ಚುನಾವಣೆ ದೃಷ್ಟಿಯಿಂದ 3 ತಿಂಗಳ ಕಾಲ 'ಮನ್ ಕಿ ಬಾತ್' ಪ್ರಸಾರವಿಲ್ಲ: ಪ್ರಧಾನಿ ಮೋದಿ
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಮನ್ ಕಿ ಬಾತ್ ಪ್ರಸಾರ ಕಾರ್ಯಕ್ರಮವನ್ನು ಮುಂದಿನ ಮೂರು ತಿಂಗಳು ಪ್ರಸಾರ ಮಾಡದಿರಲು ನಿರ್ಧರಿಸಲಾಗಿದೆ
ಹೊಸದಿಲ್ಲಿ, ಫೆ.25: ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮಾಸಿಕ ‘ಮನ್ ಕಿ ಬಾತ್’ ಪ್ರಸಾರವನ್ನು ಮುಂದಿನ ಮೂರು ತಿಂಗಳ ಕಾಲ ಪ್ರಸಾರ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಕಾರ್ಯಕ್ರಮದ 110ನೇ ಸಂಚಿಕೆಯಲ್ಲಿ ಮಾತನಾಡಿದ ಅವರು ಮಾರ್ಚ್‌ನಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದ್ದು, ಮುಂದಿನ ತಿಂಗಳಲ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
110 ಸಂಚಿಕೆಗಳ ಅವಧಿಯಲ್ಲಿ ಸರ್ಕಾರದ ನೆರಳಿಂದಲೂ ದೂರವಿಟ್ಟಿರುವುದು ಕಾರ್ಯಕ್ರಮದ ದೊಡ್ಡ ಯಶಸ್ಸು ಎಂದ ಅವರು, ಪ್ರಸಾರವನ್ನು ದೇಶದ ಸಾಮೂಹಿಕ ಶಕ್ತಿ ಮತ್ತು ಸಾಧನೆಗೆ ಸಮರ್ಪಿಸಲಾಗಿದೆ ಎಂದು ಪ್ರತಿಪಾದಿಸಿದರು.
"ಇದು ಜನರಿಂದ ಮತ್ತು ಜನರಿಗಾಗಿ ಮಾಡುವ ಜನರ ಕಾರ್ಯಕ್ರಮ. ನಾವು ಮುಂದಿನ ಬಾರಿ ಭೇಟಿಯಾದಾಗ, ಅದು ಮನ್ ಕಿ ಬಾತ್‌ನ 111 ನೇ ಸಂಚಿಕೆಯಾಗಲಿದೆ" ಎಂದು ಮೋದಿ ಅವರು ಹೇಳಿದ್ದಾರೆ.
2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೂಡಾ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.