
'ಸ್ಮಾಲ್ ಹೈವ್ ಬೀಟಲ್' ಜೇನುಗೂಡುಗಳಿಗೆ ಹಾನಿ ಉಂಟು ಮಾಡುತ್ತಿದೆ.
ಜೇನುಕೃಷಿಗೆ ʻಸ್ಮಾಲ್ ಹೈವ್ ಬೀಟಲ್ʼ ಹೊಸಕೀಟದ ಕಾಟ; ಸಂಕಷ್ಟದಲ್ಲಿ ಜೇನು ಕೃಷಿಕರು
ಈ ಹುಳಗಳು ಜೇನುಗೂಡಿನ ಒಳಗೆ ಮೊಟ್ಟೆ ಇಡುತ್ತವೆ. ಅವುಗಳ ಮರಿಹುಳುಗಳು ಜೇನುತುಪ್ಪ, ಪರಾಗ ಮತ್ತು ಜೇನುನೊಣಗಳ ಮೊಟ್ಟೆಗಳನ್ನು ತಿಂದು ಹಾಕುತ್ತವೆ.
ಕರ್ನಾಟಕದ ಮಲೆನಾಡು, ಕರಾವಳಿ ಮತ್ತು ಬಯಲು ಸೀಮೆಯ ಜೇನು ಕೃಷಿಕರ ಬದುಕಿನಲ್ಲಿ ಈಗ ಸಿಹಿಗಿಂತ ಕಹಿಯೇ ಹೆಚ್ಚಾಗುತ್ತಿದೆ. ಇಷ್ಟು ದಿನ ಜೇನುನೊಣಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಆತಂಕದ ಬೆನ್ನಲ್ಲೇ, ಈಗ 'ಸ್ಮಾಲ್ ಹೈವ್ ಬೀಟಲ್' ಎಂಬ ಕೀಟ ಜೇನು ಕೃಷಿಗೆ ಮಾರಕವಾಗಿ ಪರಿಣಮಿಸಿದ್ದು, ಇದು ಜೇನು ಉದ್ಯಮಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಲಿದೆ ಎಂಬ ಆತಂಕ ಎದುರಾಗಿದೆ.
ಆಫ್ರಿಕಾ ಮೂಲದ ಅಪಾಯಕಾರಿ 'ಸ್ಮಾಲ್ ಹೈವ್ ಬೀಟಲ್' ಕೀಟ ಈಗ ಕರ್ನಾಟಕಕ್ಕೂ ಲಗ್ಗೆ ಇಟ್ಟಿವೆ. ಈ ಹಿಂದೆ ಪಶ್ಚಿಮ ಬಂಗಾಳ, ಅಸ್ಸಾಂ, ಆಂಧ್ರಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಜೇನು ಕುಟುಂಬಗಳನ್ನು ನಾಶಪಡಿಸಿದ್ದ ಈ ಕೀಟಗಳು, ಈಗ ರಾಜ್ಯದ ಮೈಸೂರು, ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪತ್ತೆಯಾಗಿರುವುದು ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿದೆ.
ಯಾವುದೀ ಕೀಟ?
'ಸ್ಮಾಲ್ ಹೈವ್ ಬೀಟಲ್' ಇದರ ವೈಜ್ಞಾನಿಕ ಹೆಸರು ಏಥಿನಾ ಟುಮಿಡಾ. ಇದು ಮೂಲತಃ ಆಫ್ರಿಕಾ ಖಂಡದ್ದು. ಇದು ಮೊದಲ ಬಾರಿಗೆ 1996ರಲ್ಲಿ ಅಮೆರಿಕಾದ ಸೌತ್ ಕೆರೊಲಿನಾ ಮತ್ತು ಫ್ಲೋರಿಡಾದಲ್ಲಿ ಪತ್ತೆಯಾಯಿತು. ಅದಕ್ಕೂ ಮೊದಲು ಇದು ಕೇವಲ ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತಿತ್ತು. ಆಫ್ರಿಕಾದಿಂದ ಇದು ಅಮೆರಿಕಾ, ಆಸ್ಟ್ರೇಲಿಯಾ, ಕೆನಡಾ, ಮೆಕ್ಸಿಕೋ, ಇಟಲಿ, ಫಿಲಿಪ್ಪಿನ್ಸ್ ಮತ್ತು ಚೀನಾ ಸೇರಿದಂತೆ ಹಲವು ದೇಶಗಳಿಗೆ ಹರಡಿತ್ತು. ಬಳಿಕ ಚೀನಾದ ಮೂಲಕ ಬಾಂಗ್ಲಾದೇಶಕ್ಕೆ ಬಂದು, ಅಲ್ಲಿಂದ ಭಾರತಕ್ಕೆ ಕಾಲಿಟ್ಟಿದೆ ಎನ್ನಲಾಗಿದೆ. ಸೆಪ್ಟೆಂಬರ್ 2022ರಲ್ಲಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಈ ಕೀಟ, ಈಗ ದಕ್ಷಿಣ ಮತ್ತು ಈಶಾನ್ಯ ಭಾರತಕ್ಕೂ ವ್ಯಾಪಿಸಿದೆ.
ಈ ಜೀರುಂಡೆಗಳು ಜೇನುಗೂಡಿನ ಒಳಗೆ ಮೊಟ್ಟೆ ಇಡುತ್ತವೆ. ಅವುಗಳ ಮರಿಹುಳುಗಳು ಜೇನುತುಪ್ಪ, ಪರಾಗ ಮತ್ತು ಜೇನುನೊಣಗಳ ಮೊಟ್ಟೆಗಳನ್ನು ತಿಂದು ಹಾಕುತ್ತವೆ.
ಈ ಕೀಟದ ಬಗ್ಗೆ ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿರುವ ಜಿಕೆವಿಕೆ ಕೃಷಿವಿಶ್ವವಿದ್ಯಾಲಯದ ಜೇನು ಕೃಷಿ ವಿಭಾಗದ ವಿಜ್ಞಾನಿ, ಡಾ.ಕೆ.ಟಿ. ವಿಜಯ್‌ಕುಮಾರ್ ಅವರು ʻʻ'ಸ್ಮಾಲ್ ಹೈವ್ ಬೀಟಲ್' ಎಂಬ ಜೀರುಂಡೆಯು ಜೇನುಗೂಡಿನ ಒಳಗೆ ಸೇರಿ ಜೇನುತುಪ್ಪ ಮತ್ತು ಪರಾಗವನ್ನು ತಿನ್ನುವುದಷ್ಟೇ ಅಲ್ಲದೆ, ಜೇನುಹುಳುಗಳ ಲಾರ್ವಾಗಳನ್ನು ನಾಶಪಡಿಸುತ್ತದೆ. ಇದರಿಂದಾಗಿ ಜೇನು ಸಂತತಿಯ ನಾಶವಾಗಿ, ಜೇನುಹುಳುಗಳು ಗೂಡನ್ನು ಬಿಟ್ಟು ಪಲಾಯನ ಮಾಡುತ್ತಿವೆ. ಬೆಂಗಳೂರು ಗ್ರಾಮೀಣ, ಮೈಸೂರು, ರಾಮನಗರ ಮತ್ತು ಕೋಲಾರದಂತಹ ಜಿಲ್ಲೆಗಳಲ್ಲಿ ಈ ಬಾಧೆ ತೀವ್ರವಾಗಿದ್ದು, ಜೇನು ಕೃಷಿಯ ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ. ಜೇನು ಒಟ್ಟು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಏಳನೇ ಸ್ಥಾನದಲ್ಲಿದೆ. ಇಂತಹ ಕೀಟಬಾಧೆಗಳು ನಿಯಂತ್ರಣಕ್ಕೆ ಬರದಿದ್ದರೆ ಜೇನು ತುಪ್ಪದ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸದ್ಯಕ್ಕೆ ಇದರ ಪ್ರಭಾವ ಕಡಿಮೆ ಇರುವುದು ಸಮಾಧಾನಕರ ಸಂಗತಿಯಾದರೂ, ಇದು ನೈಸರ್ಗಿಕ ಜೇನುಗಳಿಗೂ ಮಾರಕವಾಗಿರುವುದರಿಂದ ಪರಿಸರ ಸಮತೋಲನದ ಮೇಲೂ ಪರಿಣಾಮ ಬೀರಬಹುದುʼʼ ಎಂದು ಅವರು ಅಭಿಪ್ರಾಯಪಡುತ್ತಾರೆ.
ಜೇನು ಸಾಕಾಣಿಕೆದಾರರು ಗೂಡುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ವೈಜ್ಞಾನಿಕ ಬಲೆಗಳನ್ನು ಬಳಸುವ ಮೂಲಕ ಈ ಆಕ್ರಮಣಕಾರಿ ಕೀಟವನ್ನು ನಾಶಪಡಿಸಬಹುದು.
ʻʻಕಳೆದ ಒಂದು ವರ್ಷದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 20ರಿಂದ 100ರಷ್ಟು ಹಾನಿ ಸಂಭವಿಸಿರುವುದು ಕಂಡುಬಂದಿದೆ. ಈಗಾಗಲೇ ಸುಮಾರು 800 ಕೆ.ಜಿ.ಗೂ ಹೆಚ್ಚು ಜೇನುತುಪ್ಪ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದು ಕೃಷಿ ಇಳುವರಿಗೆ ಅಗತ್ಯ ಪರಾಗಸ್ಪರ್ಶದ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ. ಜಿಕೆವಿಕೆ ಮತ್ತು ವಿವಿಧ ಕೃಷಿ ವಿಶ್ವವಿದ್ಯಾಲಯಗಳು ಈ ಬಗ್ಗೆ ಸಂಶೋಧನೆ ನಡೆಸಿ ಔಷಧ ಕಂಡುಹಿಡಿಯಲು ಮುಂದಾಗಿದೆ. ಆದರೆ ಇವುಗಳನ್ನು ಆರಂಭಿಕ ಹಂತದಲ್ಲೇ ತಡೆಗಟ್ಟುವ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯʼʼ ಎಂದು ಅವರು ತಿಳಿಸಿದರು.
ಮಂಡ್ಯ ಜಿಲ್ಲೆಯ ಅನುಭವಿ ಕೃಷಿಕ ಡಿ.ಜೆ. ಈಶ್ವರ್ ದಶಕಗಳ ಕಾಲ ಜೇನು ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರಿಗೇ ಈ ಕೀಟ ಸವಾಲಾಗಿ ಪರಿಣಮಿಸಿದೆ. ಈ ಬಗ್ಗೆ ʼ ದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿರುವ ಅವರು, ʻʻಕೇವಲ ಒಂದು ತಿಂಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಪೆಟ್ಟಿಗೆಗಳು ನಾಶವಾಗಿ, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಹಿಂದೆ 70 ಕೆ.ಜಿ ಜೇನುತುಪ್ಪ ಸಿಗುತ್ತಿದ್ದ ಜಾಗದಲ್ಲಿ ಈಗ ಒಂದು ಹನಿ ಜೇನುತುಪ್ಪವೂ ಸಿಗುತ್ತಿಲ್ಲ. ಯೂಟ್ಯೂಬ್ ನೋಡಿ ಸಿಗರೇಟ್ ಹೊಗೆ, ನೀಲಗಿರಿ ಸೊಪ್ಪಿನ ಹೊಗೆಯಂತಹ ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿದ್ದರೂ, ಈ ಜೀರುಂಡೆಗಳು ಮಾತ್ರ ಯಾವುದಕ್ಕೂ ಜಗ್ಗುತ್ತಿಲ್ಲʼʼ ಎಂದು ಅವರು ತಿಳಿಸಿದರು.
ಜೀರುಂಡೆಗಳ ಹಾವಳಿಗೆ ಬೆದರಿ ಪಲಾಯನ ಮಾಡುತ್ತಿರುವ ಜೇನುನೊಣಗಳು.
ʻʻಮಂಡ್ಯ ಮತ್ತು ಮಳವಳ್ಳಿ ಭಾಗದಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ಕೆ.ಆರ್. ಪೇಟೆಯಂತಹ ಕೆಲವು ಭಾಗಗಳಲ್ಲಿ ಸದ್ಯಕ್ಕೆ ಪರಿಸ್ಥಿತಿ ಪರವಾಗಿಲ್ಲ.ತಾವು ಇತರ ರೈತರಿಗೆ ಪೂರೈಕೆ ಮಾಡಲಿರುವ ಸುಮಾರು 600 ಪೆಟ್ಟಿಗೆಗಳ ಭವಿಷ್ಯದ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ಹೊರಗಡೆಯಿಂದ ತರಿಸುವಾಗ ಉತ್ತಮವಾಗಿರುವ ಪೆಟ್ಟಿಗೆಗಳು, ರೈತರ ಕೈ ಸೇರಿದ ಒಂದು ತಿಂಗಳಲ್ಲೇ ಈ ಕೀಟಬಾಧೆಗೆ ತುತ್ತಾಗುತ್ತಿವೆ. ಜಿಕೆವಿಕೆ ವಿಜ್ಞಾನಿಗಳು ಮತ್ತು ತಜ್ಞರ ಸಂಪರ್ಕದಲ್ಲಿದ್ದರೂ ಈ ಕೀಟಬಾಧೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲʼʼ ಎಂದು ಅವರು ಹೇಳಿದ್ದಾರೆ.
ಎಲ್ಲಿಂದ ಬಂದಿರಬಹುದು?
ಸ್ಮಾಲ್ ಹೈವ್ ಬೀಟಲ್ ಕೀಟವು, ಚೀನಾದಿಂದ ಬಾಂಗ್ಲಾದೇಶಕ್ಕೆ ಅಲ್ಲಿಂದ ಭಾರತಕ್ಕೆ ಬಂದಿರಬಹುದು. ಅಲ್ಲಿಂದ ಅಸ್ಸಾಂ, ಬಿಹಾರ, ಉತ್ತರಪ್ರದೇಶ, ಆಂಧ್ರದ ಮೂಲಕ ಕರ್ನಾಟಕ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಕರ್ನಾಟಕದಲ್ಲಿ ತುಡುವೆ ಜೇನುಗೂಡಿನಲ್ಲಿ ಈ ಕೀಟಬಾಧೆ ಕಾಣಿಸಿಕೊಂಡಿತ್ತು.
ಆಕ್ರಮಣಕಾರಿ ಜೀರುಂಡೆಗಳನ್ನು ತಡೆಗಟ್ಟದಿದ್ದರೆ ಜೇನುತುಪ್ಪದ ಉತ್ಪಾದನೆ ಕುಂಠಿತವಾಗುತ್ತದೆ.
ಜೇನು ಕೃಷಿಕರು ಏನು ಮಾಡಬೇಕು?
ಈ ಬಗ್ಗೆ ಜೇನು ಕೃಷಿಕರಿಗೆ ಸಲಹೆ ನೀಡಿದ ಡಾ.ವಿಜಯ್‌ಕುಮಾರ್ ಅವರು, ಸೋಂಕಿತ ಜೇನು ಕುಟುಂಬಗಳ ವರ್ಗಾವಣೆ ಹಾಗೂ ಖರೀದಿ ನಿರ್ಬಂಧಿಸಬೇಕು. ಎಲ್ಲಾ ಸೋಂಕಿತ ಜೇನುಗೂಡುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಸೋಂಕಿತ ಖಾಲಿ ಎರಿಗಳನ್ನು ಸುಟ್ಟು ಹಾಕಬೇಕು. ಸೋಂಕಿತ ಪ್ರದೇಶಗಳಿಂದ ಜೇನು ಪೆಟ್ಟಿಗೆಗಳನ್ನು ಬೇರೆಡೆಗೆ ಸಾಗಿಸುವುದನ್ನು ನಿಲ್ಲಿಸಬೇಕು ಮತ್ತು ಜೇನುಗೂಡುಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಅತಿ ಅವಶ್ಯಕವಾಗಿದೆ. ಕಾಡು ಜೇನುಗಳ ಮೇಲೆಯೂ ಈ ಕೀಟ ದಾಳಿ ಮಾಡುತ್ತಿರುವುದು ಪರಿಸರ ಸಮತೋಲನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಇವುಗಳು ಹಾನಿ ಮಾಡುವುದು ಹೇಗೆ?
ಲಾರ್ವಾ ಹಂತದಲ್ಲಿದ್ದಾಗಲೇ ಜೇನುಗೂಡುಗಳನ್ನು ಆವರಿಸಿಕೊಂಡು, ಮೊದಲು ಶೇಖರಣೆಯಾಗಿರುವ ಜೇನುತುಪ್ಪವನ್ನು ಭಕ್ಷಿಸುತ್ತವೆ. ಅಷ್ಟಕ್ಕೇ ನಿಲ್ಲದ ಈ ಹಾವಳಿ, ನಂತರ ಜೇನುಮೇಣ ಮತ್ತು ನೊಣಗಳು ಇಟ್ಟಿರುವ ಮೊಟ್ಟೆಗಳನ್ನು ಸಂಪೂರ್ಣವಾಗಿ ತಿಂದು ಹಾಕುತ್ತವೆ. ಇದರ ಪರಿಣಾಮವಾಗಿ, 'ತುಡುವೆ' ಜೇನುಗಳು ಸಂಸಾರ ಸಮೇತ ಗೂಡನ್ನು ಬಿಟ್ಟು ಪಲಾಯನ ಮಾಡುತ್ತಿದ್ದರೆ, 'ಮೆಲ್ಲಿಫೆರಾ' ಪ್ರಭೇದದ ನೊಣಗಳು ಗೂಡಿನೊಳಗೇ ಪ್ರಾಣಬಿಡುತ್ತಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ, ಈ ಕೀಟಗಳು ಜೇನುಗೂಡಿನಲ್ಲಿ ಬಿಡುವ ಒಂದು ರೀತಿಯ ವಿಶಿಷ್ಟ ಲೋಳೆಯು ಶುದ್ಧವಾದ ಜೇನುತುಪ್ಪವನ್ನು ಹುಳಿಯಾಗಿಸಿ, ಅದನ್ನು ಮನುಷ್ಯರ ಬಳಕೆಗೆ ಬಾರದಂತೆ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಭಾರತವು ಜಗತ್ತಿನ ಎರಡನೇ ಅತಿದೊಡ್ಡ ಜೇನು ರಫ್ತುದಾರ ರಾಷ್ಟ್ರವಾಗಿದ್ದು, ಕರ್ನಾಟಕದ ಜೇನು ಕೂಡ ಅಂತರಾಷ್ಟ್ರೀಯ ಮಾರುಕಟ್ಟೆಗೆ ಸೇರುತ್ತದೆ. ಭಾರತದ ಒಟ್ಟು ಜೇನು ಉತ್ಪಾದನೆಯಲ್ಲಿ ಕರ್ನಾಟಕವು ಸುಮಾರು 8% ರಿಂದ 10% ರಷ್ಟು ಕೊಡುಗೆ ನೀಡುತ್ತದೆ.
ದೇಶದ ಪ್ರಮುಖ ಜೇನು ಉತ್ಪಾದಕ ರಾಜ್ಯಗಳು
ಗ್ರಾಫಿಕ್ಸ್ - ಪ್ರದೀಪ್ ಕುಮಾರ್ ಜೆ.
ಕರ್ನಾಟಕದಲ್ಲಿ ಅತೀ ಹೆಚ್ಚು ಜೇನು ಕೃಷಿ ಮಾಡುವ ಜಿಲ್ಲೆಗಳು
ಗ್ರಾಫಿಕ್ಸ್ - ಪ್ರದೀಪ್ ಕುಮಾರ್ ಜೆ.
ಕೃಷಿ ಇಳುವರಿಯ ಮೇಲೆ ಜೇನುನೊಣಗಳ ಪ್ರಭಾವ
ಜೇನು ಸಾಕಣೆಯು ಕೇವಲ ಜೇನುತುಪ್ಪ ಮತ್ತು ಮೇಣದ ಉತ್ಪಾದನೆಗೆ ಸೀಮಿತವಾಗಿಲ್ಲ. ಜೇನುನೊಣಗಳು ಹೂವಿನಿಂದ ಹೂವಿಗೆ ಹಾರುವಾಗ ಪರಾಗವನ್ನು ವರ್ಗಾಯಿಸುವುದರಿಂದ ಬೆಳೆಗಳ ಫಸಲೀಕರಣ ಪ್ರಕ್ರಿಯೆ ಉತ್ತಮಗೊಂಡು, ಫಸಲಿನ ಗುಣಮಟ್ಟ ಮತ್ತು ಪ್ರಮಾಣ ಎರಡೂ ಹೆಚ್ಚಾಗುತ್ತವೆ. ಸಂಶೋಧನೆಗಳ ಪ್ರಕಾರ, ಜೇನು ಸಾಕಣೆಯಿಂದ ಸೂರ್ಯಕಾಂತಿ ಬೆಳೆಯಲ್ಲಿ ಶೇಕಡಾ 30% ರಿಂದ 40% ರಷ್ಟು ಇಳುವರಿ ಹೆಚ್ಚಳ ಕಂಡುಬಂದರೆ, ಸಾಸಿವೆ ಬೆಳೆಯಲ್ಲಿ ಶೇಕಡಾ 20% ರಿಂದ 25% ರಷ್ಟು ಅಧಿಕ ಇಳುವರಿ ಪಡೆಯಬಹುದು. ಅದೇ ರೀತಿ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ ಮತ್ತು ಏಲಕ್ಕಿಯಲ್ಲಿ ಶೇಕಡಾ 15% ರಿಂದ 20% ರಷ್ಟು ಹೆಚ್ಚಿನ ಫಸಲು ಬರುತ್ತದೆ.
ಜೇನು ಕೃಷಿಯು ರೈತರಿಗೆ ಜೇನುತುಪ್ಪದ ಮಾರಾಟದಿಂದ ಬರುವ ಆದಾಯದ ಜೊತೆಗೆ, ಮುಖ್ಯ ಬೆಳೆಗಳ ಇಳುವರಿಯನ್ನು ಹೆಚಿಸುತ್ತದೆ. ಇದೀಗ ಸಮೀಕ್ಷೆಗೊಳಪಟ್ಟ ಜೇನು ಕುಟುಂಬಗಳಲ್ಲಿ ಶೇಕಡಾ 58ಕ್ಕೂ ಹೆಚ್ಚು ಈಗಾಗಲೇ ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ. ಇದು ಕೇವಲ ಜೇನುತುಪ್ಪದ ಉತ್ಪಾದನೆಯ ಕುಸಿತವಲ್ಲ, ಬದಲಿಗೆ ಇಡೀ ಪರಿಸರ ವ್ಯವಸ್ಥೆಯ ಪರಾಗಸ್ಪರ್ಶ ಪ್ರಕ್ರಿಯೆಗೆ ಕೊಡಲಿ ಪೆಟ್ಟು ನೀಡುವ ಅಪಾಯವಾಗಿದೆ.

