ಪಬ್ಲಿಕ್‌ ಪರೀಕ್ಷೆ | 5, 8, 9ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅನುಮತಿ
x

ಪಬ್ಲಿಕ್‌ ಪರೀಕ್ಷೆ | 5, 8, 9ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅನುಮತಿ

ಈಗಾಗಲೇ ಕೆಲವು ಪರೀಕ್ಷೆಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಅನನುಕೂಲವಾಗಬಾರದು. ಹಾಗಾಗಿ ಈ ವರ್ಷದ ಮಟ್ಟಿಗೆ ಪರೀಕ್ಷೆ ಮುಂದುವರಿಸಬಹುದು ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ


ಬೆಂಗಳೂರು: ಬೋರ್ಡ್ ಪರೀಕ್ಷೆಗಳ ಬಗ್ಗೆ ತಲೆದೋರಿರುವ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ.

ನ್ಯಾ. ಕೆ. ಸೋಮಶೇಖರ್ ಮತ್ತು ನ್ಯಾ. ರಾಜೇಶ್ ಕೆ. ರೈ ಅವರಿದ್ದ ವಿಭಾಗೀಯ ಪೀಠ, ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿತ್ತು.

ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಈ ಹಿಂದೆ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪನ್ನು ರದ್ದುಪಡಿಸಿರುವ ವಿಭಾಗೀಯ ಪೀಠ. ಇಂದು (ಮಾರ್ಚ್ 22) ತನ್ನ ತೀರ್ಪನ್ನು ಪ್ರಕಟಿಸಿದೆ.

“ರಾಜ್ಯ ಸರ್ಕಾರವು ಬೋರ್ಡ್ ಪರೀಕ್ಷೆಯನ್ನು ನಡೆಸಬಹುದು. ಈಗಾಗಲೇ ಕೆಲವು ಪರೀಕ್ಷೆಗಳನ್ನು ನಡೆಸಲಾಗಿದೆ, ವಿದ್ಯಾರ್ಥಿಗಳಿಗೆ ಅನನುಕೂಲವಾಗಬಾರದು. ಹಾಗಾಗಿ ಈ ವರ್ಷದ ಮಟ್ಟಿಗೆ ಪರೀಕ್ಷೆ ಮುಂದುವರಿಸಬಹುದು. ಪರೀಕ್ಷೆ ಪ್ರಕ್ರಿಯೆ ಸ್ಥಗಿತಗೊಂಡ ಹಂತದಿಂದಲೇ ಮುಂದುವರಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆ ನಡೆಸಲು ಸಂಬಂಧಪಟ್ಟವರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಬೇಕು” ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಮಾ.11 ಮತ್ತು 12 ರಂದು ಎರಡು ವಿಷಯಗಳ ಪರೀಕ್ಷೆ ನಡೆದ ಬಳಿಕ ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡಿದ್ದ ನ್ಯಾಯಾಲಯ, ವಿಚಾರಣೆ ಪೂರ್ಣಗೊಂಡು ತೀರ್ಪು ನೀಡುವವರೆಗೆ ಪರೀಕ್ಷೆ ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಲಕ್ಷಾಂತರ ಮಕ್ಕಳು ಪರೀಕ್ಷೆಗಾಗಿ ಕಾದಿದ್ದರು. ಶಿಕ್ಷಣ ಇಲಾಖೆಯ ಗೊಂದಲಕಾರಿ ನಡೆಯಿಂದಾಗಿ ಮಕ್ಕಳು ಮತ್ತು ಪೋಷಕರು ಅನಗತ್ಯವಾಗಿ ಆತಂಕಕ್ಕೆ ಗುರಿಯಾಗಿದ್ದಾರೆ ಎಂಬ ವ್ಯಾಪಕ ಟೀಕೆಗಳು ಶೈಕ್ಷಣಿಕ ವಲಯದಿಂದ ಕೇಳಿಬಂದಿದ್ದವು. ಇದೀಗ ಕೋರ್ಟ್‌ ತೀರ್ಪಿನಿಂದಾಗಿ ಗೊಂದಲಗಳಿಗೆ ತೆರೆಬಿದ್ದಿದೆ.

ಆದರೆ, ಮಾ. 25 ರ ಸೋಮವಾರದಿಂದ ರಾಜ್ಯದಲ್ಲಿ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗಳು ಕೂಡ ಆರಂಭವಾಗುತ್ತಿದ್ದು, ಅದೇ ಹೊತ್ತಿಗೆ ಅರ್ಧಕ್ಕೆ ನಿಂತಿರುವ ಪ್ರಾಥಮಿಕ ಮತ್ತು ಹೈಸ್ಕೂಲು ಮಕ್ಕಳ ಪರೀಕ್ಷೆಗಳನ್ನು ನಡೆಸಬೇಕಾದ ಸವಾಲು ಶಿಕ್ಷಣ ಇಲಾಖೆಯ ಮುಂದಿದೆ. ಶಿಕ್ಷಕರ ಕಾರ್ಯದೊತ್ತಡ, ಸ್ಥಳಾವಭಾವ ಮುಂತಾದ ಸವಾಲುಗಳನ್ನು ಇಲಾಖೆ ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Read More
Next Story