ದೇವೇಗೌಡರು ತಮ್ಮ ಪಕ್ಷದ ಅಸ್ತಿತ್ವದ ಬಗ್ಗೆ ಭವಿಷ್ಯ ನುಡಿಯಲಿ: ಡಿಕೆಶಿ ತಿರುಗೇಟು
x

ದೇವೇಗೌಡರು ತಮ್ಮ ಪಕ್ಷದ ಅಸ್ತಿತ್ವದ ಬಗ್ಗೆ ಭವಿಷ್ಯ ನುಡಿಯಲಿ: ಡಿಕೆಶಿ ತಿರುಗೇಟು


ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಮ್ಮ ಸರಕಾರದ ಅಸ್ತಿತ್ವದ ಬಗ್ಗೆ ಭವಿಷ್ಯ ನುಡಿಯುವುದಕ್ಕಿಂತ, ಅವರ ಪಕ್ಷದ ಅಸ್ತಿತ್ವದ ಬಗ್ಗೆ ಭವಿಷ್ಯ ನುಡಿಯಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಶನಿವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ದೇವೇಗೌಡ ಅವರುರಾಜ್ಯ ಸರಕಾರಕ್ಕೆ ಗ್ಯಾರಂಟಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಕೆಶಿ, ʻʻದೇವೇಗೌಡರು ಎಷ್ಟು ಭವಿಷ್ಯ ಕಾಲವನ್ನು ನೋಡಿದ್ದಾರೊ ನಾನು ಅಷ್ಟೇ ಭವಿಷ್ಯ ಕಾಲವನ್ನು ನೋಡಿದ್ದೇನೆ. ಅವರಿಗೆ 60 ವರ್ಷಗಳ ರಾಜಕೀಯದ ಅನುಭವವಿದ್ದರೆ, ನನಗೆ 40 ವರ್ಷಗಳ ರಾಜಕಾರಣದ ಅನುಭವವಿದೆ. 136ಕ್ಕೂ ಹೆಚ್ಚು ಸೀಟುಗಳು ನಮ್ಮ ಸರಕಾರದ ಬಳಿ ಇವೆ. ಅವರು ತಮ್ಮ ಪಕ್ಷ ಜೀವಂತವಾಗಿ ಇರುತ್ತದೆಯೋ ಇಲ್ಲವೋ ಎಂಬುದನ್ನು ಮೊದಲು ಹೇಳಲಿʼʼ ಎಂದು ತಿರುಗೇಟು ನೀಡಿದ್ದಾರೆ.

ʻʻಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗುತ್ತದೆಯೋ ಅಥವಾ ತನ್ನದೇ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲಿದೆಯೋ ಎಂಬುದರ ಬಗ್ಗೆ ಜನರಿಗೆ ತಿಳಿಸಿಲಿ. ಅವರೇ ಕಟ್ಟಿದ ಪಕ್ಷ ಹಾಗೂ ಅದರ ಬಗ್ಗೆ ಅವರ ನಿಷ್ಠೆಯನ್ನು ನಾನು ಪ್ರಶ್ನೆ ಮಾಡುವುದಿಲ್ಲ. ನಮ್ಮ ಸರಕಾರದ ಅಸ್ತಿತ್ವ ಪಕ್ಕಕ್ಕಿರಲಿ, ಅವರ ಪಕ್ಷದ ಅಸ್ತಿತ್ವವೇ ಈಗ ಇಲ್ಲವಲ್ಲʼʼ ಎಂದರು.

ಅಂಬೇಡ್ಕರ್ ಅವರೇ ಬಂದರೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ʻʻಪ್ರಧಾನಮಂತ್ರಿ ಸ್ಥಾನದ ಬಗ್ಗೆ ನಮಗೆ ಬಹಳ ಗೌರವವಿದೆ. ಈ ವಿಚಾರವಾಗಿ ಈಗ ಯಾಕೆ ಮಾತನಾಡುತ್ತಿದ್ದಾರೆಯೋ ಗೊತ್ತಿಲ್ಲ. ಸಂವಿಧಾನ ಬದಲಿಸುತ್ತೇವೆ ಎಂದ ಅವರ ಪಕ್ಷದ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಏಕೆ ಮಾಡಲಿಲ್ಲ?ʼʼ ಎಂದು ಪ್ರಶ್ನಿಸಿದರು.

ʻʻಪ್ರಧಾನಿ ಮೋದಿಗೆ ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದವರನ್ನು ಮೊದಲು ತಮ್ಮ ಪಕ್ಷದಿಂದ ಉಚ್ಛಾಟಿಸಲಿ. ಆಗ ಅವರ ಬದ್ಧತೆಯನ್ನು ನಾವು ಒಪ್ಪಬಹುದು. ಈಗ ಚುನಾವಣೆ ಬಂದಿದೆ ಎಂದು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ನಾವು ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇವೆ. ಬಿಜೆಪಿಗೆ 400 ಸೀಟು ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದೆಲ್ಲಾ ಅವರ ಪಕ್ಷದ ನಾಯಕರು, ಅಭ್ಯರ್ಥಿಗಳು ಹೇಳುತ್ತಿದ್ದಾರೆʼʼ ಎಂದು ಶಿವಕುಮಾರ್ ತಿಳಿಸಿದರು.

Read More
Next Story