಳೆಗೆ 8,02,891 ಕ್ಕೆ ತಲುಪುತ್ತದೆ ಎಂದು ಹೇಳಿದರು. ಶೇ.9.7 ಹೆಚ್ಚಳದೊಂದಿಗೆ ಟರ್ಕಿ ನೈಟ್ ಫ್ರಾಂಕ್‌ನ ಶ್ರೇಯಾಂಕದಲ್ಲಿ ಮುಂಚೂಣಿಯಲ್ಲಿದೆ. ಆನಂತರ ಅಮೆರಿಕ ಶೇ.7.9, ಭಾರತ ಶೇ. 6.1, ದಕ್ಷಿಣ ಕೊರಿಯಾ ಶೇ.5.6 ಮತ್ತು ಸ್ವಿಟ್ಜರ್ಲೆಂಡ್ ಶೇ. 5.2 ಸ್ಥಾನ ಪಡೆದುಕೊಂಡಿವೆ.

ನೈಟ್ ಫ್ರಾಂಕ್‌ನ ಜಾಗತಿಕ ಸಂಶೋಧನಾ ಮುಖ್ಯಸ್ಥ ಲಿಯಾಮ್ ಬೈಲಿ ಮಾತನಾಡಿ, ʻಏಷ್ಯಾದ ಹೊರಗೆ ಬೆಳವಣಿಗೆಯು ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಉತ್ತರ ಅಮೆರಿಕಾದ ಮೇಲೆ ಕೇಂದ್ರೀಕೃತವಾಗಿದೆ. ಯುರೋಪ್ ಹಿಂದುಳಿದಿದೆ ಮತ್ತು ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದುರ್ಬಲ ಪ್ರದೇಶಗಳಾಗಬಹುದುʼ ಎಂದರು.

Next Story