ELECTORAL BONDS | ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖೆಗೆ ಪ್ರಶಾಂತ್ ಭೂಷಣ್ ಆಗ್ರಹ
x
ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ELECTORAL BONDS | ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖೆಗೆ ಪ್ರಶಾಂತ್ ಭೂಷಣ್ ಆಗ್ರಹ

ʻಚುನಾವಣಾ ಬಾಂಡ್‌ನ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕುʼ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ. ಎಸ್‌ಐಟಿ ರಚನೆಗೆ ಒತ್ತಾಯಿಸಿದ್ದಾರೆ.


ʻಚುನಾವಣಾ ಬಾಂಡ್ (Electoral Bonds) ಹಗರಣದ ಸಂಪೂರ್ಣ ತನಿಖೆ ನಡೆಯಬೇಕು. ಈ ಹಗರಣದ ಸತ್ಯಾಸತ್ಯತೆ ತಿಳಿಯಲು ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕುʼ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಆಗ್ರಹಿಸಿದರು.

ಶನಿವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ʻಚುನಾವಣಾ ಬಾಂಡ್ ಹಗರಣದ ಬಗ್ಗೆ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಇಷ್ಟರಲ್ಲೇ ಈ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆʼ ಎಂದು ತಿಳಿಸಿದರು.

ʻಜಾರಿ ನಿರ್ದೇಶನಾಲಯ (ಇಡಿ) ನಿರ್ದಿಷ್ಟ ಕಂಪನಿಗಳ ಮೇಲೆ ದಾಳಿ ನಡೆಸುತ್ತದೆ. ಆ ಕಂಪನಿಗಳು ಬಿಜೆಪಿಗೆ ಚುನಾವಣಾ ಬಾಂಡ್ ನೀಡುತ್ತವೆ. ಇದಾದ ಮೇಲೆ ಇಡಿ ಆ ಪ್ರಕರಣವನ್ನು ಕೋಲ್ಡ್ ಸ್ಟೋರೇಜ್ (ಕಡತದಲ್ಲೇ ಉಳಿಸುತ್ತದೆ) ಇರಿಸುತ್ತದೆ. ಅದೇ ರೀತಿ ಆದಾಯ ತೆರಿಗೆ ಇಲಾಖೆ, ನಿರ್ದಿಷ್ವ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತದೆ. ಆ ಸಂಸ್ಥೆಗಳು ಬಿಜೆಪಿಗೆ ಚುನಾವಣಾ ಬಾಂಡ್ಗಳನ್ನು ನೀಡುತ್ತವೆ; ಅದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಕಾರ್ಯಾಚರಣೆ ಕೈಬಿಡುತ್ತದೆ. ಈ ಮಾದರಿ ಸಿಬಿಐನಲ್ಲೂ ಮುಂದುವರಿದಿದೆ. ಹಲವು ಬೃಹತ್ ಕಂಪನಿಗಳ ವಿಚಾರದಲ್ಲಿ ಈ ಬೆಳವಣಿಗೆ ನಡೆದಿರುವುದು ದೃಢಪಟ್ಟಿದೆʼ ಎಂದು ದೂರಿದರು.

ʻವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಅವರು, “ಇದು ಭಾರತದಲ್ಲಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಬಹುದೊಡ್ಡ ಹಗರಣ” ಎಂದು ಹೇಳಿದ್ದಾರೆ ಎಂದು ಉಲ್ಲೇಖಿಸಿದ ಪ್ರಶಾಂತ್‌ ಭೂಷಣ್‌, ಈ ಹಗರಣದ ಗಾತ್ರವನ್ನು 16,500 ಕೋಟಿ (ಚುನಾವಣಾ ಬಾಂಡ್) ಎಂದಷ್ಟೇ ಪರಿಗಣಿಸಬಾರದು. ಕಂಪನಿಗಳು ಒಂದು ಸಾವಿರ ಕೋಟಿ ಚುನಾವಣಾ ಬಾಂಡ್ ಖರೀದಿಸಿದರೆ, ಅದರ ಹತ್ತು ಪಟ್ಟು ಹಣದ ಕಾಮಗಾರಿಗಳನ್ನು ಗುತ್ತಿಗೆಗೆ ಪಡೆದಿವೆ. ಉದಾ: ಮೇಘಾ ಎಂಜೆನಿಯರಿಂಗ್ 140 ಕೋಟಿ ಚುನಾವಣಾ ಬಾಂಡ್ ಖರೀದಿಸಿದ್ದು, 14 ಸಾವಿರ ಕೋಟಿ ಮೊತ್ತದ ಟನಲ್ ಕಾಮಗಾರಿ ಗುತ್ತಿಗೆಯನ್ನು ಮಹಾರಾಷ್ಟ್ರದಲ್ಲಿ ಪಡೆದಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಇದು ಚುನಾವಣಾ ಬಾಂಡ್‌ನ ಒಂದು ಅಂದಾಜು ನೀಡುತ್ತದೆ. 16 ಸಾವಿರ ಕೋಟಿ ಚುನಾವಣಾ ಬಾಂಡ್‌ ಬದಲಾಗಿ 16 ಲಕ್ಷ ಕೋಟಿ ಮೊತ್ತದ ಗುತ್ತಿಗೆ ಕಾಮಗಾರಿಗಳ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಅಲ್ಲದೇ ತನಿಖಾ ಸಂಸ್ಥೆಗಳು ಕೆಲವು ಕಂಪನಿಗಳ ವಿರುದ್ಧ ತನಿಖೆ ನಡೆಸಿ ವಶಪಡಿಸಿಕೊಳ್ಳಬಹುದಾಗಿದ್ದ ಕೋಟ್ಯಾಂತರ ರೂಪಾಯಿ ಸಹ ಚುನಾವಣಾ ಬಾಂಡ್‌ನಿಂದಾಗಿ ಕೈತಪ್ಪಿದೆʼ ಎಂದು ವಿವರಿಸಿದರು.

ʻಕಳಪೆ ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡುವುದಕ್ಕೆ ಔಷಧೀಯ ಕಂಪನಿಗಳಿಗೆ ಅವಕಾಶ ನೀಡುವ ಮೂಲಕ ಲಕ್ಷಾಂತರ ಜನರನ್ನು ಕೊಲ್ಲುವುದಕ್ಕೆ ಅನುಮತಿ ನೀಡಲಾಗಿದೆ. ಈ ಕಳಪೆ ಗುಣ್ಣಮಟ್ಟದ ಔಷಧಿಗಳನ್ನು ಬಳಸದಂತೆ ತಡೆಯಬೇಕಿತ್ತು. ಆದರೆ, ಕಿಕ್ ಬ್ಯಾಕ್‌ಗಾಗಿ ಇದನ್ನು ಮುಂದುವರಿಸಲಾಯಿತು. ಹೀಗಾಗಿ, ಈ ಬೆಳವಣಿಗೆಗಳು ಹಲವು ಅನುಮಾನಕ್ಕೆ ಕಾರಣವಾಗಿವೆ. ಈ ಬಗ್ಗೆ ಸ್ವತಂತ್ರ್ಯ ತನಿಖೆ ನಡೆಯಬೇಕು. ಕಿಕ್ ಬ್ಯಾಕ್‌ಗಾಗಿ ನಡೆದಿದೆ ಎನ್ನುವುದು ಮೇಲ್ನೋಟ್ಟಕ್ಕೆ ಸಾಬೀತಾಗುತ್ತಿದೆ. ಆದರೆ, ನಿರ್ದಿಷ್ಟ ಸಂಸ್ಥೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿರುವಾಗ ಆ ಸಂಸ್ಥೆ ಆಡಳಿತರೂಢ ಬಿಜೆಪಿಗೆ ಚುನಾವಣಾ ಬಾಂಡ್ ನೀಡುವುದು ಹಾಗೂ ಆ ಕಂಪನಿಯ ತನಿಖೆ ಕೈಬಿಡುವುದರ ಹಿಂದೆ ಯಾರಿದ್ದಾರೆ ಎನ್ನುವುದು ಬಹಿರಂಗವಾಗಬೇಕು. ಆ ಕಂಪನಿಯ ಯಾವ ಅಧಿಕಾರಿ ಇದರಲ್ಲಿ ಪಾಲುದಾರರಾಗಿದ್ದಾರೆ, ಯಾವ ರಾಜಕಾರಣಿ ಈ ಹಗರಣದಲ್ಲಿ ಪಾಲುದಾರರಾಗಿದ್ದರು ಎನ್ನುವುದು ಸಾಬೀತಾಗಬೇಕುʼ ಎಂದು ಆಗ್ರಹಿಸಿದರು.

ʻಚುನಾವಣಾ ಬಾಂಡ್‌ಗಳನ್ನು 1 ಕೋಟಿ ಮೊತ್ತದಿಂದ ಖರೀದಿ ಮಾಡಬಹುದಾಗಿದೆ. ಯಾವುದಾದರೂ ಸ್ಟೇಟ್ ಬ್ಯಾಂಕ್‌ನಿಂದ ಖರೀದಿ ಮಾಡಿ ಅದನ್ನು 15 ದಿನಗಳ ಒಳಗಾಗಿ ಪಕ್ಷಗಳಿಗೆ ನೀಡಬಹುದು. ಆ ಪಕ್ಷಗಳು ಚುನಾವಣಾ ಬಾಂಡ್ ಅನ್ನು ಹಣವಾಗಿ ಪರಿವರ್ತಿಸಿಕೊಳ್ಳಬಹುದು. ಚುನಾವಣಾ ಬಾಂಡ್‌ಗಳಿಗೆ ಕ್ರಮ ಸಂಖ್ಯೆ ಇರಲಿಲ್ಲ. ಅದರ ಬದಲಾಗಿ, ಅಕ್ಷರಗಳನ್ನು ನಿಗದಿ ಮಾಡಲಾಗಿತ್ತು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ(ಎಸ್‌ ಬಿಐ) ಈ ಬಾಂಡ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಆದರೆ, ಸ್ಟೇಟ್ ಬ್ಯಾಂಕ್ ಆಡಳಿತರೂಢ ಬಿಜೆಪಿಯ ಆದೇಶದಂತೆ ಕೆಲಸ ಮಾಡಿದೆ. ಸುಪ್ರೀಂಕೋರ್ಟ್ ಸತತ ಚಾಟಿ ಬೀಸಿದರೂ ಸಂಪೂರ್ಣ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಪಕ್ಷಗಳಿಗೆ ಹಣ ನೀಡುವುದನ್ನು ನಿಲ್ಲಿಸುವ ಉದ್ದೇಶದಿಂದ ಚುನಾವಣಾ ಬಾಂಡ್ ಪರಿಚಯಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ರಾಜಕೀಯ ಪಕ್ಷಗಳಿಗೆ ಹಣ ಸಂದಾಯವಾಗುವುದು (ದೇಣಿಗೆ ರೂಪದಲ್ಲಿ) ನಿಂತಿಲ್ಲʼ ಎಂದರು.

20 ಪಟ್ಟು ಖರ್ಚು ಮಾಡುವಷ್ಟು ಹಣ ಬಿಜೆಪಿ ಬಳಿ ಇದೆ

ʻಲೋಕಸಭೆ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯೂ 75 ಲಕ್ಷ ರೂಪಾಯಿ ವೆಚ್ಚ ಮಾಡುವುದಕ್ಕೆ ಅವಕಾಶ ಇದೆ. ಬಿಜೆಪಿ ದೇಶದಲ್ಲಿ 500 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೂ, ಅಂದಾಜು 400 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಆದರೆ, ಕಳೆದ ಆರು ವರ್ಷಗಳಲ್ಲಿ 8 ಸಾವಿರ ಕೋಟಿಗೂ ಹೆಚ್ಚು ಚುನಾವಣಾ ಬಾಂಡ್ ಸಿಕ್ಕಿದೆ. ಅಂದರೆ ಒಬ್ಬ ಅಭ್ಯರ್ಥಿ ಲೋಕಸಭೆ ಚುನಾವಣೆಯಲ್ಲಿ ವೆಚ್ಚ ಮಾಡಬಹುದಾದ ಪ್ರಮಾಣಕ್ಕಿಂತ 20ಪಟ್ಟು ಮೊತ್ತದ ಹಣವನ್ನು ಬಿಜೆಪಿ ಖರ್ಚು ಮಾಡಲು ಸಾಧ್ಯವಿದೆ. ಇದರಲ್ಲಿ ಯಾವುದೇ ಅರ್ಥವಿಲ್ಲ ಒಬ್ಬ ಅಭ್ಯರ್ಥಿಗೆ ಇಂತಿಷ್ಟೇ ಹಣ ಖರ್ಚು ಮಾಡಬೇಕು ಎಂದು ನಿಯಮ ವಿಧಿಸಿದ್ದೀರಿ. ಆದರೆ, ಹಲವು ಪಟ್ಟು ವೆಚ್ಚ ಮಾಡುವಷ್ಟು ಹಣವಿದೆ. ಹೀಗಾಗಿ, ರೆಪ್ರೆಸಂಟೇಷನ್ ಆಫ್ ಪಿಪಲ್ ಆಕ್ಟ್ (Representation of the People Act) ನಲ್ಲಿ ಚುನಾವಣೆಯಲ್ಲಿ ಹಣ ಬಳಸುವುದಿಲ್ಲ ಎನ್ನುವ ಒಂದು ಸಾಲನ್ನು ಸೇರಿಸಬಹುದಾಗಿತ್ತು. ಚುನಾವಣಾ ಅಭ್ಯರ್ಥಿ ಅಥವಾ ಪಕ್ಷಗಳು ಹಣ ತೆಗೆದುಕೊಳ್ಳುವುದಿಲ್ಲ ಮತ್ತು ಹಣ ವೆಚ್ಚ ಮಾಡುವಂತಿಲ್ಲ ಎನ್ನುವ ಒಂದು ಸಾಲನ್ನು ಸೇರಿಸಬಹುದಾಗಿತ್ತು. ದೇಣಿಗೆಯ ಆಧಾರದ ಮೇಲೆ ಚುನಾವಣೆ ಪದ್ಧತಿ ಅಳವಡಿಸಿಕೊಳ್ಳಬಹುದಾಗಿತ್ತುʼ ಎಂದು ಅಭಿಪ್ರಾಯಪಟ್ಟರು.

ʻಚುನಾವಣಾ ಬಾಂಡ್‌ನ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ತುಂಬಾ ತಡವಾಗಿ ತೀರ್ಪು ಬಂತು. ಆರು ವರ್ಷಗಳ ನಂತರ ಇದರ ತೀರ್ಪು ಬಂತು. ಆ ಅವಧಿಯಲ್ಲಿ ಈ ಹಗರಣದ ಪ್ರಮಾಣ ವೃದ್ಧಿಸಿದೆʼ ಎಂದು ಮಾಹಿತಿ ಹಕ್ಕು ಕಾರ್ಯಕರ್ತೆ, (ಮಾಹಿತಿ ಹಕ್ಕು ಕುರಿತ ರಾಷ್ಟ್ರೀಯ ಅಭಿಯಾನದ ಸದಸ್ಯೆ/ಎನ್‌ಸಿಪಿಆರ್‌ಐ) ಅಂಜಲಿ ಭಾರದ್ವಾಜ್ ಅವರು ಹೇಳಿದರು.

ʻಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಸಂಪೂರ್ಣ ಕಾನೂನು ಬಾಹಿರ ಎಂದು ಹೇಳಿದೆ. ಅಲ್ಲದೇ ತನ್ನ ತೀರ್ಪಿನಲ್ಲಿ, ಚುನಾವಣಾ ಬಾಂಡ್‌ನ ಮಾಹಿತಿ ಹಂಚಿಕೊಳ್ಳದೆ ಇರುವುದು ಆರ್ಟಿಕಲ್ 19/ 1ಎಯ ಉಲ್ಲಂಘನೆʼ ಎಂದು ಹೇಳಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲ ಹರೀಶ್ ನರಸಪ್ಪ ಹಾಜರಿದ್ದರು.

Read More
Next Story