ಕೇರಳ| ಆಡಳಿತ ವಿರೋಧಿ ಅಲೆ ನಿಭಾಯಿಸಲು ಎಡ ರಂಗ ಪಣ: ಬಲವರ್ಧನೆಗೆ ಕಾಂಗ್ರೆಸ್‌ ಪ್ರಯತ್ನ
x

ಕೇರಳ| ಆಡಳಿತ ವಿರೋಧಿ ಅಲೆ ನಿಭಾಯಿಸಲು ಎಡ ರಂಗ ಪಣ: ಬಲವರ್ಧನೆಗೆ ಕಾಂಗ್ರೆಸ್‌ ಪ್ರಯತ್ನ

2018 ರಲ್ಲಿ ಶಬರಿಮಲೆ ವಿವಾದದಿಂದ ಉಂಟಾದ ಹಿಂದೂ ಸಮುದಾಯದ ಅಸಮಾಧಾನದ ಜೊತೆಗೆ ಕಾಂಗ್ರೆಸ್‌ನ ಹಿಂದೆ ಅಲ್ಪಸಂಖ್ಯಾತ ಮತಗಳು ಒಟ್ಟುಗೂಡಿದ್ದರಿಂದ, ಎಡಪಂಥೀಯ ಪಕ್ಷಗಳಿಗೆ ಭಾರೀ ಹಿನ್ನಡೆಯಾಗಿತ್ತು


2019 ರ ಲೋಕಸಭೆ ಚುನಾವಣೆಯಲ್ಲಿ ತನ್ನ ನಾಲ್ಕು ಭದ್ರಕೋಟೆಗಳನ್ನು ಕಳೆದುಕೊಂಡ ಸಿಪಿಐ(ಎಂ), ಕೇವಲ ಒಂದು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 2018 ರಲ್ಲಿ ಶಬರಿಮಲೆ ವಿವಾದದಿಂದ ಉಂಟಾದ ಹಿಂದೂ ಸಮುದಾಯದ ಅಸಮಾಧಾನದ ಜೊತೆಗೆ ಕಾಂಗ್ರೆಸ್‌ನ ಹಿಂದೆ ಅಲ್ಪಸಂಖ್ಯಾತ ಮತಗಳು ಒಟ್ಟುಗೂಡಿದ್ದರಿಂದ ಎಡಪಂಥೀಯ ಪಕ್ಷಗಳಿಗೆ ಭಾರೀ ಹಿನ್ನಡೆಯಾಗಿತ್ತು.

ಕಳೆದ ಚುನಾವಣೆಗಳವರೆಗೆ ಅಟ್ಟಿಂಗಲ್, ಆಲತ್ತೂರ್, ಪಾಲಕ್ಕಾಡ್ ಮತ್ತು ಕಾಸರಗೋಡುಗಳು ಸಿಪಿಐ(ಎಂ)ನ ಭದ್ರಕೋಟೆಗಳಾಗಿದ್ದವು. ಅದರಲ್ಲೂ, ಬಾಬರಿ ಮಸೀದಿ ಧ್ವಂಸದ ನಂತರ ಈ ಯಾವುದೇ ಸ್ಥಾನಗಳನ್ನು ಪಕ್ಷವು ಬಿಟ್ಟುಕೊಟ್ಟಿರಲಿಲ್ಲ.

ಈ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. 1990 ರ ದಶಕದ ಆರಂಭದಿಂದಲೂ ಸಿಪಿಐ(ಎಂ) ಅಲ್ಪಸಂಖ್ಯಾತರ ಬೆಂಬಲ ಗಳಿಸುತ್ತಾ ಬಂದಿತ್ತು. ಅದರಲ್ಲೂ ಮಲಬಾರ್ ಪ್ರದೇಶದ ಕ್ಷೇತ್ರಗಳಿಗೆ ಹೋಲಿಸಿದರೆ, ಈ ಪ್ರದೇಶಗಳಲ್ಲಿ ಎರಡು ಕಾಸರಗೋಡು ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಮುಸ್ಲಿಂ ಲೀಗ್‌ (ಐಯುಎಂಎಲ್‌) ಪ್ರಭಾವ ಗಣನೀಯವಾಗಿ ಕಡಿಮೆ ಇದೆ.

2019ರಲ್ಲಿ ಆಲತ್ತೂರ್ ಸೋಲು:

2019 ರ ಲೋಕಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ಅತ್ಯಂತ ಹೀನಾಯ ಸೋಲನ್ನು ಆಲತ್ತೂರಿನಲ್ಲಿ ಅನುಭವಿಸಿತು. ಆಗಿನ ಸಂಸದ ಮತ್ತು ಪ್ರಮುಖ ಯುವ ನಾಯಕ ಪಿ.ಕೆ. ಬಿಜು ಅವರು ಕಾಂಗ್ರೆಸ್‌ನ 33 ವರ್ಷದ ರಮ್ಯಾ ಹರಿದಾಸ್ ವಿರುದ್ಧ ಭರ್ಜರಿ 1,58,968 ಮತಗಳ ಅಂತರದಲ್ಲಿ ಸೋತಿದ್ದರು. ಈ ಕಾರಣಕ್ಕಾಗಿಯೇ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರಕ್ಕೆ ಅತ್ಯಂತ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷ ಪ್ರಯತ್ನಿಸುತ್ತಿದೆ. ಸಚಿವ ಕೆ. ರಾಧಾಕೃಷ್ಣನ್ ಅವರನ್ನು ಈ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ.

ಪಾಲಕ್ಕಾಡ್‌ನಲ್ಲಿ ಪಾಲಿಟ್‌ಬ್ಯೂರೋ ಸದಸ್ಯ ಎ.ವಿಜಯರಾಘವನ್ ಮತ್ತು ಅಟ್ಟಿಂಗಲ್‌ನಲ್ಲಿ ತಿರುವನಂತಪುರಂ ಜಿಲ್ಲಾ ಕಾರ್ಯದರ್ಶಿ ಮತ್ತು ವರ್ಕಳ ಹಾಲಿ ಶಾಸಕ ವಿ. ಜಾಯ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಈಳವ ಮತಗಳ ಪ್ರಾಮುಖ್ಯತೆ:

ಶಬರಿಮಲೆ ವಿವಾದದಿಂದಾಗಿ ಸಿಪಿಐ(ಎಂ) ತನ್ನ ಪ್ರಧಾನ ಮತದಾರರಾಗಿದ್ದ ಈಳವ ಸಮುದಾಯದ ಹಿಂದೂ ಮತಗಳನ್ನು ಅಟ್ಟಿಂಗಲ್ ಕ್ಷೇತ್ರದಲ್ಲಿ ಕಳೆದುಕೊಂಡಿತು. ಬಿಜೆಪಿ ಈ ಕ್ಷೇತ್ರದಲ್ಲಿ ಗಣನೀಯವಾಗಿ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ.

ಅಟ್ಟಿಂಗಲ್ ಕ್ಷೇತ್ರಕ್ಕೆ ಒಳಪಡುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಿಪಿಐ(ಎಂ) ಗೆಲುವು ಸಾಧಿಸಿದ್ದರೂ, ಸಾರ್ವತ್ರಿಕ ಚುನಾವಣೆಯಲ್ಲಿ ಇದು ಸುಲಭದ ಕೆಲಸವಲ್ಲ. ಅದರಲ್ಲೂ, ಕೇಂದ್ರ ಸಚಿವ ವಿ. ಮುರಳೀಧರನ್ ಅವರನ್ನು ಕಣಕ್ಕಿಳಿಸುವ ಬಿಜೆಪಿಯ ಉದ್ದೇಶವನ್ನು ಎಡಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ. ಅಲ್ಲದೆ, ಹಾಲಿ ಶಾಸಕ ಕಾಂಗ್ರೆಸ್‌ನ ಅಡೂರ್ ಪ್ರಕಾಶ್ ಅವರು ಈಳವ ಮತಬ್ಯಾಂಕ್‌ನಲ್ಲಿ ಗಮನಾರ್ಹ ಪ್ರಭಾವ ಹೊಂದಿದ್ದಾರೆ.

ಇನ್ನೊಂದೆಡೆ, ಪಕ್ಷದ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್, ಕಾಸರಗೋಡು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಜಮೋಹನ್ ಉನ್ನಿಥಾನ್ ವಿರುದ್ಧ ಸ್ಪರ್ಧಿಸಲಿದ್ದಾರೆ.

ಈ ಕ್ಷೇತ್ರಗಳನ್ನು ಹೊರತುಪಡಿಸಿ ಮಲಬಾರ್ ಪ್ರದೇಶದಲ್ಲಿ ವಡಕಾರ, ಕೋಯಿಕ್ಕೋಡ್ ಮತ್ತು ಕಣ್ಣೂರು ಸ್ಥಾನಗಳನ್ನು ಮರಳಿ ಪಡೆಯುವತ್ತ ಸಿಪಿಐ(ಎಂ) ಗಮನಹರಿಸಿದೆ. ಇದಲ್ಲದೆ, ಕೆ.ಕೆ. ಶೈಲಜಾ, ಎಳಮರಮ್ ಕರೀಂ, ಎಂ.ವಿ. ಜಯರಾಜನ್ ಮತ್ತು ಟಿ.ಎಂ. ಥಾಮಸ್ ಇಸಾಕ್ ಅವರಂತಹ ಹಿರಿಯ ನಾಯಕರನ್ನು ನಾಮನಿರ್ದೇಶನ ಮಾಡುವ ಮೂಲಕ ಪತ್ತನಂತಿಟ್ಟ ಸ್ಥಾನವನ್ನು ಕಸಿದುಕೊಳ್ಳುವ ಗುರಿ ಹೊಂದಿದೆ.

ಆಡಳಿತ ವಿರೋಧಿ ಅಲೆ:

ಮತದಾರರಲ್ಲಿ ವ್ಯಾಪಕವಾದ ಆಡಳಿತ ವಿರೋಧಿ ಭಾವನೆ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗಕ್ಕೆ (ಎಲ್‌ಡಿಎಫ್) ಮಹತ್ವದ ಸವಾಲನ್ನು ಒಡ್ಡಿದೆ. ಹೆಚ್ಚಿನ ಚುನಾವಣಾಪೂರ್ವ ಸಮೀಕ್ಷೆಗಳು ಪಿಣರಾಯಿ ವಿಜಯನ್ ಮತ್ತು ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯನ್ನು ಸೂಚಿಸುತ್ತವೆ. ಆದರೆ, ಕೆಲವು ಸಮೀಕ್ಷೆಗಳು ಎಲ್‌ಡಿಎಫ್ ಸೀಟುಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗಬಹುದು ಎಂದು ಸೂಚಿಸುತ್ತವೆ.

ರಾಜ್ಯದಲ್ಲಿ ಹಣಕಾಸಿನ ಬಿಕ್ಕಟ್ಟಿನಿಂದ ಉಂಟಾದ ನಾಗರಿಕರ ಅಸಮಾಧಾನವು ಆಡಳಿತ ವಿರೋಧಿ ಅಲೆಗೆ ಮತ್ತಷ್ಟು ಸವಾಲನ್ನು ಒಡ್ಡಿದೆ. ಎಡಪಂಥೀಯ ಪಕ್ಷಗಳು ಪ್ರತಿಪಾದಿಸಿದ ಕಲ್ಯಾಣ ಉಪಕ್ರಮಗಳು ಆರ್ಥಿಕ ಹಿಂಜರಿತದಿಂದ ತೀವ್ರ ಪರಿಣಾಮ ಎದುರಿಸಿದ್ದು, ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆಯಿಂದ ತತ್ತರಿಸಿವೆ.

ಕೇಂದ್ರಕ್ಕೆ ಗುರಿ:

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷದ ನಾಯಕತ್ವವು ರಾಜ್ಯದ ಬಗೆಗಿನ ಕೇಂದ್ರದ ಸೇಡಿನ ನಿಲುವಿನ ವಿರುದ್ಧ ಜನರನ್ನು ಒಗ್ಗೂಡಿಸಿ, ಚುನಾವಣಾ ಪ್ರಚಾರದ ಕೇಂದ್ರ ಬಿಂದುವನ್ನಾಗಿಸುವ ಮೂಲಕ ತನ್ನ ಪರವಾಗಿ ಅಲೆಯನ್ನು ತಿರುಗಿಸುವ ಯೋಜನೆಯನ್ನು ರೂಪಿಸುತ್ತಿದೆ.

ʻಕೇಂದ್ರ ಸರ್ಕಾರವು ಹೇರಿರುವ ಹಣಕಾಸಿನ ನಿರ್ಬಂಧಗಳನ್ನು ಗಮನಿಸಿದರೆ, ಆಡಳಿತ ವಿರೋಧಿಯನ್ನು ಎದುರಿಸುವುದು ಅನಿವಾರ್ಯವಾಗಿದೆ. ಇದು ನಮ್ಮ ಪಕ್ಷಕ್ಕೆ ಸಂಪೂರ್ಣವಾಗಿ ತಿಳಿದಿದೆ. ನಾವು ಇದನ್ನು ಮತದಾರರಿಗೆ ತಿಳಿಸಲು ಪ್ರಯತ್ನಿಸುತ್ತಿದ್ದೇವೆ; ಅವರು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ. ಬಿಜೆಪಿ ಸರ್ಕಾರದ ಕಾರ್ಯವೈಖರಿ ಹಿಂದೆಂದೂ ಕಾಣದ ರೀತಿಯಲ್ಲಿ ರಾಜ್ಯವನ್ನು ಉಸಿರುಗಟ್ಟಿಸಿದೆ. ಇದು ನಮಗೆ ಮಾತ್ರವಲ್ಲ; ಬಿಜೆಪಿಯೇತರ ಆಡಳಿತದ ಹಲವು ರಾಜ್ಯಗಳು ಇದೇ ರೀತಿಯ ಒತ್ತಡವನ್ನು ಎದುರಿಸುತ್ತಿವೆ,ʼ ಎಂದು ಸರ್ಕಾರದ ಭಾಗವಾಗಿರುವ ಸಿಪಿಐ(ಎಂ) ನಾಯಕರೊಬ್ಬರು ತಿಳಿಸಿದ್ದಾರೆ.

ದೆಹಲಿಯಲ್ಲಿ ಪಿಣರಾಯಿ ಅವರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಬಿಜೆಪಿಯೇತರ ರಾಜ್ಯಗಳ ನಾಯಕರು ಭಾಗವಹಿಸಿ, ವ್ಯಾಪಕ ಚರ್ಚೆ ನಡೆದಿರುವುದು ಸಿಪಿಐ(ಎಂ) ಗೆ ಗಮನಾರ್ಹ ಆಶಾವಾದವನ್ನು ಉಂಟುಮಾಡಿದೆ.

ಅಲ್ಪಸಂಖ್ಯಾತರ ಬೆಂಬಲ:

ಯಾವುದೇ ಅನುಕೂಲಕರ ಪರಿಸ್ಥಿತಿಗಳಿಲ್ಲದ ಕಾರಣ, ಎಡ ರಂಗ ಅಲ್ಪಸಂಖ್ಯಾತ ಸಮುದಾಯದ, ವಿಶೇಷವಾಗಿ ಮುಸ್ಲಿಮರ, ಬೆಂಬಲವನ್ನು ಹೆಚ್ಚು ಅವಲಂಬಿ ಸಿದೆ. ಚುನಾವಣಾ ದತ್ತಾಂಶಗಳು ಮತ್ತು 2019 ರ ಸಿಎಎ ವಿರೋಧಿ ಪ್ರತಿಭಟನೆಗಳ ನಂತರ ಕೇರಳ ಮುಸ್ಲಿಮರಲ್ಲಿ ಮತದಾನದ ಪ್ರವೃತ್ತಿ ಎಲ್ಡಿಎಫ್ ಕಡೆಗೆ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತವೆ.

2020ರ ಎಲ್‌ಎಸ್‌ಜಿ (ಸ್ಥಳೀಯ ಸ್ವಯಂ ಸರ್ಕಾರ) ಚುನಾವಣೆಗಳಲ್ಲಿ ಎಲ್‌ಡಿಎಫ್‌ನ ಗಣನೀಯ ವಿಜಯ ಮತ್ತು 2021 ರ ವಿಧಾನಸಭೆ ಚುನಾವಣೆಯಲ್ಲಿ ಅದರ ಐತಿಹಾಸಿಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ.

ʻಇತ್ತೀಚಿನ ವರ್ಷಗಳಲ್ಲಿ ಕೇರಳದ ಯುಡಿಎಫ್ ಸಂಘ ಪರಿವಾರದ ಅಜೆಂಡಾದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ. ಆದರೆ, ಎಲ್ಡಿಎಫ್ ಅಂಚಿನಲ್ಲಿರುವ ಅಲ್ಪಸಂಖ್ಯಾತರ ಪರ ಕಾಳಜಿ ಹೊಂದಿದೆʼ ಎಂದು ರಾಜಕೀಯ ವಿಮರ್ಶಕ ಬಶೀರ್ ವಲ್ಲಿಕ್ಕುನ್ನು ಹೇಳುತ್ತಾರೆ.

ಸಿಎಎ, ಯುಸಿಸಿ ಅಥವಾ ರಾಮ ಮಂದಿರದಂತಹ ಸಮಸ್ಯೆಗಳಲ್ಲಿ ಎಡಪಕ್ಷಗಳು ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿವೆ. ಆದರೆ, ಕಾಂಗ್ರೆಸ್ ಹಿಂಜರಿಯು ತ್ತಿದೆ. ಈ ಅಂಶಗಳು ಅಲ್ಪಸಂಖ್ಯಾತ ಸಮುದಾಯದ ಬೆಂಬಲವನ್ನು ಎಡಪಂಥೀಯರ ಕಡೆಗೆ ವರ್ಗಾಯಿಸಿವೆ. ಹೆಚ್ಚುವರಿಯಾಗಿ, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಅವನತಿ ಮತ್ತು ಬಿಜೆಪಿ ಪಾಳಯಕ್ಕೆ ಅದರ ನಾಯಕರ ವಲಸೆ ಈ ಪ್ರವೃತ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಬಶೀರ್ ಹೇಳುತ್ತಾರೆ.

ಸಾಂಪ್ರದಾಯಿಕವಾಗಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಸುನ್ನಿ ಬಣದೊಳಗಿನ ಭಿನ್ನಾಭಿಪ್ರಾಯ ವು ಎಲ್‌ಡಿಎಫ್ ಗೆ ಮುಸ್ಲಿಂ ಸಮುದಾಯದೊಳಗೆ ಮತ್ತಷ್ಟು ನುಸುಳಲು ಅವಕಾಶವನ್ನು ನೀಡುತ್ತದೆ. ಸಿಪಿಐ(ಎಂ) ಆತಿಥ್ಯ ವಹಿಸಿದ ಪ್ಯಾಲೆಸ್ತೀನ್ ಐಕಮತ್ಯ ಕಾರ್ಯಕ್ರಮಗಳು ಗಮನಾರ್ಹ ಬೆಂಬಲವನ್ನು ಗಳಿಸಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ ವಿಳಂಬ ಪ್ರಯತ್ನಗಳು ವ್ಯತಿರಿಕ್ತವಾಗಿವೆ.

ಪ್ಯಾಲೆಸ್ತೀನ್ ಪರ ಮೆರವಣಿಗೆ ಆಯೋಜಿಸಿದ್ದಕ್ಕಾಗಿ ದಿವಂಗತ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಆರ್ಯದನ್ ಮಹಮ್ಮದ್ ಅವರ ಪುತ್ರ ಆರ್ಯದನ್ ಶೌಕತ್ ವಿರುದ್ಧ ಕೆಪಿಸಿಸಿ ಶಿಸ್ತು ಕ್ರಮ ಕೈಗೊಂಡಿರುವುದು ಮತ್ತು ಶಶಿ ತರೂರ್ ಅವರ ಹಮಾಸ್ ವಿರೋಧಿ ಹೇಳಿಕೆಗಳು ಅವರ ಮಿತ್ರ ಪಕ್ಷವಾದ ಐಯುಎಂಎಲ್ ಜೊತೆಗಿನ ಸಂಬಂಧವನ್ನು ಹದಗೆಡಿಸಿವೆ.

ʻಕಾಂಗ್ರೆಸ್ ಪ್ರಸ್ತುತ ವಿಧಾನಸಭೆಯಲ್ಲಿ 21 ಸ್ಥಾನಗಳನ್ನು ಹೊಂದಿದೆ, 16 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಆದರೆ, 15 ವಿಧಾನಸಭಾ ಸ್ಥಾನಗಳಿರುವ ಐಯುಎಂಎಲ್‌ ಕೇವಲ ಎರಡು ಲೋಕಸಭಾ ಸ್ಥಾನಗಳನ್ನು ಪಡೆಯುತ್ತದೆ. ಐಯುಎಂಎಲ್‌ ನ್ಯಾಯಯುತವಾಗಿ ಕನಿಷ್ಠ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಬೇಕು. ಲೀಗ್‌ ಸದಸ್ಯರು ಯುಡಿಎಫ್‌ನಲ್ಲಿ ತಮ್ಮ ಪಕ್ಷಕ್ಕೆ ಆಗುತ್ತಿರುವ ಅನ್ಯಾಯವನ್ನು ಗುರುತಿಸಬೇಕಿದೆʼ ಎಂದು ಎಲ್‌ಡಿಎಫ್ ಸಂಚಾಲಕ ಮತ್ತು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಇ.ಪಿ. ಜಯರಾಜನ್ ಹೇಳುತ್ತಾರೆ.

ಮುಸ್ಲಿಂ ಮತದಾರರನ್ನು ಒಲಿಸಿಕೊಳ್ಳಲು ಎಲ್‌ಡಿಎಫ್ ಪೊನ್ನಾನಿ ಕ್ಷೇತ್ರದಲ್ಲಿ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದಿಂದ ಕಳೆದ ವರ್ಷ ಪಕ್ಷದಿಂದ ಹೊರಹಾಕಲ್ಪಟ್ಟ ಐಯುಎಂಎಲ್‌ನ ಮಾಜಿ ಕಾರ್ಯದರ್ಶಿ ಕೆ.ಎಸ್.ಹಂಝ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಯೋಜಿಸಿದೆ. ಸುನ್ನಿ ಬಣದ ಬೆಂಬಲವನ್ನು ಹೊಂದಿರುವ ಹಂಝ ಅವರು ಪೊನ್ನಾನಿಯ ಸಾಂಪ್ರದಾಯಿಕ ಲೀಗ್ ಮತದಾರರಿಂದ ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ.

ಕೊಟ್ಟಾಯಂ, ಇಡುಕ್ಕಿ ಮತ್ತು ಪತ್ತನಂತಿಟ್ಟದಲ್ಲಿ ಎಲ್‌ಡಿಎಫ್, ಕೇರಳ ಕಾಂಗ್ರೆಸ್ (ಎಂ) ಅನ್ನು ಸೇರಿಸಿಕೊಳ್ಳಲು ನಿರ್ಧರಿಸಿದೆ. ಪತ್ತನಂತಿಟ್ಟದಲ್ಲಿ ಕಾಂಗ್ರೆಸ್ ಸಂಸದ ಆಂಟೋ ಆಂಟೋನಿ ವಿರುದ್ಧದ ಅಸಮಾಧಾನವು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರ ರಾಜೀನಾಮೆಗೆ ಕಾರಣವಾಗಿದೆ.

ಇತ್ತೀಚೆಗೆ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ ಪಿ.ಸಿ. ಜಾರ್ಜ್ ಅವರನ್ನು ಪತ್ತನಂತಿಟ್ಟದಲ್ಲಿ ಬಿಜೆಪಿ ನಾಮನಿರ್ದೇಶನ ಮಾಡಬಹುದು. ಗಮನಾರ್ಹ ವಾಗಿ, ಈ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಪ್ರಬಲ ಪ್ರದರ್ಶನ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಈ ಕ್ಷೇತ್ರದಲ್ಲಿ ದಾಖಲೆಯ 2,97,396 ಮತಗಳನ್ನು ಗಳಿಸಿದ್ದರು.

ಅಲ್ಪಸಂಖ್ಯಾತರ ಪರವಾಗಿ ಹೋರಾಡುವ ಮೂಲಕ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಆಡಳಿತ ವಿರೋಧಿ ಭಾವನೆಗಳು ಮತ್ತು‌ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳನ್ನು ಎಲ್ಡಿಎಫ್ ಯಶಸ್ವಿಯಾಗಿ ಎದುರಿಸಬಹುದೇ ಎಂಬುದು ನಿಜಕ್ಕೂ ಕುತೂಹಲಕಾರಿಯಾಗಿದೆ.

Read More
Next Story