ಥಾಯ್ಲೆಂಡ್‌ನ ಮಾಜಿ ಪ್ರಧಾನಿ ಥಾಕ್ಸಿನ್ ಬಿಡುಗಡೆ
ಬ್ಯಾಂಕಾಕ್, ಫೆಬ್ರವರಿ 18: ಥಾಯ್ಲೆಂಡ್‌ನ ಮಾಜಿ ಪ್ರಧಾನಿ ಥಾಕ್ಸಿನ್ ಶಿನಾವಾತ್ರಾ ಅವರು ಭ್ರಷ್ಟಾಚಾರ ಸಂಬಂಧಿತ ಅಪರಾಧಗಳಿಗಾಗಿ ಆರು ತಿಂಗಳು ಬಂಧನದ ಬಳಿಕ ಭಾನುವಾರ ಮುಂಜಾನೆ ಪೆರೋಲ್ ಮೇಲೆ ಬಿಡುಗಡೆಯಾದರು.
ಸೂರ್ಯೋದಯಕ್ಕೆ ಮುಂಚೆಯೇ ಪೊಲೀಸ್ ಜನರಲ್ ಆಸ್ಪತ್ರೆಯಿಂದ ಬೆಂಗಾವಲು ಪಡೆಯ ಕಾರಿನಲ್ಲಿ ಹೊರಟು, ಒಂದು ಗಂಟೆ ನಂತರ ಪಶ್ಚಿಮ ಬ್ಯಾಂಕಾಕ್‌ನಲ್ಲಿರುವ ನಿವಾಸಕ್ಕೆ ಆಗಮಿಸಿದರು.ʻಮನೆಗೆ ಸ್ವಾಗತʼ ಮತ್ತು ʻನಾವು ಈ ದಿನಕ್ಕಾಗಿ ಕಾಯುತ್ತಿದ್ದೆವುʼ ಎಂಬ ಬರಹಗಳಿರುವ ಬ್ಯಾನರ್ ಗಳು ಮನೆಯ ಮುಂಭಾಗದ ಗೇಟ್‌ನಲ್ಲಿ ನೇತಾಡುತ್ತಿದ್ದುದು ಕಂಡುಬಂದಿದೆ.
ಕಳೆದ ಎರಡು ದಶಕಗಳಿಂದ ಥಾಯ್ ರಾಜಕೀಯದ ಶಕ್ತಿ ಕೇಂದ್ರವಾಗಿದ್ದ ಥಾಕ್ಸಿನ್ 2001ರಿಂದ ಅಧಿಕಾರದಲ್ಲಿದ್ದು, 2006 ರ ದಂಗೆಯಲ್ಲಿ ಅಧಿಕಾರ ಕಳೆದುಕೊಂಡರು. ಅಧಿಕಾರ ದುರುಪಯೋಗ ಮತ್ತು ಇತರ ದುಷ್ಕೃತ್ಯಗಳಿಗೆ ಶಿಕ್ಷೆಗೊಳಗಾಗಿ, ಒಂದು ದಶಕಕ್ಕೂ ಹೆಚ್ಚು ದೇಶದಿಂದ ಹೊರಹೋಗಿ, ಕಳೆದ ಆಗಸ್ಟ್‌ನಲ್ಲಿ ಮರಳಿದರು. ಥಾಕ್ಸಿನ್ ಅವರ ಮೇಲಿನ ಆರೋಪಗಳು ರಾಜಕೀಯಪ್ರೇರಿತ ಎಂದ ರಾಜ ಮಹಾ ವಜಿರಾಲಾಂಗ್‌ಕಾಂಗ್, ಅವರಿಗೆ ವಿಧಿಸಿದ್ದ ಎಂಟು ವರ್ಷಗಳ ಶಿಕ್ಷೆಯನ್ನು ಸೆಪ್ಟೆಂಬರ್ 1 ರಂದು ಒಂದು ವರ್ಷಕ್ಕೆ ಇಳಿಸಿದರು.
ಗಂಭೀರ ಕಾಯಿಲೆಗಳಿರುವ, ಅಂಗವಿಕಲ ಹಾಗೂ 70 ವರ್ಷಕ್ಕಿಂತ ಮೇಲ್ಪಟ್ಟ ಕೈದಿಗಳಿಗೆ ಶೀಘ್ರ ಬಿಡುಗಡೆಯ ಸಾಧ್ಯತೆ ಇರುವುದರಿಂದ, ಕಳೆದ ವಾರ ಥಾಕ್ಸಿನ್ ಅವರಿಗೆ ಪೆರೋಲ್ ನೀಡಲಾಯಿತು. ತಕ್ಸಿನ್ ಅವರಿಗೆ ಈಗ 74 ವರ್ಷ. ಅವರನ್ನು ಬ್ಯಾಂಕಾಕ್‌ನ ಪೊಲೀಸ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಇದು ಪಕ್ಷಪಾತ ಎಂದು ವಿರೋಧಿಗಳು ಆರೋಪಿಸಿದ್ದರು.