ಲೋಕಸಭೆ ಚುನಾವಣೆ 2024 |   ಕರ್ನಾಟಕದಲ್ಲಿ ಮುಟ್ಟುಗೋಲಾದ ಅಕ್ರಮ ಹಣವೆಷ್ಟು?
x
ಚುನಾವಣಾ ಅಕ್ರಮ ಕೋಟ್ಯಾಂತರ ರೂಪಾಯಿ ವಶಕ್ಕೆ

ಲೋಕಸಭೆ ಚುನಾವಣೆ 2024 | ಕರ್ನಾಟಕದಲ್ಲಿ ಮುಟ್ಟುಗೋಲಾದ ಅಕ್ರಮ ಹಣವೆಷ್ಟು?

ಕರ್ನಾಟಕ ಲೋಕಸಭೆ ಚುನಾವಣೆಗೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಹಂತದಲ್ಲಿ ಕರ್ನಾಟಕದ ಪೊಲೀಸರು, ಕಣ್ಗಾವಲು ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳಿಂದ ಕೋಟ್ಯಾಂತರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.


ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಅಂದರೆ, ಮಾರ್ಚ್ 16ರಿಂದ ಏಪ್ರಿಲ್ 22ರ ವರೆಗೆ ಬರೋಬ್ಬರಿ ಕರ್ನಾಟಕದಲ್ಲಿ 430.61 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 23.88 ಕೋಟಿ ಅಕ್ರಮ ಎಂದು ತನಿಖೆಯಿಂದ ಅಧಿಕೃತವಾಗಿದ್ದು, ಬಾಕಿ ಮೊತ್ತದ ಬಗ್ಗೆ ತನಿಖೆ ಮುಂದುವರಿದಿದೆ.

ಈ ಬಾರಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಮೇಲೆ ಭಾರೀ ಮೊತ್ತದ ನಗದು, ಚಿನ್ನ, ಬೆಳ್ಳಿ, ಮಾದಕ ದ್ರವ್ಯ, ಉಚಿತ ಉಡುಗೊರೆ ಹಾಗೂ ವಜ್ರ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹಂತದಲ್ಲಿ ಅಕ್ರಮ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.

ವಿಜಯನಗರ ಹಡಗಲಿ ಪೊಲೀಸ್ ತಂಡದಿಂದ 12.17 ಲಕ್ಷ ರೂಪಾಯಿ ನಗದು ಮತ್ತು 2.50 ಲಕ್ಷ ಮೌಲ್ಯದ 28 ಗ್ರಾಂ 5 (milli) ಚಿನ್ನ ಸೇರಿದಂತೆ ಒಟ್ಟು 14.67 ಲಕ್ಷ ರೂಪಾಯಿ ವಶ ಪಡಿಸಿಕೊಳ್ಳಲಾಗಿದೆ. ಸ್ಥಿರ ಕಾಣ್ಗಾವಲು ತಂಡದಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ, ರಾಮನಗರ ಜಿಲ್ಲೆ ವ್ಯಾಪ್ತಿಯ ಗಂಟಕನದೊಡ್ಡಿ ಚೆಕ್‌ಪೋಸ್ಟ್‌ನಲ್ಲಿ 23.11 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರ, ಮೈಸೂರು ಜಿಲ್ಲೆಯ ಮಡವಾಡಿ ಚೆಕ್‌ಪೋಸ್ಟ್‌ ವ್ಯಾಪ್ತಿಯಲ್ಲಿ 13.18 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ.

ಆದಾಯ ತೆರಿಗೆ ಇಲಾಖೆಯಿಂದ 1,29,24,959 ರೂಪಾಯಿ ಮೌಲ್ಯದ 1,839.59 ಗ್ರಾಂ ಚಿನ್ನವನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಸವನಗುಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಶಂಕರಪುರದಲ್ಲಿ 4413.66 (grams) ಗ್ರಾಂ ಚಿನ್ನದ (3,10,10,375 ರೂ) ವಶಪಡಿಸಿಕೊಳ್ಳಲಾಗಿದ್ದು, ಇದೇ ರೀತಿ ರಾಜ್ಯದ ಹಲವು ಭಾಗದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರ ಹಾಗೂ ಎರಡನೇ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯುವ 14 ಲೋಕಸಭಾ ಕ್ಷೇತ್ರ ಸೇರಿದಂತೆ ಒಟ್ಟಾರೆ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿದೆ.

ಸಾರ್ವಜನಿಕರಿಂದ ದೂರು ದಾಖಲು

ಸಾರ್ವಜನಿಕರು ಸಹ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಿದ್ದಾರೆ. ಚುನಾವಣಾ ಆಯೋಗಕ್ಕೆ ಮತದಾರರ ಸಹಾಯವಾಣಿಯ ಮೂಲಕ 27,735 ಕರೆಗಳು ಬಂದಿದ್ದು, ಇದರಲ್ಲಿ 27,472 ಜನ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. 35 ಜನ ಚುನಾವಣಾ ಆಯೋಗದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ್ದು, 32 ಮತದಾರರು ಸಲಹೆ ನೀಡಿದ್ದಾರೆ. 196 ಜನ ಚುನಾವಣಾ ಅಕ್ರಮ ಹಾಗೂ ಚುನಾವಣೆ ಪ್ರಕ್ರಿಯೆಯಲ್ಲಿ ಲೋಪಗಳ ಬಗ್ಗೆ ದೂರು ದಾಖಲಿಸಿದ್ದಾರೆ. ಎನ್‌ಜಿಆರ್‌ಎಸ್‌ (NGRS) ಪೋರ್ಟಲ್‌ನಲ್ಲಿ 16,618 ಜನ ದೂರು ದಾಖಲಿಸಿದ್ದು, ಅದರಲ್ಲಿ 16,139 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಸಿವಿಜಿಲ್

ಸಿವಿಜಿಲ್ (CVIGIL) ಅಪ್ಲಿಕೇಶನ್ ಮೂಲಕ 27,284 ದೂರುಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ 16,101 ದೂರುಗಳು ಅನುಮತಿ ಇಲ್ಲದೆ ಅಂಟಿಸಲಾಗಿದ್ದ ಪೋಸ್ಟರ್‌ಗಳು, ಬ್ಯಾನರ್‌ಗಳಿಗೆ ಸಂಬಂಧಿಸಿವೆ. ಆಸ್ತಿ ವಿರೂಪಗೊಳಿಸಿರುವುದಕ್ಕೆ ಸಂಬಂಧಿಸಿದಂತೆ 332 ಪ್ರಕರಣ, ಹಣವಿತರಣೆ 189, ಉಡುಗೊರೆ, ಕೂಪನ್‌ಗಳ ವಿತರಣೆ 129, ನಿಷೇಧದ ಅವಧಿಯಲ್ಲಿ ಪ್ರಚಾರ ಮಾಡಿದ ಆರೋಪದ ಮೇಲೆ 54 ಪ್ರಕರಣ, ಮದ್ಯಹಂಚಿಕೆಗೆ ಸಂಬಂಧಿಸಿದಂತೆ 150 ಪ್ರಕರಣ, ಅನುಮತಿಯಿಲ್ಲದ ವಾಹನ ಬೆಂಗಾವಲು ಬಳಸಿದಕ್ಕೆ ಸಂಬಂಧಿಸಿದಂತೆ 101, ಧಾರ್ಮಿಕ ಅಥವಾ ಸಮುದಾಯಿಕ ಭಾಷಣಗಳು,ಸಂದೇಶಗಳನ್ನು ಹಂಚಿಕೊಂಡಿದ್ದಕ್ಕೆ ಸಂಬಂಧಿಸಿದಂತೆ 63, ಬಂದೂಕುಗಳ ಪ್ರದರ್ಶನ ಬೆದರಿಕೆವೊಡ್ಡಿದಕ್ಕೆ ಸಂಬಂಧಿಸಿದಂತೆ 54 ಪ್ರಕರಣ ಹಾಗೂ ಇತರೆ 25,750 ದೂರುಗಳು ದಾಖಲಾಗಿದ್ದು, ಈ ಪ್ರಕರಣಗಳನ್ನು ತನಿಖೆ ನಡೆಸಿ, ನಿಖರವಾದ ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಮಾಧ್ಯಮಗಳ ಮೂಲಕ ದೂರು

ಚುನಾವಣಾ ಆಯೋಗಕ್ಕೆ ಮಾಧ್ಯಮಗಳ ಮೂಲಕವೂ ದೂರು ದಾಖಲಾಗಿವೆ. ಇಮೇಲ್ ಮೂಲಕ 255 ದೂರುಗಳನ್ನು ಸ್ವೀಕರಿಸಲಾಗಿದೆ. ಪತ್ರಗಳ ಮೂಲಕ 731 ದೂರು, ಸುದ್ದಿ ಪತ್ರಿಕೆಗಳ ಮೂಲಕ 32 ದೂರುಗಳು, ಟಿವಿ ಚಾನೆಲ್‌ಗಳ ಮೂಲಕ 44 ದೂರು ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮ ಮೂಲಕ 67 ದೂರುಗಳು ಸೇರಿದಂತೆ ಒಟ್ಟು 1,129 ದೂರುಗಳ ಪೈಕಿ 1,129 ದೂರುಗಳನ್ನು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗಿದೆ. ಇನ್ನು ಸುವಿಧಾ ಅಡಿಯಲ್ಲಿ ಅನುಮತಿಗಳಿಗಾಗಿ 8,511 ಅರ್ಜಿಗಳು ಸ್ವೀಕರಿಸಲಾಗಿದ್ದು, ಅದರಲ್ಲಿ 6,773 ಅರ್ಜಿಗಳನ್ನು ಅಂಗೀಕರಿಸಲಾಗಿದೆ ಮತ್ತು 1,197 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 26 ಅರ್ಜಿಗಳು ಪುಗತಿಯಲ್ಲಿದ್ದು, 187 ಅರ್ಜಿಗಳು ಬಾಕಿ ಉಳಿದಿವೆ ಮತ್ತು 328 ಅರ್ಜಿಗಳನ್ನು ರದ್ದು ಮಾಡಲಾಗಿದೆ.

ದಾಖಲಾದ ಪ್ರಕರಣಗಳ ವಿವರ

ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ (Freebies) ಸೇರಿದಂತೆ ವಿವಿಧ ವಸ್ತುಗಳನ್ನು ಕ್ಷಿಪ್ರಪಡೆಗಳು (FS), ಸ್ಥಿರ ಕಣಾವಲು ತಂಡಗಳು (SST) ಮತ್ತು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 2,049 ಎಫ್ಐಆರ್ಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆ ವತಿಯಿಂದ 2,889 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಪರವಾನಗಿ ಉಲ್ಲಂಘನೆ ಆರೋಪದ ಮೇಲೆ 4,435 ಪ್ರಕರಣ, ಎನ್‌ಡಿ ಪಿಎಸ್ (Narcotic Drugs and Psychotropic Substances Act) ಅಡಿಯಲ್ಲಿ 172 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15(a) ಅಡಿಯಲ್ಲಿ 25,692 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 1,801 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

Read More
Next Story