
ಹರ್ಯಾಣ: ಸಿಎಂ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ
ಮಾ.12- ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಂಗಳವಾರ ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಹರಿಯಾಣ ಬಿಜೆಪಿ ಮುಖ್ಯಸ್ಥ ನಯಾಬ್ ಸಿಂಗ್ ಸೈನಿ ಅವರು ಖಟ್ಟರ್ ಅವರನ್ನು ಸ್ಥಳಾಂತರಿಸಬಹುದು ಮತ್ತು ಖಟ್ಟರ್ ಅವರನ್ನು ಕರ್ನಾಲ್ ಲೋಕಸಭೆ ಕ್ಷೇತ್ರದಿಂದ ಸ್ಪಧಿಸಲು ಕೇಳಬಹುದು ಎಂಬ ವದಂತಿ ಹರಡಿದೆ.
ಲೋಕಸಭೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ದುಷ್ಯಂತ್ ಚೌಟಾಲಾ ನೇತೃತ್ವದ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. 2019 ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲಾ 10 ಲೋಕಸಭೆ ಸ್ಥಾನಗಳನ್ನು ಗೆದ್ದಿತ್ತು. 90 ಸದಸ್ಯರ ಸದನದಲ್ಲಿ ಬಿಜೆಪಿ 41 ಹಾಗೂ ಜೆಜೆಪಿ 10 ಶಾಸಕರನ್ನು ಹೊಂದಿದೆ. ಜೊತೆಗೆ, ಏಳು ಸ್ವತಂತ್ರರ ಪೈಕಿ ಆರು ಮಂದಿಯ ಬೆಂಬಲ ಹೊಂದಿದೆ. ಕೇಂದ್ರ ಸಚಿವ ಅರ್ಜುನ್ ಮುಂಡಾ ಮತ್ತು ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ದುಶ್ಯಂತ್ ಚೌಟಾಲಾ ಅವರ ಜೆಜೆಪಿ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿ ತ್ತು. ಚೌಟಾಲಾ ದೆಹಲಿಯಲ್ಲಿ ಶಾಸಕರ ತುರ್ತು ಸಭೆಯನ್ನು ಕರೆದಿದ್ದಾರೆ.ಆದರೆ, ಪಕ್ಷದ ಹಲವಾರು ಶಾಸಕರು ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ. ಸ್ವತಂತ್ರ ಶಾಸಕರ ಸಹಾಯದಿಂದ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ. ಜೆಜೆಪಿ ಶಾಸಕರು ಪಕ್ಷವನ್ನು ತೊರೆದು ಹೋಗಬಹುದು ಎಂಬ ವದಂತಿಯಿದೆ. ಜೋಗಿ ರಾಮ್ ಸಿಹಾಗ್, ರಾಮ್ ಕುಮಾರ್ ಗೌತಮ್, ಈಶ್ವರ್ ಸಿಂಗ್, ರಾಮ್ ನಿವಾಸ್ ಮತ್ತು ದೇವಿಂದರ್ ಬಬ್ಲಿ ಬಿಜೆಪಿ ಸೇರುವ ಸಾಧ್ಯತೆ ಇದೆ.