ಅಕ್ರಮ ಗರ್ಭಪಾತ ಜಾಲ ಪ್ರಕರಣ: ವೈದ್ಯನ ಬಂಧನ
ಮೂರು ವರ್ಷಗಳಲ್ಲಿ ಸುಮಾರು 900ಕ್ಕೂ ಅಧಿಕ ಅಕ್ರಮ ಗರ್ಭಪಾತಗಳನ್ನು ನಡೆಸಿರುವ ವೈದ್ಯ ಮತ್ತು ಆತನ ಲ್ಯಾಬ್ ತಂತ್ರಜ್ಞರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ನ.27 (ಪಿಟಿಐ) - ಕಳೆದ ಮೂರು ವರ್ಷಗಳಲ್ಲಿ ಸುಮಾರು 900ಕ್ಕೂ ಅಧಿಕ ಅಕ್ರಮ ಗರ್ಭಪಾತಗಳನ್ನು ನಡೆಸಿರುವ ವೈದ್ಯ ಮತ್ತು ಆತನ ಲ್ಯಾಬ್ ತಂತ್ರಜ್ಞರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವೈದ್ಯ ಡಾ. ಚಂದನ್ ಬಲ್ಲಾಳ್ ಮತ್ತು ಅವರ ಲ್ಯಾಬ್ ಟೆಕ್ನಿಷಿಯನ್ ನಿಸಾರ್ ಅವರು ಮೈಸೂರಿನ ಆಸ್ಪತ್ರೆಯೊಂದರಲ್ಲಿ ಈ ಕೃತ್ಯ ಎಸಗಿದ್ದು, ಪ್ರತಿ ಗರ್ಭಪಾತಕ್ಕೆ ಸುಮಾರು 30,000 ರೂ. ವಸೂಲಿ ಮಾಡುತ್ತಿದ್ದರು ಎಂಬುದನ್ನು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿರ್ದಿಷ್ಟ ದೂರಿನ ಮೇಲೆ ಆರೋಪಿಗಳಿಗೆ ಸೇರಿದ ಜಾಗಗಳ ಮೇಲೆ ದಾಳಿ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕಳೆದ ವಾರ ಇಬ್ಬರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯ ಮ್ಯಾನೇಜರ್ ಮೀನಾ ಮತ್ತು ಸ್ವಾಗತಕಾರಿಣಿ ರಿಜ್ಮಾ ಖಾನ್ ಅವರನ್ನು ಕಳೆದ ವಾರ ಬಂಧಿಸಲಾಗಿತ್ತು.
ಕಳೆದ ವಾರ ಮೈಸೂರು ಸಮೀಪದ ಮಂಡ್ಯದ ಇಬ್ಬರು ಆರೋಪಿಗಳಾದ ಶಿವಲಿಂಗೇಗೌಡ ಮತ್ತು ನಯನಕುಮಾರ್ ಅವರನ್ನು ಬಂಧಿಸಿದ ಬಳಿಕ, ಪೊಲೀಸರು ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆಯ ವ್ಯವಸ್ಥಿತ ಜಾಲವನ್ನು ಬೇಧಿಸಿದ್ದರು. ಪಾತಕಿಗಳು ಗರ್ಭಿಣಿ ಮಹಿಳೆಯನ್ನು ಗರ್ಭಪಾತ ಮಾಡಿಸಲು ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ. ಸ್ಪಷ್ಟ ಮಾಹಿತಿಯ ಮೇಲೆ ಪೊಲೀಸರು ಬೆನ್ನತ್ತಿ ಹಿಡಿದಾಗ ಇಡೀ ಕರಾಳ ದಂಧೆ ಬಯಲಾಗಿತ್ತು.
ವಿಚಾರಣೆ ವೇಳೆ, ಮಂಡ್ಯದ ಆಲೆಮನೆಯೊಂದರಲ್ಲಿ ರಹಸ್ಯ ಅಲ್ಟ್ರಾಸೌಂಡ್ ಸ್ಕ್ಯಾನ್ ಸೆಂಟರ್ ಇರುವ ಬಗ್ಗೆ ಬಂಧಿತ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಮಾಹಿತಿಯ ಆಧಾರದ ಮೇಲೆ ಆಲೆಮನೆಯ ಮೇಲೆ ದಾಳಿ ನಡೆಸಿದಾಗ ಅಲ್ಲಿ ಸುಸಜ್ಜಿತ ಸ್ಕ್ಯಾನಿಂಗ್ ಕೇಂದ್ರ ಇರುವುದು ಪತ್ತೆಯಾಗಿತ್ತು. ಯಾವುದೇ ಅನುಮತಿಯಾಗಲೀ, ಅಧಿಕೃತ ಪರವಾನಗಿಯಂತಹ ದಾಖಲೆಗಳನ್ನಾಗಲೀ ಹೊಂದಿರದ ಆ ಅಕ್ರಮ ಕೇಂದ್ರದಲ್ಲಿ ಸ್ಕಾನಿಂಗ್ ಯಂತ್ರ ಸೇರಿದಂತೆ ಹಲವು ಪರಿಕರಗಳನ್ನು ಆ ವೇಳೆ ವಶಪಡಿಸಿಕೊಳ್ಳಲಾಗಿತ್ತು.
‘‘ಕಳೆದ ಮೂರು ವರ್ಷಗಳಲ್ಲಿ ಆರೋಪಿ ವೈದ್ಯ ತನ್ನ ಸಹಚರರೊಂದಿಗೆ ಸೇರಿ, ಆಲೆಮನೆಯ ಸ್ಕ್ಯಾನಿಂಗ್ ಕೇಂದ್ರದಲ್ಲಿ ಸ್ಕ್ಯಾನಿಂಗ್ ಮಾಡಿಸಿ ಭ್ರೂಣದ ಲಿಂಗಪತ್ತೆ ಮಾಡಿ, ಮಗು ಹೆಣ್ಣಾಗಿದ್ದರೆ, ಭ್ರೂಣಹತ್ಯೆಗೆ ಮೈಸೂರಿನ ತನ್ನ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸುತ್ತಿದ್ದ. ಹಾಗೆ ಮೈಸೂರಿನ ಆ ಆಸ್ಪತ್ರೆಯಲ್ಲಿ ಸುಮಾರು 900 ಅಕ್ರಮ ಗರ್ಭಪಾತ ಮಾಡಿಸಿದ್ದು, ಪ್ರತಿ ಗರ್ಭಪಾತಕ್ಕೆ ಸುಮಾರು 30,000 ರೂ. ವಸೂಲಿ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ’’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ದಂಧೆಯಲ್ಲಿ ಭಾಗಿಯಾಗಿರುವ ಇತರ ಶಂಕಿತರನ್ನು ಬಂಧಿಸಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.