
ಪ್ರಧಾನಿ ನರೇಂದ್ರ ಮೋದಿಯಿಂದ ಕೀಳುಮಟ್ಟದ ಭಾಷಣ: ಬಿ.ಕೆ ಹರಿಪ್ರಸಾದ್
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಎಲ್ಲಿಯೂ ದೇಶಕ್ಕೆ ಮುಂದೆ ಏನು ಮಾಡಲಿದ್ದೇವೆ ಎಂದು ಹೇಳಿಲ್ಲ. ಮಣಿಪುರದ ಬಗ್ಗೆ , ಚೀನಾ ಅತಿಕ್ರಮಣದ ಬಗ್ಗೆ ಅವರು ಮಾತನಾಡಿಲ್ಲ. ದೇಶದ ಯಾವುದೇ ಪ್ರಧಾನಿ ಇಷ್ಟೊಂದು ಕೀಳುಮಟ್ಟದ ಭಾಷಣ ಮಾಡಿದ್ದನ್ನು ನಾನು ನೋಡಿಲ್ಲ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ʻಭಾರತದಲ್ಲಿ 75 ವರ್ಷಗಳಿಂದ ಉಳಪ್ರಧಾನ ಮಂತ್ರಿಗಳು ಸಹ ಜಂಟಿ ಸದನದ ಸಭೆಯನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ರಾಷ್ಟ್ರಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರಕ್ಕೆ ಅವರು ಏನು ಮಾಡಲಿದ್ದಾರೆ ಎನ್ನುವ ಸಂದೇಶ ನೀಡಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಏನು ಮಾಡಲಿದ್ದೇವೆ ಎನ್ನುವುದನ್ನೇ ಹೇಳಿಲ್ಲʼ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದರು.
ಬುಧುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻತುರ್ತು ಪರಿಸ್ಥಿತಿಯ ಬಗ್ಗೆ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ. ತುರ್ತು ಪರಿಸ್ಥಿತಿಯನ್ನು ಸಂವಿಧಾನದ 352ನೇ ಆರ್ಟಿಕಲ್‌ನ ಅನುಸಾರ ಜಾರಿ ಮಾಡಲಾಗಿತ್ತು. ದೇಶಕ್ಕೆ ಹೊರ ದೇಶಗಳಿಂದ ಆಕ್ರಮಣಶೀಲತೆ ಹಾಗೂ ಆಂತರಿಕ ಗಲಭೆಗಳು ಸೃಷ್ಟಿಯಾದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವುದಕ್ಕೆ ಅವಕಾಶ ಇದೆ ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಅದನ್ನೇ ಜಾರಿ ಮಾಡಲಾಗಿತ್ತುʼ ಎಂದರು.
ʻತುರ್ತು ಪರಿಸ್ಥಿತಿ ಸಂವಿಧಾನಕ್ಕೆ ವಿರುದ್ಧ ಇರಲಿಲ್ಲ. ರಾಷ್ಟ್ರ ವಿರೋಧ ನೀತಿಯನ್ನು ಅಡಗಿಸುವ ಉದ್ದೇಶದಿಂದ ತುರ್ತು ಪರಿಸ್ಥಿತಿ ಹೇರಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿರಲಿಲ್ಲ. ರಾಷ್ಟ್ರ ವಿರೋಧ ಶಕ್ತಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ತುರ್ತು ಪರಿಸ್ಥಿತಿ ಜಾರಿ ಮಾಡಲಾಗಿತ್ತು. ಇನ್ನು ಮೋದಿ ಅವರು ಸಂಸತ್ ಭಾಷಣದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅವಮಾನಿಸಿದ್ದಾರೆ. ರಾಹುಲ್‌ಗೆ ಬಾಲಬುದ್ಧಿ, ಬಚ್ಚಾ (ಮಗು) ಎನ್ನುವ ಪದಗಳನ್ನು ಬಳಸಿದ್ದಾರೆ. ಈ ಮೂಲಕ ಮಕ್ಕಳನ್ನು ಅವಮಾನಿಸಿದ್ದಾರೆʼ ಎಂದು ಹೇಳಿದರು.
ʻಮೋದಿ ಅವರ ಭಾಷಣದಲ್ಲಿ ಎಲ್ಲಿಯೂ ದೇಶಕ್ಕೆ ಮುಂದೆ ಏನು ಮಾಡಲಿದ್ದೇವೆ ಎಂದು ಹೇಳಿಲ್ಲ. ಮಣಿಪುರದ ಬಗ್ಗೆ , ಚೀನಾ ಅತಿಕ್ರಮಣದ ಬಗ್ಗೆ ಅವರು ಮಾತನಾಡಿಲ್ಲ. ದೇಶದ ಯಾವುದೇ ಪ್ರಧಾನಿ ಇಷ್ಟೊಂದು ಕೀಳುಮಟ್ಟದ ಭಾಷಣ ಮಾಡಿದ್ದನ್ನು ನಾನು ನೋಡಿಲ್ಲ. ಸಂವಿಧಾನಕ್ಕೆ ವಿರುದ್ಧವಾಗಿ ಮೋದಿ ಭಾಷಣ ಮಾಡಿದ್ದಾರೆ. ಅವರ ಮಾತುಗಳನ್ನು ಕೇಳಿದರೆ, ಬುದ್ಧಿಭ್ರಮಣೆಯಾದಂತೆ ಕಾಣುತ್ತದೆʼ ಎಂದಿದ್ದಾರೆ.