
2024 ಮಾರ್ಚ್‌ನಿಂದ ಜಿಪಿಎಸ್ ಆಧಾರಿತ ಹೆದ್ದಾರಿ ಟೋಲ್ ಕಲೆಕ್ಷನ್
ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಬದಲಿಸಲು ಸರ್ಕಾರವು ಮುಂದಿನ ವರ್ಷ ಮಾರ್ಚ್ ವೇಳೆಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲಿದೆ.
ಹೊಸದಿಲ್ಲಿ: ಹಾಲಿ ಇರುವ ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಬದಲಿಸಲು ಸರ್ಕಾರವು ಮುಂದಿನ ವರ್ಷ ಮಾರ್ಚ್ ವೇಳೆಗೆ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು ಹಾಗೂ ಹೆದ್ದಾರಿಗಳಲ್ಲಿ ಪ್ರಯಾಣಿಸುವ ನಿಖರ ದೂರವನ್ನು ಮಾನದಂಡವಾಗಿ ಇಟ್ಟುಕೊಂಡು ಟೋಲ್ ಶುಲ್ಕ ವಿಧಿಸುವ ಉದ್ದೇಶವನ್ನು ಇದು ಹೊಂದಿದೆ. ಮಾತ್ರವಲ್ಲದೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನಗಳನ್ನು ನಿಲ್ಲಿಸದೆ ಸ್ವಯಂಚಾಲಿತ ಟೋಲ್ ಸಂಗ್ರಹವನ್ನು ಸಕ್ರಿಯಗೊಳಿಸಲು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆಯ (ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳು) ಎರಡು ಪ್ರಾಯೋಗಿಕ ಯೋಜನೆಗಳನ್ನು ನಡೆಸಿದೆ ಎಂದು ಗಡ್ಕರಿ ಹೇಳಿದ್ದಾರೆ.
2018-19ರಲ್ಲಿ ಟೋಲ್ ಪ್ಲಾಜಾದಲ್ಲಿ ವಾಹನಗಳು ಸರಾಸರಿ 8 ನಿಮಿಷ ಕಾಲ ಕಾಯಬೇಕಾಗಿತ್ತು. 2020-21 ಮತ್ತು 2021-22ರ ಅವಧಿಯಲ್ಲಿ ಫಾಸ್ಟ್‌ಟ್ಯಾಗ್‌ಗಳನ್ನು ಪರಿಚಯಿಸಿದರಿಂದ ವಾಹನಗಳ ಸರಾಸರಿ ಕಾಯುವ ಸಮಯ 47 ಸೆಕೆಂಡುಗಳಿಗೆ ಕಡಿಮೆ ಮಾಡಲಾಗಿದೆ. ಕೆಲವು ಸ್ಥಳಗಳಲ್ಲಿ, ವಿಶೇಷವಾಗಿ ನಗರಗಳ ಸಮೀಪದಲ್ಲಿ, ಜನನಿಬಿಡ ಪಟ್ಟಣಗಳಲ್ಲಿ ಕಾಯುವ ಸಮಯದಲ್ಲಿ ಗಣನೀಯ ಸುಧಾರಣೆ ಕಂಡುಬಂದರೂ, ಸಂಚಾರ ದಟ್ಟಣೆಯ ಸಮಯದಲ್ಲಿ ಟೋಲ್ ಪ್ಲಾಜಾಗಳಲ್ಲಿ ವಿಳಂಬವಾಗುತ್ತಿದೆ. ಆ ಎಲ್ಲಾ ಅಂಶ ಗಮನಿಸಿ ಹೊಸ ವ್ಯವಸ್ಥೆ ಜಾರಿಗೆ ಯೋಜಿಸಲಾಗಿದೆ ಎಂದಿದ್ದಾರೆ.
ಈ ಮಧ್ಯೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು 1,000 ಕಿಲೋಮೀಟರ್‌ಗಿಂತ ಕಡಿಮೆ ಉದ್ದದ ಹೆದ್ದಾರಿ ಯೋಜನೆಗಳಿಗಾಗಿ ಬಿಲ್ಡ್ ಆಪರೇಟ್ ಟ್ರಾನ್ಸ್‌ಫರ್ (ಬಿಒಟಿ) ಮಾದರಿಯಲ್ಲಿ 1.5-2 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಸ್ತೆ ಯೋಜನೆಗಳನ್ನು ಸರ್ಕಾರ ಬಿಡ್ ಮಾಡಲಿದೆ ಎಂದು ಗಡ್ಕರಿ ಹೇಳಿದರು.