ಬೆಂಗಳೂರಿನಲ್ಲಿ ಗಾಳಿ ಸಹಿತ ಭಾರೀ ಮಳೆ
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯು 133 ವರ್ಷಗಳ ಹಿಂದಿನ ಹವಾಮಾನ ದಾಖಲೆಯನ್ನು ಮುರಿಯುವ ಮೂಲಕ ಜೂನ್‌ನಲ್ಲಿ ಅತಿ ಹೆಚ್ಚು ಮಳೆಯಾದ ದಿನ ಎಂಬ ದಾಖಲೆಯನ್ನು ನಿರ್ಮಿಸಿದೆ.
ಕರ್ನಾಟಕ ಕರಾವಳಿಯಲ್ಲಿ ನೈರುತ್ಯ ಮಾನ್ಸೂನ್ ಅಸ್ತವ್ಯಸ್ತವಾಗುತ್ತಿರುವ ಬೆನ್ನಲ್ಲೇ, ಭಾನುವಾರ ಸಂಜೆ ಬೆಂಗಳೂರಿನಾದ್ಯಂತ ತೀವ್ರ ಗಾಳಿ- ಗುಡುಗು ಸಹಿತ ದಾಖಲೆಯ ಮಳೆಯಾಗಿದೆ! ರಾತ್ರಿಯವರೆಗೂ ಏಕರೂಪವಾಗಿ ಸುರಿದ ಭಾರೀ ಮಳೆಯು 133 ವರ್ಷಗಳ ಹಿಂದಿನ ಹವಾಮಾನ ದಾಖಲೆಯನ್ನು ಮುರಿಯುವ ಮೂಲಕ ಜೂನ್‌ನಲ್ಲಿ ಅತಿ ಹೆಚ್ಚು ಮಳೆಯಾದ ದಿನ ಎಂಬ ದಾಖಲೆಯನ್ನು ನಿರ್ಮಿಸಿದೆ. ಭಾನುವಾರ ಮಧ್ಯರಾತ್ರಿಯವರೆಗೆ ಬೆಂಗಳೂರಿನಲ್ಲಿ 111 ಮಿಮೀ ಮಳೆಯಾಗಿದೆ.
1891ರ ಜೂನ್ 16 ರಂದು ಬೆಂಗಳೂರಿನಲ್ಲಿ 101.6 ಮಿಮೀ ಮಳೆಯಾಗಿ ದಾಖಲೆ ಬರೆದಿತ್ತು. ಬೆಂಗಳೂರಿನಲ್ಲಿ ಜೂನ್ ತಿಂಗಳ ಸರಾಸರಿ ಮಳೆ ಸುಮಾರು 110.3 ಮಿಮೀ. ಆದರೂ ಜೂನ್‌ನ ಆರಂಭದ ಮೊದಲ ಎರಡು ದಿನಗಳಲ್ಲಿ ದಿನಗಳಲ್ಲಿ ನಗರದಲ್ಲಿ ಈಗಾಗಲೇ 120mm ಗಿಂತ ಹೆಚ್ಚು ಮಳೆಯಾಗಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಗಾಳಿ ಸಹಿತ ಸುರಿದ ಮಳೆಯಿಂದ ನಮ್ಮ ಮೆಟ್ರೋ ಪರ್ಪಲ್ ಲೈನ್‌ನ ರೈಲು ಹಳಿ ಮೇಲೆ ಮರದ ಕೊಂಬೆಯೊಂದು ಬಿದ್ದಿದ್ದು,ಇದರಿಂದ ಆ ಮಾರ್ಗದಲ್ಲಿ ಕೆಲ ನಿಲ್ದಾಣಗಳ ನಡುವೆ ರೈಲುಗಳ ಸಂಚಾರ ಬಂದ್ ಮಾಡಲಾಗಿತ್ತು. ಕೊಂಬೆಗಳನ್ನು ತೆರವುಗೊಳಿಸಿದ ಬಳಿಕ ಮತ್ತೆ ರೈಲು ಸಂಚಾರ ಆರಂಭ ಮಾಡಲಾಯಿತು.
ಕೆಲವೆಡೆ ಗಂಟೆಗಟ್ಟಲೆ ಮಳೆ ಸುರಿದಿದ್ದರಿಂದ ರಸ್ತೆಯಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಎಕ್ಸ್ ಪೋಸ್ಟ್‌ನಲ್ಲಿ, ಜಂಟಿ ಪೊಲೀಸ್ ಟ್ರಾಫಿಕ್ ಕಮಿಷನರ್ ಎಂಎನ್ ಅನುಚೇತ್, “ಭಾರೀ ಮಳೆಯಿಂದಾಗಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ 58 ಸ್ಥಳಗಳಲ್ಲಿ ನೀರು ಮತ್ತು 39 ಸ್ಥಳಗಳಲ್ಲಿ ಮರಗಳು ಬಿದ್ದಿವೆ. ಜನದಟ್ಟಣೆ ಹೆಚ್ಚಿದೆ. ರಸ್ತೆಗಳನ್ನು ತೆರವುಗೊಳಿಸಲು ನಾಗರಿಕ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂದು ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದ್ದರು.
260ಕ್ಕೂ ಹೆಚ್ಚು ಮರಗಳು ಧರೆಗೆ
ಇನ್ನೊಂದೆಡೆ ಮಳೆ ಅಬ್ಬರಕ್ಕೆ ನಗರದಲ್ಲಿ ಸುಮಾರು 260ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಬಹುತೇಕ ಜಯನಗರ. ಬಸವನಗುಡಿ ಸುತ್ತಮುತ್ತಲಿನಲ್ಲಿ 100ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಕಾರಿನಲ್ಲಿ ಸಂಚರಿಸುತ್ತಿರುವಾಗ ಮರಗಳು ಉರುಳಿದ ಪರಿಣಾಮ ಮೂರು ಜನರು ಗಾಯಗೊಂಡಿದ್ದಾರೆ. ಆರ್‌ಆರ್‌ನಗರದಲ್ಲಿ ಒಬ್ಬರು ಮತ್ತು ಜಯನಗರದಲ್ಲಿ ಇಬ್ಬರಿಗೆ ಗಾಯವಾಗಿದೆ. ಧರೆಗೆ ಉರುಳಿದ ಮರಗಳನ್ನು ಬಿಬಿಎಂಪಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತರೆವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ರಸ್ತೆಗಳು ಜಲಾವೃತ
ಧಾರಾಕಾರ ಸುರಿದ ಮಳೆಯ ಪರಿಣಾಮ ಕೆಲವೇ ನಿಮಿಷಗಳಲ್ಲಿ ರಸ್ತೆಗಳು ಜಲಾವೃತಗೊಂಡು ನದಿಗಳಂತಾಗಿದ್ದವು. ಏರ್‌ಪೋರ್ಟ್ ರಸ್ತೆ, ಹೊಸೂರು ರಸ್ತೆ, ಪೀಣ್ಯ, ಕೋರಮಂಗಲ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ಹೆಬ್ಬಾಳ ಮತ್ತಿತರ ಪ್ರದೇಶಗಳಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಜಲಾವೃತಗೊಂಡಿದ್ದರಿಂದ ತೀವ್ರ ದಟ್ಟಣೆ ಉಂಟಾಗಿತ್ತು.
ನಗರದ ಹಲವು ಪ್ರದೇಶ ಜಲಾವೃತ
ಭಾನುವಾರ ಒಂದು ಗಂಟೆಗೂ ಹೆಚ್ಚು ಕಾಲ ಮಿಂಚು ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದರಿಂದ ನಗರದ 50ಕ್ಕೂ ಹೆಚ್ಚು ಪ್ರದೇಶಗಳು ಜಲಾವೃತವಾಗಿತ್ತು. ಭಾರೀ ಮಳೆಯಿಂದಾಗಿ ನಗರದ ಆನಂದರಾವ್ ಸರ್ಕಲ್ ಹಾಗೂ ಶೇಷಾದ್ರಿಪುರ ಭಾಗದ ಅಂಡರ್ಪಾಸ್‌ಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಹೊರಮಾವು, ಕಾಟನ್ಪೇಟೆ, ಪುಲಕೇಶಿ ನಗರ, ದೊರೆಸಾನಿಪಾಳ್ಯ, ವಿದ್ಯಾಪೀಠದಲ್ಲಿ, ಕೋಡಿಹಳ್ಳಿ, ಪಟ್ಟಾಭಿರಾಮನಗರ, ಕುಶಾಲನಗರ, ದೊಡ್ಡನೆಕ್ಕುಂದಿ ಸೇರಿದಂತೆ ನಗರದ ಹಲವು ಭಾಗದಲ್ಲಿ ಭಾರೀ ಮಳೆಯಾಗಿರುವುದು ವರದಿಯಾಗಿದೆ.
ಮಳೆ ನೀರು ರಸ್ತೆಯಲ್ಲೇ ನಿಂತ ಪರಿಣಾಮ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ನಾಯಂಡಹಳ್ಳಿ ಜಂಕ್ಷನ್ ಮಾರ್ಗವಾಗಿ ಬಿಎಚ್ಇಎಲ್ ಕಡೆಗೆ, ಖೋಡೆ ಸರ್ಕಲ್ನಿಂದ ಲುಲು ಮಾಲ್ ಮಾರ್ಗ, ರಾಜೀವ್ ಗಾಂಧಿ ಜಂಕ್ಷನ್ನಿಂದ ಮಂತ್ರಿಮಾಲ್ ಹಾಗೂ ಹೆಬ್ಬಾಳ ವೃತ್ತದ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಪರದಾಡಿದರು.
ಮಳೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಳೆ ಸಂಬಂಧಿತ ದೂರುಗಳಿಗೆ ಸ್ಪಂದಿಸುವಂತೆ ಪಾಲಿಕೆಯ ಉನ್ನತಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ನಗರದಲ್ಲಿ 103.5 ಎಂಎಂ ಮಳೆ ಸುರಿದಿದ್ದು, ವಿದ್ಯಾಪೀಠದಲ್ಲಿ ಗರಿಷ್ಠ ಅಂದರೆ 86.50 ಎಂಎಂ, ಕಾಟನ್ ಪೇಟೆಯಲ್ಲಿ 84.50 ಎಂಎಂ, ಹಂಪಿನಗರ, ಹೊರಮಾವು ಪ್ರದೇಶದಲ್ಲಿ 80 ಎಂಎಂ ಕೊಡಿಗೆಹಳ್ಳಿಯಲ್ಲಿ 78.50 ಎಂಎಂ ಮಳೆಯಾಗಿದೆ. ಐಎಂಡಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಬೆಂಗಳೂರಿಗೆ 15 ದಿನ ಮೊದಲೇ ಮುಂಗಾರು ಮಳೆ ಆಗಮಿಸಿದ್ದು, ಇನ್ನೂ ಹಲವಾರು ದಿನಗಳ ಕಾಲ ಇದೇ ರೀತಿ, ಭಾರೀ ಮಳೆ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮಾತ್ರವಲ್ಲದೆ ಕರ್ನಾಟಕದ ಹಲವು ಪ್ರದೇಶಗಳಿಗೆ ಮುಂದಿನ 24 ಗಂಟೆ ಅವಧಿಯಲ್ಲಿ ಭಾರಿ & ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.