40% ಕಮಿಷನ್:‌ ತನಿಖಾ ಆಯೋಗಕ್ಕೆ ೬ ಸಾವಿರ ಪುಟ ದಾಖಲೆ ಸಲ್ಲಿಸಿದ ಡಿ ಕೆಂಪಣ್ಣ
x

40% ಕಮಿಷನ್:‌ ತನಿಖಾ ಆಯೋಗಕ್ಕೆ ೬ ಸಾವಿರ ಪುಟ ದಾಖಲೆ ಸಲ್ಲಿಸಿದ ಡಿ ಕೆಂಪಣ್ಣ

40% ಕಮಿಷನ್‌ ದಂಧೆಯ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದ ಕೆಂಪಣ್ಣ


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ, ಆಗಿನ ಬಿಜೆಪಿ ಸರ್ಕಾರದ ವಿರುದ್ದದ 40% ಕಮಿಷನ್‌ ದಂಧೆಯ ಆರೋಪಕ್ಕೆ ಸಂಬಂಧಪಟ್ಟಂತೆ ಆರು ಸಾವಿರ ಪುಟಗಳ ದಾಖಲೆಗಳನ್ನು ನ್ಯಾ.ನಾಗಮೋಹನ್‌ ದಾಸ್‌ ನೇತೃತ್ವದ ತನಿಖಾ ಆಯೋಗಕ್ಕೆ ಸಲ್ಲಿಸಿರುವುದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳಿಗೆ ಈ ಮಾಹಿತಿ ನೀಡಿರುವ ಡಿ ಕೆಂಪಣ್ಣ, ಹಿಂದಿನ ಮತ್ತು ಈಗಿನ ಸರ್ಕಾರಗಳೆರಡರಲ್ಲೂ ಭ್ರಷ್ಟಾಚಾರ ಇದೆ. ಹಿಂದೆ ರಾಜಕಾರಣಿಗಳೇ ರಾಜ್ಯಭಾರ ನಡೆಸಿ ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಈಗಿನ ಸರ್ಕಾರದಲ್ಲಿ ಈವರೆಗೆ ಯಾವುದೇ ರಾಜಕಾರಣಿ ವೈಯಕ್ತಿಕವಾಗಿ ಭ್ರಷ್ಟಾಚಾರದಲ್ಲಿ ತೊಡಗಿಲ್ಲ. ಆದರೆ, ಈಗ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅವರದೇ ರಾಜ್ಯಭಾರವಾಗಿದೆ ಎಂದು ಹೇಳಿದ್ದಾರೆ.

ಮುಖ್ಯವಾಗಿ ಜಲಸಂಪನ್ಮೂಲ ಇಲಾಖೆ, ಲೋಕೋಪಯೋಗಿ, ಬಿಬಿಎಂಪಿ, ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳಿಗೆ ಸಂಬಂಧಿಸಿದ ಭ್ರಷ್ಟಾಚಾರದ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದ್ದೇವೆ. ಆ ಪೈಕಿ ವಿಡಿಯೋ, ಆಡಿಯೋ ಕೂಡ ಅಡಕವಿದ್ದು, ಜೊತೆಗೆ ಆರು ಸಾವಿರ ಪುಟಗಳ ದಾಖಲೆಯನ್ನೂ ನೀಡಲಾಗಿದೆ ಎಂದು ಕೆಂಪಣ್ಣ ವಿವರಿಸಿದ್ದಾರೆ.

ನವೆಂಬರ್‌ 10ರೊಳಗೆ ಸಾರ್ವಜನಿಕರು ಮತ್ತು ಸಂಬಂಧಪಟ್ಟವರು ಆಯೋಗಕ್ಕೆ ದಾಖಲೆಸಹಿತ ದೂರು ಅಥವಾ ಹೇಳಿಕೆ ಸಲ್ಲಿಸುವಂತೆ ವಿಚಾರಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಡಿ ಕೆಂಪಣ್ಣ ಅವರು ತಮ್ಮ ಬಳಿ ಇದ್ದ ಮಹತ್ವದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ಇನ್ನಷ್ಟು ದಾಖಲೆಗಳಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಆಯೋಗಕ್ಕೆ ಸಲ್ಲಿಸಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದ ಕೆಂಪಣ್ಣ

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಗುತ್ತಿಗೆದಾರರಿಂದ ಶೇ.೪೦ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ. ಹಾಗಾಗಿ ಯಾವುದೇ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗದೆ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗದೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದು, ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಪ್ರಧಾನಮಂತ್ರಿಗೆ ದೂರು ನೀಡಿದ್ದರು. ೨೦೨೧ರ ಜುಲೈನಲ್ಲಿ ಅವರು ೪೦ % ಕಮಿಷನ್‌ ದಂಧೆಯನ್ನು ಪ್ರಸ್ತಾಪಿಸಿ ನರೇಂದ್ರ ಮೋದಿಯವರಿಗೆ ಬರೆದ ಪತ್ರ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅದರ ಜೊತೆಗೆ, 2021ರ ಆಗಸ್ಟ್‌ ನಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಗುತ್ತಿಗೆದಾರರ ಸಂಘದ ಅಧ್ಯಕ್ಷರು ದೂರು ಸಲ್ಲಿಸಿದ್ದರು.

ಅವರ ಪತ್ರದ ಬೆನ್ನಲ್ಲೇ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಕೂಡ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಉಡುಪಿಯಲ್ಲಿ ಆತ್ಮಹತ್ಯಗೆ ಶರಣಾಗಿದ್ದರು. ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್‌ ಈಶ್ವರಪ್ಪ ಅವರ ಹೆಸರನ್ನು ಉಲ್ಲೇಖಿಸಿ ವಾಟ್ಸಪ್‌ ಸಂದೇಶ ಕಳಿಸಿರುವುದು ಬಹಿರಂಗವಾದ ಹಿನ್ನೆಲೆಯಲ್ಲಿ ಅಂದಿನ ಪ್ರತಿಪಕ್ಷ ಕಾಂಗ್ರೆಸ್‌, ಸಚಿವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಸಾರ್ವಜನಿಕ ಒತ್ತಡಕ್ಕೆ ಮಣಿದ ಈಶ್ವರಪ್ಪ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಸಂಪುಟದಿಂದ ಹೊರಬಿದ್ದಿದ್ದರು.

ಬಳಿಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ, ಗುತ್ತಿಗೆದಾರರ ಆರೋಪವನ್ನೇ ಕೇಂದ್ರವಾಗಿಟ್ಟುಕೊಂಡು ಆಡಳಿತರೂಢ ಬಿಜೆಪಿ ವಿರುದ್ಧ ೪೦ % ಕಮಿಷನ್‌ ಅಭಿಯಾನ ನಡೆಸಿತ್ತು.

ಚುನಾವಣೆ ಬಳಿಕ ಅಧಿಕಾರಕ್ಕೆ ಬಂದಲ್ಲಿ ಕಮಿಷನ್‌ ದಂಧೆಯ ತನಿಖೆ ನಡೆಸುವುದಾಗಿ ಹೇಳಿದ್ದ ಕಾಂಗ್ರೆಸ್‌, ತನ್ನ ಸರ್ಕಾರ ರಚಿಸಿದ ಬಳಿಕ ಕಳೆದ ಆಗಸ್ಟ್‌ನಲ್ಲಿ ನಿವೃತ್ತ ನ್ಯಾಯಾಧೀಶ ನಾಗಮೋಹನ್‌ ದಾಸ್‌ ನೇತೃತ್ವದ ವಿಚಾರಣಾ ಆಯೋಗ ರಚಿಸಿ ಆದೇಶ ಹೊರಡಿಸಿತ್ತು. ತನಿಖೆಯ ವ್ಯಾಪ್ತಿಯನ್ನು ನಿಗದಿ ಮಾಡಿದ್ದ ಕಾಂಗ್ರೆಸ್‌ ಸರ್ಕಾರ, ಮುಖ್ಯವಾಗಿ ಡಿ ಕೆಂಪಣ್ಣ ಅವರು ಪ್ರಧಾನಿಗೆ ಬರೆದ ಪತ್ರ, ಅವರು ಉಲ್ಲೇಖಿಸಿರುವ ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡು ತನಿಖೆ ನಡೆಸಿ ಮೂರು ತಿಂಗಳ ಅವಧಿಯಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ಬಿಜೆಪಿ ಆಡಳಿತಾವಧಿಯಲ್ಲಿ; 2019ರ ಜುಲೈ 26ರಿಂದ 2023ರ ಮಾರ್ಚ್‌ 31ರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ತನಿಖೆಗೆ ಸೂಚನೆ ನೀಡಲಾಗಿತ್ತು. ಮುಖ್ಯವಾಗಿ ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಸಣ್ಣ ನೀರಾವರಿ ಇಲಾಖೆಗಳ ಟೆಂಡರ್‌, ಪ್ಯಾಕೇಜ್‌, ಪುನರ್‌ ಅಂದಾಜು, ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರ ಮತ್ತು ಕಮಿಷನ್‌ ವ್ಯವಹಾರದ ಕುರಿತು ದಾಖಲಾತಿ ಪರಿಶೀಲನೆ ನಡೆಸಿ, ಸ್ಥಳ ಪರಿಶೀಲಿಸಿ ಮತ್ತು ಗುತ್ತಿಗೆದಾರರು ಮತ್ತು ಸಾರ್ವಜನಿಕರ ಅಹವಾಲು, ಹೇಳಿಕೆ ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಆಯೋಗಕ್ಕೆ ಕೋರಲಾಗಿತ್ತು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಮನವಿಗಳು, ದೂರು ಅರ್ಜಿಗಳ ಅಂಶಗಳ ಕುರಿತು ತನಿಖೆ, ಲೋಪದೋಷಗಳ ಮಾಹಿತಿ ಮತ್ತು ಸಂಬಂಧಿತ ಆರೋಪಿಗಳ ಸ್ಪಷ್ಟ ಗುರುತಿಸುವಿಕೆ ಸಹಿತಿ ಪರಿಪೂರ್ಣ ತನಿಖೆ ನಡೆಸಲು ಆಯೋಗಕ್ಕೆ ಕೋರಿದ್ದ ಸರ್ಕಾರ, ಪ್ಯಾಕೇಜ್‌ ಪದ್ಧತಿ, ಬಾಕಿ ಮೊತ್ತ ಬಿಡುಗಡೆ ಮತ್ತು ಟೆಂಡರ್‌ ಪ್ರಕ್ರಿಯೆಯಲ್ಲಿ ಶೇ.40 ಕಮಿಷನ್‌ ನಡೆಯುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಆರೋಪವನ್ನು ಕೇಂದ್ರವಾಗಿಟ್ಟುಕೊಂಡು ವಿಚಾರಣೆ ನಡೆಸಲು ಹೇಳಿತ್ತು.

Read More
Next Story