‘ಸರ್ಕಾರವೇ ಸ್ತ್ರೀ ಕುಲ ಪೀಡಕರ ರಕ್ಷಣೆಗೆ’ ನಿಂತಿರುವ ಅನುಮಾನ ಮೂಡುತ್ತಿದೆ: ಬಿವೈ ವಿಜಯೇಂದ್ರ ವಾಗ್ದಾಳಿ
ಡ್ರಾಪ್ ನೀಡುವ ನೆಪದಲ್ಲಿ ಯುವತಿಯನ್ನು ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ ಘಟನೆ ಭಾನುವಾರ ಮುಂಜಾನೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ವ್ಯಾಪ್ತಿಯ ಹೊಸೂರು ಸರ್ವಿಸ್ ರಸ್ತೆಯ ಪ್ರತ್ಯೇಕ ಸ್ಥಳದಲ್ಲಿ ಈ ಘಟನೆ ನಡೆದಿದೆ.
ಈ ಘಟನೆ ಖಂಡಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸ್ತ್ರೀ ಪೀಡಕರು, ದುರುಳರು, ಅತ್ಯಾಚಾರಿಗಳ ಅಟ್ಟಹಾಸ ವಿಪರೀತಕ್ಕೆ ಹೋಗುತ್ತಿದೆ. ಸರಣೀ ರೂಪದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ʻʻಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆಟೋದಲ್ಲಿ ಹೋಗುತ್ತಿದ್ದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಅತ್ಯಂತ ಹೇಯ ಹಾಗೂ ರಾಕ್ಷಸೀ ಕೃತ್ಯವಾಗಿದೆ. ಮರುಕಳಿಸುತ್ತಲೇ ಇರುವ ಇಂಥಾ ಘಟನೆಗಳಿಂದ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಘನತೆ ಕುಗ್ಗುತ್ತಿದೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.
ʻʻಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಯಾರೊಬ್ಬರೂ ಈ ಬಗ್ಗೆ ಗಂಭೀರತೆ ಪ್ರದರ್ಶಿಸದೇ ಉಡಾಫೆ ಧೋರಣೆ ಅನುಸರಿಸುತ್ತಿರುವ ಪರಿ ನೋಡಿದರೆ ‘ಸರ್ಕಾರವೇ ಸ್ತ್ರೀ ಕುಲ ಪೀಡಕರ ರಕ್ಷಣೆಗೆ’ ನಿಂತಿರುವ ಅನುಮಾನ ಮೂಡಿಸುತ್ತಿದೆʼʼ ಎಂದು ಆರೋಪ ಮಾಡಿದ್ದಾರೆ.
ʻʻತಕ್ಷಣವೇ ಯುವತಿಯ ರಕ್ಷಣೆಗೆ ಮುಂದಾಗಿ ಪೈಶಾಚಿಕ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕುʼʼ ಎಂದು ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.