Loksabha Election Results 2024 | ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹಕ್ಕೆ ತಣ್ಣೀರು
x
ಮಲ್ಲೇಶ್ವರಂನ ಬಿಜೆಪಿ ಪ್ರಧಾನ ಕಚೇರಿಯ ಬಳಿ ಫಲಿತಾಂಶ ವೀಕ್ಷಿಸುತ್ತಿರುವ ಬಿಜೆಪಿ ಕಾರ್ಯಕರ್ತರು

Loksabha Election Results 2024 | ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹಕ್ಕೆ ತಣ್ಣೀರು

ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಈ ಬಾರಿ ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ನಿರಾಶೆಗೆ ಕಾರಣವಾಗಿದೆ


Click the Play button to hear this message in audio format

ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವಂತೆ, ಕರ್ನಾಟಕದಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಕಾಂಗ್ರೆಸ್ 10 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 16ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜೆಡಿಎಸ್​​ 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಸಾಕಷ್ಟು ಸ್ಥಾನಗಳನ್ನು ಕಳೆದುಕೊಂಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ನಿರಾಶೆ ಮೂಡಿಸಿದೆ.

ಮತ ಎಣಿಕೆಯಲ್ಲಿ ಎನ್‌ಡಿಎ ಮುನ್ನಡೆ ಸಾಧಿಸುತ್ತಿದ್ದರೂ ಬಿಜೆಪಿ ನಿರೀಕ್ಷೆ ಮಾಡಿದಷ್ಟು ಲೀಡ್‌ನಲ್ಲಿ ಇಲ್ಲ. ಬಿಜೆಪಿ ಏಕಾಂಕಿಯಾಗಿ ಮೂನ್ನೂರಕ್ಕೂ ಹೆಚ್ಚು ಸ್ಥಾನವನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿತ್ತು. ಆದರೆ ಬಿಜೆಪಿಯ ಮ್ಯಾಜಿಕ್‌ ನಂಬರ್‌ (272) ಮುಟ್ಟುವ ಲಕ್ಷಣಗಳು ಕಾಣುತ್ತಿಲ್ಲ. ಬಿಜೆಪಿಗೆ ನಿರೀಕ್ಷಿತ ಬಹುಮತ ಸಿಗದೆ ಇರುವ ವರದಿಗಳು ಬರುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಬಿಜೆಪಿ ಕಾರ್ಯಕರ್ತರ ಉತ್ಸಾಹ ಕುಸಿಯುತ್ತಿದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಬಿಜೆಪಿ 234 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ಮ್ಯಾಜಿಕ್‌ ನಂಬರ್‌ 272ಕ್ಕಿಂತ 36 ಹಿಂದುಳಿದಿದೆ. ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳ ಬಲದ ಮೇಲೆ ಬಿಜೆಪಿ ಸರಕಾರ ರಚಿಸುವಲ್ಲಿ ಯಶಸ್ವಿಯಾದರೂ ಕಳೆದ ಎರಡು ಅವಧಿಯಂತೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಣ್ಣ ಪಕ್ಷಗಳ ಒತ್ತಡಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಈ ಫಲಿತಾಂಶ ಖುಷಿ ತಂದಿಲ್ಲ.

ಅಂಗಡಿ ಬಂದ್‌, ಸಂಚಾರ ವಿರಳ

ಇನ್ನು ಬಿಜೆಪಿ ರಾಜ್ಯ ಪ್ರಧಾನ ಕಚೇರಿ ಇರುವ ಮಲ್ಲೇಶ್ವರಂ ಭಾಗದಲ್ಲಿನ ಬಹುತೇಕ ಅಂಗಡಿಗಳು ಬಂದ್ ಆಗಿವೆ. ವಾಹನ ಸಂಚಾರ ಕೂಡ ಬಹಳಷ್ಟು ವಿರಳವಾಗಿದೆ. ಇಂದು ಮತಎಣಿಕೆ ನಡೆಯುತ್ತಿರುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗೃತ ಕ್ರಮವಾಗಿ ಈ ಭಾಗದಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ. ವಾಹನಗಳು ಕೂಡ ಬಹಳಷ್ಟು ವಿರಳವಾಗಿದ್ದು, ಪೊಲೀಸ್‌ ಬಂದೂವಸ್ತ್‌ ಅನ್ನೂ ಮಾಡಲಾಗಿದೆ.

ಕಾಂಗ್ರೆಸ್‌ ವಲದಯಲ್ಲೂ ಉತ್ಸಾಹವಿಲ್ಲ

ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್‌ ಬರೋಬ್ಬರಿ 20 ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಟಾರ್ಗೆಟ್‌ ನೀಡಿತ್ತು. ರಾಜ್ಯ ಕಾಂಗ್ರೆಸ್‌ ನಾಯಕರು ಕನಿಷ್ಠ 15 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದರು. ಆದರೆ, ಸದ್ಯ ಕಾಂಗ್ರೆಸ್‌ ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ ಕೇವಲ 9 ಕಡೆ ಮಾತ್ರ ಗೆಲುವು ಪಡೆಯುವುದು ನಿಚ್ಛಳವಾಗಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ವಲಯದಲ್ಲಿಯೂ ಹೆಚ್ಚಿನ ಉತ್ಸಾಹ ಕಾಣಿಸುತ್ತಿಲ್ಲ.

ಕೆಪಿಸಿಸಿ ಕಚೇರಿ ಬೆಳಿಗ್ಗೆ ಮತ ಎಣಿಕೆ ಆರಂಭದ ಹೊತ್ತಿಗೆ ಬಿಕೋ ಎನ್ನುತ್ತಿತ್ತು. ಮಧ್ಯಾಹ್ನದ ಬಳಿಕ ರಾಷ್ಟ್ರಮಟ್ಟದಲ್ಲಿ ಪಕ್ಷ ಮತ್ತು ಅದರ ಇಂಡಿಯಾ ಮೈತ್ರಿಕೂಟ ಉತ್ತಮ ಸ್ಥಾನಗಳನ್ನು ಗಳಿಸಿದ ಹಿನ್ನೆಲೆಯಲ್ಲಿ ಕ್ರಮೇಣ ಕಚೇರಿಯ ಆವರಣದಲ್ಲಿ ಕಾರ್ಯಕರ್ತರು, ಮುಖಂಡರು ಆಗಮಿಸತೊಡಗಿದ್ದಾರೆ.

Read More
Next Story