ಇನ್ನಷ್ಟು ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ: ಸಿಎಂ ಸಿದ್ದರಾಮಯ್ಯ
x
ಸಿದ್ದರಾಮಯ್ಯ, ಮುಖ್ಯಮಂತ್ರಿ

ಇನ್ನಷ್ಟು ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ: ಸಿಎಂ ಸಿದ್ದರಾಮಯ್ಯ

ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರ ಬಿದ್ದು ಹೋಗಲಿದೆ ಎಂದು ಬಿಜೆಪಿಯ ನಾಯಕರು ಹೇಳುತ್ತಿದ್ದಾರೆ. ಆದರೆ, ಬಿಜೆಪಿಯ ನಾಯಕರೇ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಸಿ.ಎಂ ಹೇಳಿದ್ದಾರೆ.


ಬಿಜೆಪಿಯಿಂದ ಇನ್ನಷ್ಟು ಜನ ಕಾಂಗ್ರೆಸ್ ಸೇರಲಿದ್ದಾರೆ. ಐದು ವರ್ಷ ಕಾಂಗ್ರೆಸ್‌ ಆಡಳಿತ ನಡೆಸುವ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ ಗೌತಮ್ ಅವರ ಪರ ಮುಳಬಾಗಿಲಿನಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರ ನಡೆಸಿ, ಮಾತನಾಡಿದರು.

ಲೋಕಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರ ಬಿದ್ದು ಹೋಗಲಿದೆ ಎಂದು ಬಿಜೆಪಿಯ ನಾಯಕರು ಹೇಳುತ್ತಿದ್ದಾರೆ. ಕಾಂಗ್ರೆಸ್ ಈ ಬಾರಿ 136 ಸ್ಥಾನಗಳನ್ನು ಗೆದಿದ್ದು, ಶೇ. 43 ಪ್ರತಿಶತ ಮತಗಳನ್ನು ಗಳಿಸಿದೆ. ಬಿಜೆಪಿ 64 ಸ್ಥಾನಗಳಲ್ಲಿ ಗೆದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿಯಿಂದ ಇನ್ನಷ್ಟು ಜನ ನಮ್ಮ ಪಕ್ಷವನ್ನು ಸೇರಲಿದ್ದಾರೆ. ಸರ್ಕಾರ ಕುಸಿಯುವ ಪ್ರಶ್ನೆಯೇ ಇಲ್ಲ. ಐದು ವರ್ಷಗಳ ಕಾಲ ಗ್ಯಾರಂಟಿ ಯೋಜನೆ ಮುಂದುವರಿಯಲಿದೆ ಎಂದರು.

ಜನ ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಮೇಲೆ ನಂಬಿಕೆ ಇರಿಸಿ ನಮನ್ನು ಗೆಲ್ಲಿಸಿದ್ದಾರೆ. ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಚುನಾವಣಾ ಪ್ರಚಾರಕ್ಕೆ ಹೋಗುತ್ತಿರುವ ಪ್ರದೇಶಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಜಾತಿಯ ಜನರು,ಮಧ್ಯಮವರ್ಗದವರು ನಮ್ಮ ಪರವಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಅಧಿಕ ಅಂತರದಿಂದ ಗೆಲ್ಲಲಿದ್ದಾರೆ ಎಂದು ಹೇಳಿದರು.

ಬಿಜೆಪಿಗೆ ಯಾವ ಕಾರಣಕ್ಕೆ ಮತ ನೀಡಬೇಕು ?

ಬಿಜೆಪಿಗೆ ಯಾವ ಕಾರಣಕ್ಕಾಗಿ ಮತ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರ 5300 ಕೋಟಿ ರೂಪಾಯಿ ಕೊಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದರು. ಆದರೆ, ಇಲ್ಲಿಯವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. 15ನೇ ಹಣಕಾಸು ಯೋಜನೆಯಡಿ 5,495 ಕೋಟಿ ರೂಪಾಯಿ ಕೊಡುವುದಾಗಿ ತಿಳಿಸಿದ್ದರು. ಅದನ್ನು ಸಹ ಬಿಡುಗಡೆ ಮಾಡಿಲ್ಲ. ಪೇರಿಫೆರಲ್ ರಿಂಗ್ ರೋಡ್ ಹಾಗೂ ಕೆರೆಗಳ ಅಭವೃದ್ಧಿಗೆ ತಲಾ 3000 ಸಾವಿರ ಕೋಟಿ ರೂಪಾಯಿ ಸೇರಿದಂತೆ ಹಲವು ಭರವಸೆ ಕೊಟ್ಟಿದ್ದರು ಯಾವ ಭರವಸೆಯನ್ನೂ ಈಡೇರಿಸಿಲ್ಲ. ಈಗ ಬಿಜೆಪಿಗೆ ಯಾವ ಕಾರಣಕ್ಕಾಗಿ ಮತದಾನ ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


Read More
Next Story