ಡಿಕೆಶಿ ಹೆಣ್ಣುಮಗಳ ಅಪಹರಣ ಮಾಡಿ, ಆಸ್ತಿ ಮಾಡಿದ್ದಕ್ಕೆ ದಾಖಲೆ ಇದೆ: ಎಚ್‌ಡಿಕೆ
x
ಎಚ್‌.ಡಿ ಕುಮಾರಸ್ವಾಮಿ

ಡಿಕೆಶಿ ಹೆಣ್ಣುಮಗಳ ಅಪಹರಣ ಮಾಡಿ, ಆಸ್ತಿ ಮಾಡಿದ್ದಕ್ಕೆ ದಾಖಲೆ ಇದೆ: ಎಚ್‌ಡಿಕೆ

ಎಚ್‌ಡಿಕೆ - ಡಿಕೆಶಿ ಅವರ ನಡುವೆ ವಾಕ್ಸಮರ ಮುಂದುವರಿದಿದೆ. ಹೆತ್ತ ತಾಯಿಗೇ ಡಿಕೆಶಿ ಗೌರವ ಕೊಡಲಿಲ್ಲ, ಅವರಿಂದ ಹೇಳಿಸಿಕೊಳ್ಳಬೇಕೇ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.


ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಡುವೆ ವಾಕ್ಸಮರ ಮುಂದುವರಿದಿದೆ.

ʻಡಿ.ಕೆ ಶಿವಕುಮಾರ್ ಅವರ ತಾಯಿಗೇ ಗೌರವ ಕೊಡಲಿಲ್ಲ. ಈಗ ನನ್ನ ಹೇಳಿಕೆ ಬಗ್ಗೆ ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದಾರೆʼ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ʻಶಿವಕುಮಾರ್ ತನ್ನ ತಾಯಿಯನ್ನೇ ಅಪಮಾನಿಸಿದ್ದಾರೆ. ಖಾಸಗಿ ವಾಹನಿಯೊಂದರಲ್ಲಿ “ಪ್ರತಿ ಕುಟುಂಬದಲ್ಲಿ ತಾಯಿ, ಪತ್ನಿ, ಪುತ್ರಿಯ ಮೇಲೆ ಹೇಗೆ ಕಣ್ಣಿಟ್ಟಿರಬೇಕು” ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. “ಮನೆಯಿಂದ ಹೊರಗೆ ಹೋಗಿ ಬರುವವರೆಗೂ ಅವರ ಮೇಲೆ ಕಣ್ಣಿಟ್ಟಿರಬೇಕು. ಅವರ ಚಟುವಟಿಕೆಗಳ ಮೇಲೆಯೂ ಕಣ್ಣಿಟ್ಟಿರಬೇಕು” ಎನ್ನುತ್ತಾರೆ ಈ ಮಹಾನುಭಾವ. ಇದು ಆ ವ್ಯಕ್ತಿಯ ಮಾನಸಿಕತೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದನ್ನು ಇವರಿಂದ ಕಲಿಯಬೇಕೇʼ ಎಂದು ಪ್ರಶ್ನೆ ಮಾಡಿದ್ದಾರೆ.

ʻ ಹೆಣ್ಣುಮಕ್ಕಳನ್ನು ಅಪಹರಿಸಿ (ಕಿಡ್ನಾಪ್) ಅವರ ಅಪ್ಪ-ಅಮ್ಮನಿಂದ ಡಿ.ಕೆ.ಶಿವಕುಮಾರ್ ಜಮೀನು ಲಪಟಾಯಿಸಿರುವುದು ನಿಜ. ಇದಕ್ಕೆ ನನ್ನ ಬಳಿ ದಾಖಲೆಗಳಿವೆ. ಹೆಣ್ಣು ಮಗಳನ್ನು ಆ ವ್ಯಕ್ತಿ ಕಿಡ್ನಾಪ್ ಮಾಡಿ, ಅವರ ಪೋಷಕರನ್ನು ಬೆದರಿಸಿ, ಜಮೀನು ಬರೆಸಿಕೊಂಡಿದ್ದು ನಿಜ. ಇದು 1996-1997ರಲ್ಲಿ ನಡೆದ ಘಟನೆ. ನನ್ನ ಬಳಿ ಅದರ ದಾಖಲೆಗಳಿವೆ. ಒಂದು ಮಗುವನ್ನು ಕಿಡ್ನಾಪ್ ಮಾಡಿ ಏನು ಮಾಡಿದರು ಎನ್ನುವುದು ತಿಳಿದಿದೆʼ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ʻಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿದ್ದ ಜಮೀನು ಬರೆಸಿಕೊಳ್ಳಲು ನೀವು (ಡಿಕೆಶಿ) ಏನೆಲ್ಲಾ ಮಾಡಿದ್ದೀರಿ, ಎನ್ನುವ ಮಾಹಿತಿಯೂ ನನ್ನ ಬಳಿ ಇದೆ. ಭೂಮಿ ಖರೀದಿ ಮಾಡುತ್ತೇವೆ ಚೆಕ್ ಕೊಟ್ಟಿದ್ದೀರಿ. ಆಮೇಲೆ ನೀವು ಕೊಟ್ಟ ಚೆಕ್ ನಗದು ಆಗಿಲ್ಲ. ಚೆಕ್ ಡಿಸ್ ಆನರ್ ಮಾಡಿರುವ ದಾಖಲೆ ಇದೆ. ಅವರು ನನ್ನನ್ನು ಚರ್ಚೆಗೆ ಕರೆದಿದ್ದಾರೆ. ದಯಮಾಡಿ ಬನ್ನಿ ಚರ್ಚೆಗೆ, ನಾನೂ ಸಿದ್ದನಿದ್ದೇನೆ. ನಿಮ್ಮ ಬಗ್ಗೆ ಕಂತೆಗಟ್ಟಲೇ ದಾಖಲೆ ಇಟ್ಟಿದ್ದೇನೆʼ ಎಂದು ಸವಾಲು ಹಾಕಿದ್ದಾರೆ.

ʼನಿಮ್ಮ ಬಗ್ಗೆ ಎಷ್ಟು ಬೇಕಾದರೂ ಹೇಳಬಹುದು. ದಾಖಲೆಗಳು ಬೇಕಾದಷ್ಟಿವೆ. ಈಗ ಶಾಂತಿನಗರ ಹೌಸಿಂಗ್ ಸೊಸೈಟಿ ವಿಷಯಕ್ಕೆ ಬನ್ನಿ.. ಒರಿಜಿನಲ್ ಸೊಸೈಟಿಯನ್ನೇ ಡೂಪ್ಲಿಕೇಟ್ (ನಕಲು) ಮಾಡಿ, ಡೂಪ್ಲಿಕೇಟ್ ಸೊಸೈಟಿಯನ್ನೇ ಒರಿಜಿನಲ್ ಮಾಡಿಕೊಳ್ಳಲಿಲ್ವಾ..? ಈ ದೇಶದಲ್ಲಿನ ಸಂಸ್ಥೆಗಳನ್ನು ದುಡ್ಡಿನ ಮೂಲಕ ಕೊಂಡುಕೊಂಡು ಯಾವಾಗ ಏನು ಬೇಕಾದರೂ, ಮಾಡುವ ವ್ಯಕ್ತಿ ಡಿ.ಕೆ.ಶಿವಕುಮಾರ್ʼ ಎಂದು ಹೇಳಿದ್ದಾರೆ.

ಒಕ್ಕಲಿಗ ನಾಯಕತ್ವದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ʻನಾನು ಒಕ್ಕಲಿಗ ನಾಯಕತ್ವ ತೆಗೋತಿನಿ ಎಂದು ಹೇಳಿದ್ದೀನಾ..? ನಾನು ರಾಜಕಾರಣದಲ್ಲಿ ಜಾತಿ ಮೀರಿ ಜನರ ಸೇವೆ ಮಾಡುತ್ತಿದ್ದೇನೆ. ರಾಜ್ಯದ ನಾನಾ ಕಡೆಗಳಿಂದ ಜನರು ನನ್ನನ್ನು ಹುಡುಕಿಕೊಂಡು ಬರುತ್ತಾರೆ. ಅವರು (ಡಿಕೆಶಿ) ಸತ್ಯ ಹರಿಶ್ಚಂದ್ರನ ಮೊಮ್ಮಗ. ದೊಡ್ಡಾಲಹಳ್ಳಿಯಲ್ಲಿ ಹುಟ್ಟುವಾಗ ಸತ್ಯ ಹರಿಶ್ಚಂದ್ರ ಬಂದು, “ನೀನು ಸತ್ಯನೇ ನುಡಿಬೇಕು” ಎಂದು ಹೇಳಿ ಹೋಗಿದ್ದಾರೆ. ನಮಗೆ ಸುಳ್ಳು ಹೇಳಿ ಎಂದು ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.

ರಾಹುಲ್ ಗಾಂಧಿ ಪ್ರಚಾರಕ್ಕೆ ಬರಲಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಡ್ಯದಲ್ಲಿ ಪ್ರಚಾರ ನಡೆಸುವ ಬಗ್ಗೆ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ ಅವರು, ʻರಾಹುಲ್ ಗಾಂಧಿ ಅವರನ್ನು ಸ್ವಾಗತಿಸುತ್ತೇನೆ. ಅವರು ಪ್ರಚಾರಕ್ಕೆ ಬಂದರೆ ತಪ್ಪೇನು? ಬರುವವರನ್ನು ಬೇಡ ಎಂದು ಹೇಳುವುದಕ್ಕೆ ಆಗುತ್ತದೆಯೇ? ರಾಜಕೀಯವಾಗಿ ಪ್ರಚಾರ ಮಾಡಲು ಯಾರು ಬೇಕಾದರೂ ಬರಬಹುದು. ನಮ್ಮದೇನೂ ತಕರಾರಿಲ್ಲ, ಬಂದು ಪ್ರಚಾರ ಮಾಡಲಿ, ಅದರಿಂದ ನನಗೇನೂ ನಷ್ಟ ಇಲ್ಲʼ ಎಂದರು.

Read More
Next Story