ಪಠ್ಯಪುಸ್ತಕ ಪರಿಷ್ಕರಣೆ: ಹಿಂದುತ್ವದ ಅಜೆಂಡಾಕ್ಕೆ ಕಡಿವಾಣ
x

ಪಠ್ಯಪುಸ್ತಕ ಪರಿಷ್ಕರಣೆ: ಹಿಂದುತ್ವದ ಅಜೆಂಡಾಕ್ಕೆ ಕಡಿವಾಣ

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಟಿಪ್ಪು ಸುಲ್ತಾನ್, ಕವಿ ಕುವೆಂಪು ಸೇರಿದಂತೆ ಐತಿಹಾಸಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಪಠ್ಯಗಳನ್ನು ತೆಗೆದುಹಾಕಲಾಗಿತ್ತು.


"ಬುಲ್ ಬುಲ್‌ಗಳು ಕಿಟಕಿಗಳೇ ಇಲ್ಲದ ಜೈಲು ಕೋಣೆಯನ್ನು ಪ್ರವೇಶಿಸಿದವು. ವೀರ್ ಸಾವರ್ಕರ್ ಅವರು ಆ ಹಕ್ಕಿಗಳ ರೆಕ್ಕೆಗಳ ಮೇಲೆ ಕುಳಿತು ಜೈಲಿನ ಭದ್ರ ಕಲ್ಲಿನ ಗೋಡೆಗಳನ್ನು ದಾಟಿ, ಮಾತೃಭೂಮಿಯ ಪ್ರವಾಸ ಕೈಗೊಂಡರು”

-ಇದು ಹಿಂದಿನ ಬಿಜೆಪಿ ಸರಕಾರ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಳವಡಿಸಿದ್ದ ಪರಿಷ್ಕೃತ ಪಠ್ಯಪುಸ್ತಕದ ಪಾಠ. ಬಿಜೆಪಿ ಆಡಳಿತ ಸಂದರ್ಭದಲ್ಲಿ ಹಿಂದುತ್ವವಾದಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ನಡೆಸಿದ ಪರಿಷ್ಕರಣೆಯು ವ್ಯಾಪಕ ಟೀಕೆಗೆ ಗುರಿಯಾಯಿತು. ರಾಜ್ಯದಲ್ಲಿ ಶಿಕ್ಷಣವನ್ನು ಕೇಸರೀಕರಣ ಮಾಡುವ ನಿರ್ಭಿಡೆಯ ಕ್ರಮ ಇದು ಎಂದು ಇದನ್ನು ಶಿಕ್ಷಣ ತಜ್ಞರು ಟೀಕಿಸಿದ್ದರು.

ಹಿಂದುತ್ವದ ಪರಿಷ್ಕರಣೆಗಳು

ಪ್ರಮುಖವಾಗಿ 6 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಹಾಗೂ 1 ರಿಂದ 10 ನೇ ತರಗತಿಯ ಕನ್ನಡ ಭಾಷೆಯ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿತ್ತು. ಈ ಪರಿಷ್ಕರಣೆಯಲ್ಲಿ ಟಿಪ್ಪು ಸುಲ್ತಾನ್, ಕವಿ ಕುವೆಂಪು ಸೇರಿದಂತೆ ಐತಿಹಾಸಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಪಠ್ಯಗಳನ್ನು ತೆಗೆದುಹಾಕಲಾಗಿತ್ತು. ಆಧ್ಯಾತ್ಮಿಕ ನಾಯಕರು, ಸಮಾಜ ಸುಧಾರಕ ನಾರಾಯಣ ಗುರುಗಳ ವಿಷಯವನ್ನು ಒಂದೇ ಪ್ಯಾರಾಗ್ರಾಫ್‌ಗೆ ಕಡಿತಗೊಳಿಸಿ ಕತ್ತರಿ ಪ್ರಯೋಗಿಸಲಾಗಿತ್ತು.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಲೇ, ಮಕ್ಕಳ ಶಿಕ್ಷಣದ ವಿಷಯದಲ್ಲಿ ಹಿಂದಿನ ಸರ್ಕಾರ ನಡೆಸಿದ ಈ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಬಿಜೆಪಿ ಅವಧಿಯ ಪರಿಷ್ಕೃತ ಪಠ್ಯಗಳ ಪರಾಮರ್ಶೆಗೆ ಶಿಕ್ಷಣ ತಜ್ಞರ ಸಮಿತಿ ರಚಿಸಿ, ಆ ಬಗ್ಗೆ ಅಭಿಪ್ರಾಯ ಕೋರಿತ್ತು. ಬಳಿಕ ಆ ಸಮಿತಿಯ ವರದಿಯ ಆಧಾರದ ಮೇಲೆ ಕೈಬಿಟ್ಟ ಪಠ್ಯಗಳನ್ನು ಸೇರಿಸಲು ತೀರ್ಮಾನಿಸಿತ್ತು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪಠ್ಯಪುಸ್ತಕದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ಮನಸ್ಸು ಹಾಳು ಮಾಡುವ ಹಿಂದಿನ ಸರ್ಕಾರದ ಕ್ರಮಕ್ಕೆ ಬ್ರೇಕ್‌ ಹಾಕಿ, ಉತ್ತಮ ಪಠ್ಯ ಓದುವ ಅವಕಾಶ ಕಲ್ಪಿಸುವುದಾಗಿ ಸ್ಪಷ್ಟವಾಗಿ ಹೇಳಿದ್ದರು.

ಆದರೆ, ಸರ್ಕಾರ ಅಧಿಕಾರಕ್ಕೆ ಬಂದು, ಸಂಬಂಧಪಟ್ಟ ಖಾತೆ ಹಂಚಿಕೆಯಾಗಿ ಸಚಿವರು ಅಧಿಕಾರ ಸ್ವೀಕರಿಸುವ ಹೊತ್ತಿಗಾಗಲೇ ತರಗತಿಗಳು ಆರಂಭವಾಗಿದ್ದರಿಂದ ಹೊಸ ಪಠ್ಯ ಪುಸ್ತಕ ಸರಬರಾಜಿಗೆ ಅವಕಾಶವಿರಲಿಲ್ಲ. ಆದರೂ ಸಚಿವ ಬಂಗಾರಪ್ಪ ಅವರು ಖ್ಯಾತ ಚಿಂತಕ ಬರಗೂರು ರಾಮಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದ್ದಾರೆ. ಸದ್ಯಕ್ಕೆ ಬರಗೂರು ಸೂಚನೆಯಂತೆ ಕೆಲವು ಪಠ್ಯಗಳನ್ನು ಮಾತ್ರ ಮರು ಸೇರ್ಪಡೆ ಮಾಡಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುನ್ನ ಪಠ್ಯಪುಸ್ತಕಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಮುದ್ರಿಸುವುದಾಗಿ ಭರವಸೆ ನೀಡಿದ್ದಾರೆ.

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಜಿ. ಹೆಗಡೆ ನೇತೃತ್ವದಲ್ಲಿ 37 ಸದಸ್ಯರನ್ನೊಳಗೊಂಡ ಐದು ಸಮಿತಿಗಳನ್ನು ಕಾಂಗ್ರೆಸ್ ಸರ್ಕಾರ ರಚಿಸಿದೆ. ವಿವಿಧ ಕನ್ನಡ ಪಠ್ಯಪುಸ್ತಕ ಮತ್ತು ಪುಸ್ತಕಗಳನ್ನು ಪರಿಷ್ಕರಿಸಲು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.

“ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ನಾವು ಉದ್ದೇಶಿತ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮದ ಚೌಕಟ್ಟನ್ನು ರೂಪಿಸಬಹುದಿತ್ತು” ಎಂದು ಶಿಕ್ಷಣತಜ್ಞ ನಿರಂಜನ ಆರಾಧ್ಯ ಅವರು ಹೇಳಿದ್ದಾರೆ.

ಒಂದು ವಾರದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಎಸ್‌ಇಪಿಗೆ ಮುಂದಿನ ವಾರದೊಳಗೆ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ತಜ್ಞರ ಪಟ್ಟಿಯನ್ನು ಅಂತಿಮಗೊಳಿಸುವಂತೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರನ್ನು ಒತ್ತಾಯಿಸಲಾಗಿದೆ.

Read More
Next Story