ಕಾಂಗ್ರೆಸ್ ನ್ಯಾಯ್ | ನಾಲ್ಕು, ಐದನೇ ಗ್ಯಾರಂಟಿ ಘೋಷಿಸಿದ ಮಲ್ಲಿಕಾರ್ಜುನ ಖರ್ಗೆ
x

ಕಾಂಗ್ರೆಸ್ ನ್ಯಾಯ್ | ನಾಲ್ಕು, ಐದನೇ ಗ್ಯಾರಂಟಿ ಘೋಷಿಸಿದ ಮಲ್ಲಿಕಾರ್ಜುನ ಖರ್ಗೆ

ನಾವು ಶ್ರಮಿಕ್ ನ್ಯಾಯ ಮತ್ತು ಭಾಗೀದಾರರ ನ್ಯಾಯಕ್ಕೆ ತಲಾ 5 ಗ್ಯಾರಂಟಿಗಳನ್ನು ಘೋಷಿಸುತ್ತೇವೆ. ಕಾಂಗ್ರೆಸ್ ತನ್ನ ಆರಂಭಿಕ ಕಾಲದಿಂದಲೂ ಕಾರ್ಮಿಕರ ಹಕ್ಕುಗಳನ್ನು ಸತತವಾಗಿ ಪ್ರತಿಪಾದಿಸುತ್ತಾ ಬಂದಿದೆ ಎಂದು ಖರ್ಗೆ ಹೇಳಿದ್ದಾರೆ


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 2024 ರ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಮತ್ತು ಐದನೇ ನ್ಯಾಯ್ ಭರವಸೆಗಳನ್ನು ಘೋಷಣೆ ಮಾಡಿದರು.

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ 63 ದಿನಗಳ ಅವಧಿಯಲ್ಲಿ, ಮಣಿಪುರದಿಂದ ಆರಂಭವಾದ ರಾಹುಲ್ ಗಾಂಧಿ ಜೀ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಮುಂಬೈನಲ್ಲಿ ಮುಕ್ತಾಯಗೊಳ್ಳುತ್ತಿದೆ. ಅವರ ಯಾತ್ರೆಯ ಮೂಲಕ ಕಾಂಗ್ರೆಸ್ ಪಕ್ಷ ಕಿಸಾನ್ ನ್ಯಾಯ್, ಯುವ ನ್ಯಾಯ್ ಮತ್ತು ಮಹಿಳಾ ನ್ಯಾಯ್‌ ಎಂದು 15 ಭರವಸೆಗಳನ್ನು ಘೋಷಿಸಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯ ಮುಖ್ಯ ಉದ್ದೇಶವು ಎಲ್ಲಾ ಭಾರತೀಯರಿಗೆ ಸಾಮಾಜಿಕ ನ್ಯಾಯ, ಅರ್ಥಿಕ ನ್ಯಾಯ ಮತ್ತು ರಾಜಕೀಯ ನ್ಯಾಯ ನೀಡುವುದು ಎಂದು ಅವರು ಹೇಳಿದ್ದಾರೆ.

ಇಂದು ನಾವು ಶ್ರಮಿಕ್ ನ್ಯಾಯ ಮತ್ತು ಭಾಗೀದಾರರ (ಹಿಸ್ಸೆದಾರಿ) ನ್ಯಾಯಕ್ಕೆ ತಲಾ 5 ಗ್ಯಾರಂಟಿಗಳನ್ನು ಘೋಷಿಸುತ್ತೇವೆ. ಕಾಂಗ್ರೆಸ್ ಪಕ್ಷವು ತನ್ನ ಆರಂಭಿಕ ಕಾಲದಿಂದಲೂ ಕಾರ್ಮಿಕರು ಮತ್ತು ಕಾರ್ಮಿಕರ ಹಕ್ಕುಗಳನ್ನು ಸತತವಾಗಿ ಪ್ರತಿಪಾದಿಸಿದೆ. ಕೈಗಾರಿಕಾ ವಿವಾದಗಳ ಕಾಯಿದೆ, ಕಾರ್ಖಾನೆಗಳ ಕಾಯಿದೆ, ಕನಿಷ್ಠ ವೇತನ ಕಾಯಿದೆ, ESI ಕಾಯಿದೆ, EPF ಕಾಯಿದೆ ಮುಂತಾದವುಗಳನ್ನು ಒಳಗೊಂಡಂತೆ ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕರ ಪರಿಸ್ಥಿತಿಗಳನ್ನು ಸುಧಾರಿಸುವ ಗುರಿಯನ್ನು ಸಾಧಿಸಲು ಕಾಂಗ್ರೆಸ್ ಹಲವಾರು ಕಾನೂನುಗಳನ್ನು ಜಾರಿಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ಆದರೆ ಮೋದಿ ಅವರ ಕಳೆದ 10 ವರ್ಷಗಳ ಆಡಳಿತದಲ್ಲಿ ಕಾರ್ಮಿಕರ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. ಮೋದಿ ಸರ್ಕಾರ ನರೇಗಾ ಯೋಜನೆ ಕಾರ್ಮಿಕರ ವೇತನದ ಹಣವನ್ನು ರಾಜ್ಯಗಳಿಗೆ ಈವರೆಗೂ ನೀಡಿಲ್ಲ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ಆದರೆ ನರೇಗಾ ಯೋಜನೆ ಅನುದಾನ ಹಾಗೂ ಬರ ಪರಿಸ್ಥಿತಿಯಲ್ಲಿ ನರೇಗಾ ಯೋಜನೆಯಲ್ಲಿ ಕೂಲಿ ದಿನವನ್ನು 150ಕ್ಕೆ ಏರಿಸುತ್ತಿಲ್ಲ. ಈ ವಿಚಾರವಾಗಿ ನಮ್ಮ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಎಷ್ಟೇ ಮನವಿ ನೀಡಿ ಗೋಗರೆದರೂ ಮೋದಿ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಶ್ರಮಿಕ ನ್ಯಾಯದ ಐದು ಗ್ಯಾರಂಟಿಗಳು

• ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕಾರ್ಮಿಕರಿಗೆ ಆರೋಗ್ಯ ಹಕ್ಕು ಜಾರಿಗೆ ತಂದು ಕಾರ್ಮಿಕರಿಗೆ ಉಚಿತ ಔಷಧಿ, ಚಿಕಿತ್ಸೆ, ಡಯಾಗ್ನೋಸ್ಟಿಕ್ಸ್, ಶಸ್ತ್ರ ಚಿಕಿತ್ಸೆ.

• ನರೇಗಾ ಯೋಜನೆ ಅಡಿಯಲ್ಲಿ ಕೂಲಿಗಾರರ ದಿನಗೂಲಿ ಮೊತ್ತವನ್ನು ದೇಶದಾದ್ಯಂತ 400ಕ್ಕೆ ಏರಿಕೆ.

• ನರೇಗಾ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು ಆ ಮೂಲಕ ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣ ಹಾಗೂ ನಗರಗಳಲ್ಲಿ ಹವಾಮಾನ ವೈಪರಿತ್ಯದ ನಿಯಂತ್ರಣ, ಸಾಮಾಜಿಕ ಸೇವೆಗಳ ಅಂತರ ಕಡಿಮೆ ಮಾಡುವುದು.

• ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ, ಅಪಘಾತ ವಿಮೆಗಳು ಸೇರಿದಂತೆ ಸಾಮಾಜಿಕ ಭದ್ರತೆ ಒದಗಿಸುವುದು.

• ಮೋದ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆದು ಕಾರ್ಮಿಕರ ಹಕ್ಕನ್ನು ಮರುಸ್ಥಾಪನೆ.

ಭಾಗೀದಾರರ ನ್ಯಾಯದ ಐದು ಗ್ಯಾರಂಟಿಗಳು

• ರಾಷ್ಟ್ರ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ನಡೆಸುವ ಮೂಲಕ ದೇಶದ ಸಂಪತ್ತನ್ನು ಸಮಾನವಾಗಿ ಹಂಚಿಕೆ ಮಾಡುವುದು. ಆಡಳಿತದಲ್ಲಿ ಎಲ್ಲಾ ವರ್ಗದವರ ಪ್ರಾತಿನಿಧ್ಯಕ್ಕೆ ಅವಕಾಶ.

• ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಳಕ್ಕೆ ಅಡ್ಡಿಯಾಗಿರುವ ಶೇ.50ರಷ್ಟು ಮಿಸಲಾತಿ ಮಿತಿಯನ್ನು ತಿದ್ದುಪಡಿಗಳ ಮೂಲಕ ಏರಿಕೆ.

• ಆದಿವಾಸಿಗಳಿಗೆ ಅರಣ್ಯ ಹಕ್ಕು ರಕ್ಷಣೆ ಮಾಡಲಾಗುವುದು. ಒಂದು ವರ್ಷದಲ್ಲಿ ಬಾಕಿ ಇರುವ ಅರಣ್ಯ ಹಕ್ಕು ಕಾಯ್ದೆಯ ಬೇಡಿಕೆಯನ್ನು ಪೂರ್ಣಗೊಳಿಸಲಾಗುವುದು. ಇದರ ಜತೆಗೆ ಸಣ್ಣ ಅರಣ್ಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ವಿಸ್ತರಣೆ, ಅರಣ್ಯ ಸಂರಕ್ಷಣೆ ಕಾಯ್ದೆ ಹೆಸರಿನಲ್ಲಿ ಮಾಡಲಾಗಿರುವ ಬಡಕಟ್ಟು ವಿರೋಧಿ ತಿದ್ದುಪಡಿಗಳ ರದ್ದತಿ.

• ಆದಿವಾಸಿಗಳಿಗೆ ಸ್ವಯಂ ಆಡಳಿತ ಹಾಗೂ ಸಂಸ್ಕೃತಿ ರಕ್ಷಣೆ ಹಕ್ಕು.

Read More
Next Story