ಸೋಮಣ್ಣಗೆ ಹೆದರಿ ನಮ್ಮನ್ನು ಬಲಿ ಕೊಟ್ಟರು: ಬಿಎಸ್‌ವೈ ವಿರುದ್ಧ ಮಾಧುಸ್ವಾಮಿ ಆಕ್ರೋಶ
ಬಿಎಸ್‌ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜೆ ಸಿ ಮಾಧುಸ್ವಾಮಿ ಅವರು ತುಮಕೂರಿನಲ್ಲಿ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ರಾಜ್ಯಸಭೆಗೆ ಪ್ರಯತ್ನ ನಡೆಸಿ ವಿಫಲರಾಗಿದ್ದ ವಿ ಸೋಮಣ್ಣ ಅವರಿಗೆ ತುಮಕೂರು ಟಿಕೆಟ್ ನೀಡಲಾಗಿದೆ.
ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕೆಎಸ್ ಈಶ್ವರಪ್ಪ ಅವರು ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಅವರೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಶುಕ್ರವಾರ ಮಾತನಾಡಿದ ಮಾಧುಸ್ವಾಮಿ, “ಬಿಎಸ್ವೈ ಅವರು ಟಿಕೆಟ್ ಕೊಡಿಸುತ್ತೇನೆ ಎಂದು ಹೇಳುತ್ತಾ ಮೋಸ ಮಾಡಿದರು. ಮನೆಯಲ್ಲಿ ಕೂತಿದ್ದವನನ್ನು ಸ್ಪರ್ಧೆಗೆ ಸಿದ್ದರಾಗಿ ಎಂದು ಹೇಳಿ ಇದೀಗ ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ” ಎಂದು ಆಕ್ರೋಶ ಹೊರ ಹಾಕಿದರು.
ಬಿಎಸ್ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜೆಸಿ ಮಾಧುಸ್ವಾಮಿ ಅವರು ತುಮಕೂರಿನಲ್ಲಿ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ರಾಜ್ಯಸಭೆಗೆ ಪ್ರಯತ್ನ ನಡೆಸಿ ವಿಫಲರಾಗಿದ್ದ ವಿ ಸೋಮಣ್ಣ ಅವರಿಗೆ ತುಮಕೂರು ಟಿಕೆಟ್ ನೀಡಲಾಗಿದೆ. ಇದು ಮಾಧುಸ್ವಾಮಿ ಅವರ ಆಕ್ರೋಶಕ್ಕೆ ಕಾರಣವಾಗಿದೆ. ತಾನು ಸೋಮಣ್ಣ ಪರವಾಗಿ ಪ್ರಚಾರವನ್ನೂ ಮಾಡಲ್ಲ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಟಿಕೆಟ್ ಕೈ ತಪ್ಪಿದ್ದಕ್ಕೆ ಬಿಎಸ್ ವೈ ವಿರುದ್ಧ ತಿರುಗಿ ಬಿದ್ದಿರುವ ಮಾಧುಸ್ವಾಮಿ, “ಯಡಿಯೂರಪ್ಪ ಅವರಿಗೆ ಬೇಕಾದ ಎರಡು ಮೂರು ಸೀಟುಗಳನ್ನು ಹಠ ಮಾಡಿ ತೆಗೆದುಕೊಂಡಿದ್ದಾರೆ. ನನಗೆ ಟಿಕೆಟ್ ಕೊಡಲಿಲ್ಲ. ಸೋಮಣ್ಣ ಅವರಿಗೆ ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದಕ್ಕೆ ಇಲ್ಲಿಂದ ಕೊಡಲಾಗಿದೆ. ನಾನು ದೆಹಲಿಗೆ ಹೋಗಲು ಸಿದ್ಧವಿದ್ದರೂ ಯಡಿಯೂರಪ್ಪ ಅದನ್ನು ತಡೆದಿದ್ದರು. ಬಿಫಾರ್ಮ್ ತಂದುಕೊಡುವ ಜವಾಬ್ದಾರಿ ನನ್ನದು ಎಂದು ಭರವಸೆ ಕೊಟ್ಟಿದ್ದರು. ಆದರೆ ಸೋಮಣ್ಣ ನಾಲಗೆಗೆ ಹೆದರಿ, ಬೈಗುಳಕ್ಕೆ ಹೆದರಿ ನನ್ನ ಬಲಿಮಾಡಿದರು” ಎಂದು ಹೇಳಿದರು.
“ನನಗೆ ನೋವಾಗಿದೆ. ಯಡಿಯೂರಪ್ಪ ಅವರಿಗೆ ಮಾಧುಸ್ವಾಮಿ, ಈಶ್ವರಪ್ಪನನ್ನು ಕಟ್ಟಿಕೊಂಡು ಏನಾಗಬೇಕು ಅಂತ ಅನ್ನಿಸಿರಬಹುದು. ಅಪ್ಪ ಮಕ್ಕಳಿಗೆ ಸ್ವ ಹಿತಸಕ್ತಿಯೇ ಹೆಚ್ಚಾಗಿರಬಹುದು. ಯಡಿಯೂರಪ್ಪ ನನಗೆ ಭರವಸೆ ನೀಡಿದ ಮೇಲೆ ಎಲ್ಲರ ಮುಂದೆ ನಾನೇ ತುಮಕೂರು ಬಿಜೆಪಿ ಅಭ್ಯರ್ಥಿ ಎಂದು ಹೇಳಿದ್ದೆ. ನನಗೆ ಭರವಸೆ ನೀಡಿದಕ್ಕಾದರೂ ಯಡಿಯೂರಪ್ಪ ಅವರು ಹೈಕಮಾಂಡ್ ಬಳಿ ಟಿಕೆಟ್‌ಗಾಗಿ ಹೋರಾಡಬಹುದಿತ್ತು. ಪಕ್ಷಕ್ಕೆ ಅನ್ಯಾಯ ಮಾಡಿದವರು, ಇವತ್ತು ಅವರೇ ದೊಡ್ಡವರಾಗಿದ್ದಾರೆ. ಇವತ್ತು ನಿಷ್ಠಾವಂತನಾಗಿ ದುಡಿದವರು ಲೆಕ್ಕಕ್ಕಿಲ್ಲ. ನಾನು ಬಿಜೆಪಿಗೆ ಬರಲು ಯಡಿಯೂರಪ್ಪ ಕಾರಣ. ಕೆಜೆಪಿ ಮಾಡಿದಾಗಲೂ ಯಡಿಯೂರಪ್ಪಗೆ ಶಕ್ತಿ ಕೊಟ್ಟೆವು. ಅವರನ್ನು ಪ್ರಶ್ನಿಸದೆ ಅವರ ಹಿಂದೆ ಹೋಗಿದ್ದೆ ತಪ್ಪಾಯಿತಾ?” ಎಂದು ಪ್ರಶ್ನಿಸಿದ್ದಾರೆ.