ಮತ್ತೆ ʼಜೈ ಶ್ರೀರಾಮ್‌ʼ ಎಂದ ಎಚ್‌.ಡಿ. ಕುಮಾರಸ್ವಾಮಿ
x
ಎಚ್‌.ಡಿ ಕುಮಾರಸ್ವಾಮಿ

ಮತ್ತೆ ʼಜೈ ಶ್ರೀರಾಮ್‌ʼ ಎಂದ ಎಚ್‌.ಡಿ. ಕುಮಾರಸ್ವಾಮಿ

ಎಚ್‌.ಡಿ ಕುಮಾರಸ್ವಾಮಿ ಮತ್ತೆ ಜೈ ಶ್ರೀರಾಮ್‌ ಎಂದು ಹೇಳಿದ್ದಾರೆ. ಬಿಜೆಪಿ - ಜೆಡಿಎಸ್‌ ಮೈತ್ರಿ ನಂತರ ಕುಮಾರಸ್ವಾಮಿ ಜೈಶ್ರೀರಾಮ್‌ ಎನ್ನುತ್ತಿದ್ದಾರೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿಂದೆಯೂ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರನ್ನು ಹೊಗಳಿ ಜೈಶ್ರೀರಾಮ್‌ ಘೋಷಣೆ ಮಾಡಿದ್ದರು.


ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಮತ್ತೆ "ಜೈಶ್ರೀರಾಮ್" ಎಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ, ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸುವುದು ಹಾಗೂ ಜೈಶ್ರೀರಾಮ್ ಎಂದು ಹೇಳುವುದನ್ನ್ನು ಮುಂದುವರಿಸಿದ್ದಾರೆ.

ಬುಧವಾರ ಶ್ರೀ ರಾಮನವಮಿ ಹಬ್ಬದ ಶುಭಾಶಯ ಕೋರಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ʻಜೈ ಶ್ರೀರಾಮ್ʼ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ||ಜೈ ಶ್ರೀರಾಮ್|| ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರರನ್ನು ಸ್ಮರಿಸಿ ಪೂಜಿಸೋಣ ಹಾಗೂ ಈ ದುರಿತ ಕಾಲವನ್ನು ದೂರ ಮಾಡಿ ಶಾಂತಿ, ನೆಮ್ಮದಿ, ಸಮೃದ್ಧಿ ಕರುಣಿಸು ಎಂದು ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರ ಟ್ವೀಟ್‌ಗೆ ಬಹುತೇಕರು ಶುಭಕೋರಿದ್ದಾರೆ. ಆದರೆ, ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಮುತ್ತುರಾಜ್ ಎನ್ನುವವರು, “ನಿಮ್ಮನ್ನು ಶ್ರೀರಾಮನೂ ನಂಬಲ್ಲ” ಎಂದಿದ್ದಾರೆ.

ಈ ಹಿಂದೆಯೂ ಜೈಶ್ರೀರಾಮ್ ಎಂದಿದ್ದರು..

ಎಚ್.ಡಿ ಕುಮಾರಸ್ವಾಮಿ ಅವರು, ಬಿಜೆಪಿಯೊ೦ದಿಗೆ ಮೈತ್ರಿ ಮಾಡಿಕೊಂಡ ನಂತರ ಈ ಹಿಂದೆಯೂ ಒಮ್ಮೆ ಜೈ ಶ್ರೀರಾಮ್ ಎಂದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿರುವ ಆರ್‌ಎಸ್‌ಎಸ್‌ನ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರು,”ಡಾ.ಪ್ರಭಾಕರ ಭಟ್ ಅವರು ಸಮಾಜ ಶಿಕ್ಷಣಕ್ಕೆ ನೀಡಿತ್ತಿರುವ ಕೊಡುಗೆ ಅಪಾರವಾಗಿದೆ. ಬಾಲ್ಯದಲ್ಲಿ ನಾನು ಶ್ರೀರಾಮನ ಭಜನೆಯನ್ನು ಮಾಡುತ್ತಿದ್ದ ದಿನವನ್ನು ಈ ಕ್ರೀಡೋತ್ಸವ ಮತ್ತೆ ನೆನಪಿಸಿದೆ. ಜೈಶ್ರೀರಾಮ್” ಎಂದು ಹೇಳಿದ್ದರು.

ಸಿದ್ದರಾಮಯ್ಯ ಶುಭಾಶಯ

ಕುಮಾರಸ್ವಾಮಿ ಅವರು ಜೈ ಶ್ರೀರಾಮ್‌ ಘೋಷಣೆ ಮೂಲಕ ರಾಜಕೀಯ ವರಸೆ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅಯೋಧ್ಯೆ ರಾಮಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ರಾಮಮಂದಿರ ದೇವಸ್ಥಾನದ ಶಂಕುಸ್ಥಾಪನೆ ಮಾಡಿದ್ದರು. ಅಂದು ಅವರು ಸ್ವತಹ ಜೈ ಶ್ರೀರಾಮ್ ಎಂದು ಘೋಷಿಸಿದ್ದಲ್ಲದೆ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರ ಬಾಯಿಂದಲೂ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಹೇಳಿಸಿದ್ದರು.

ಆದರೆ ಈ ಬಾರಿ ರಾಮನವಮಿ ಸಂದರ್ಭದಲ್ಲಿ ಟ್ವೀಟ್‌ ಮಾಡಿರುವ ಅವರು, "ಶ್ರೀರಾಮಚಂದ್ರನ ವಚನ ಪಾಲನೆ, ಪ್ರಜಾಸೇವೆಯ ಬದ್ಧತೆ, ನ್ಯಾಯ ನಿಷ್ಠುರತೆ, ಪ್ರೀತಿ - ಮಮತೆಯ ಮಾನವೀಯ ಮೌಲ್ಯಗಳು ನಮ್ಮೆಲ್ಲರ ಆದರ್ಶವಾಗಲಿ. ಪಾನಕ - ಕೋಸಂಬರಿಯ ಜೊತೆ ಸ್ನೇಹ - ಸೌಹಾರ್ದತೆಯು ಮಿಳಿತಗೊಳ್ಳಲಿ, ದ್ವೇಷ ಅಳಿದು ಪ್ರೀತಿಯ ಬೆಳಕು ಎಲ್ಲೆಡೆ ಬೆಳಗಲಿ ಎಂದು ಹಾರೈಸುತ್ತೇನೆ. ಸರ್ವರಿಗೂ ರಾಮನವಮಿಯ ಶುಭಾಶಯಗಳು," ಎಂದಿದ್ದಾರೆ.

Read More
Next Story