ಇಸ್ರೋ ಎಸ್‌ಎಸ್‌ಎಲ್‌ವಿ ಉಪಗ್ರಹ ಕಕ್ಷೆಗೆ
x

ಇಸ್ರೋ ಎಸ್‌ಎಸ್‌ಎಲ್‌ವಿ ಉಪಗ್ರಹ ಕಕ್ಷೆಗೆ


ಇಸ್ರೋ ಶ್ರೀಹರಿಕೋಟಾದಲ್ಲಿ ತನ್ನ ಮೂರನೇ ಮತ್ತು ಅಂತಿಮ ಅಭಿವೃದ್ಧಿಯ ಸಣ್ಣ ಉಪಗ್ರಹ ಉಡಾವಣಾ ವಾಹನ(ಎಸ್‌ಎಸ್‌ ಎಲ್‌ವಿ)ಯನ್ನು ಶುಕ್ರವಾರ (ಆಗಸ್ಟ್ 16) ಯಶಸ್ವಿಯಾಗಿ ಉಡಾಯಿಸಿತು.

ಇದರ ಮೂಲಕ ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮತ್ತು ಪರಿಸರ ಮೇಲ್ವಿಚಾರಣೆ, ಬೆಂಕಿ ಪತ್ತೆ ಮತ್ತು ಜ್ವಾಲಾಮುಖಿ ಚಟುವಟಿಕೆ ಇನ್ನಿತರ ಅಪ್ಲಿಕೇಶನ್‌ಗಳನ್ನು ಬಳಸಬಹುದು.

ʻಮೂರನೇ ಅಭಿವೃದ್ಧಿ ಫ್ಲೈಟ್ ಎಸ್‌ಎಸ್‌ಎಲ್‌ವಿ ಡಿ-3 ಇರುವ ಇಒಎಸ್-08 ಉಪಗ್ರಹವನ್ನು ಯಶಸ್ವಿಯಾಗಿ ಹಾರಿಸಲಾಗಿದೆ. ರಾಕೆಟ್ ಅತ್ಯಂತ ನಿಖರ ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇರಿಸಿದೆ ಮತ್ತು ಉಪಗ್ರಹದಲ್ಲಿ ಯಾವುದೇ ವ್ಯತ್ಯಯವಿಲ್ಲ,ʼ ಎಂದು ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಮಿಷನ್ ಕಂಟ್ರೋಲ್ ಕೇಂದ್ರದಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದರು.

ʻ ಈ ಮೂಲಕ ಎಸ್‌ಎಸ್‌ಎಲ್‌ವಿಯ ಮೂರನೇ ಅಭಿವೃದ್ಧಿ ಕಾರ್ಯಕ್ರಮ ಪೂರ್ಣಗೊಂಡಿದೆ. ನಾವು ಎಸ್‌ಎಸ್‌ಎಲ್‌ವಿ ತಂತ್ರಜ್ಞಾನವನ್ನು ಕೈಗಾರಿಕೆಗಳಿಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿದ್ದೇವೆ. ಎಸ್‌ಎಸ್‌ಎಲ್‌ವಿ ಉಡಾವಣೆ ವಾಹನಕ್ಕೆ ಇದು ಉತ್ತಮ ಆರಂಭ,ʼ ಎಂದು ಸೋಮನಾಥ್ ಹೇಳಿದರು.

ʻರಾಕೆಟ್‌ ನ ಸೌರ ಫಲಕಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ವಿಟಿಎಂ ಹಂತದಲ್ಲಿ ನಿರ್ದಿಷ್ಟ ಚಟುವಟಿಕೆಗಳನ್ನು ಹುಡುಕುತ್ತಿದ್ದೇವೆ ಮತ್ತು ಎಲ್ಲವೂ ಕಾಲಾನುಕ್ರಮ ಪೂರ್ಣಗೊಳ್ಳುತ್ತದೆ,ʼ ಎಂದ ಅವರು ಇಸ್ರೋ ತಂಡಕ್ಕೆ ಶುಭಾಶಯ ಕೋರಿದರು.

ಪ್ರಾಥಮಿಕ ಭೂ ವೀಕ್ಷಣಾ ಉಪಗ್ರಹ ಇಒಎಸ್‌-08 ಅನ್ನು ಹೊತ್ತ ಎಸ್‌ಎಸ್‌ಎಲ್‌ವಿ ರಾಕೆಟ್ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣೆ ಪ್ಯಾಡ್‌ನಿಂದ ಮೇಲಕ್ಕೇರಿತು. ಕೇಂದ್ರವು ಚೆನ್ನೈನಿಂದ ಪೂರ್ವಕ್ಕೆ 135 ಕಿ.ಮೀ. ನಲ್ಲಿದ್ದು, ನಿಗದಿತ ಸಮಯ ಬೆಳಗ್ಗೆ 9.17ಕ್ಕೆ ಗುರಿ ಮುಟ್ಟಿತು.

ಮೊದಲ ಪ್ರಯತ್ನ ವಿಫಲ: ಆಗಸ್ಟ್ 2022 ರಲ್ಲಿ ಎ‌ಸ್‌ಎಸ್‌ಎಲ್‌ವಿ ಯ ಮೊದಲ ಮಿಷನ್ ಅಪೇಕ್ಷಿತ ಫಲಿತಾಂಶ ನೀಡಲಿಲ್ಲ. ಏಕೆಂದರೆ, ಉಡಾವಣೆ ವಾಹನವು ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಸೇರಿಸಲಿಲ್ಲ.ಆನಂತರ ಫೆಬ್ರವರಿ 2023 ರಲ್ಲಿ ಎ‌ಸ್‌ಎಸ್‌ಎಲ್‌ವಿ-ಡಿ2-ಇಒಎಸ್-07 ಯಶಸ್ವಿ‌ಯಾಯಿತು.

ಎಸ್‌ಎಸ್‌ಎಲ್‌ವಿ ಡಿ-3 ಸುಮಾರು 10-12 ನಿಮಿಷಗಳ ಹಾರಾಟದ ನಂತರ ಉಪಗ್ರಹ ಯಶಸ್ವಿಯಾಗಿ ಬೇರ್ಪಟ್ಟಿತು. ಕೆಲವೇ ನಿಮಿಷಗಳಲ್ಲಿ, 200 ಗ್ರಾಂ ತೂಕದ ಸ್ಪೇಸ್ ಕಿಡ್ಜ್ ಇಂಡಿಯಾ ಅಭಿವೃದ್ಧಿಪಡಿಸಿದ ಎಸ್‌ ಆರ್-‌ ಒ ಡೆಮೊಸ್ಯಾಟ್ ಉಪಗ್ರಹವೂ ಬೇರ್ಪಟ್ಟಿತು.

ಉಪಗ್ರಹಗಳ ವಾಣಿಜ್ಯ ಉಡಾವಣೆ ಪ್ರಾರಂಭ: ಶುಕ್ರವಾರದ ಯಶಸ್ಸು ನ್ಯೂಸ್‌ಪೇಸ್ ಇಂಡಿಯಾ ಲಿಮಿಟೆಡ್‌ಗೆ 500 ಕೆಜಿ ತೂಕದ ಉಪಗ್ರಹಗಳ ವಾಣಿಜ್ಯ ಉಡಾವಣೆಗೆ ಅನುವು ಮಾಡಿಕೊಡುತ್ತದೆ. ಎಸ್‌ಎಸ್‌ಎಲ್‌ವಿ ರಾಕೆಟ್ 34 ಮೀಟರ್‌ ಇರಲಿದ್ದು, 500 ಕಿಲೋಮೀಟರ್ ಲಿಯೋಗಿಂತ ಕಡಿಮೆ ತೂಕವಿರುವ ಉಪಗ್ರಹಗಳನ್ನು ಇರಿಸಲು ಬಳಸಲಾಗುತ್ತದೆ.

Read More
Next Story