ಕೋಲಾರದಲ್ಲಿ ಕಾಂಗ್ರೆಸ್‌ಗೆ ಗಂಡಸರು ಸಿಗಲಿಲ್ಲವೇ; ಸಮೃದ್ಧಿ ಮಂಜುನಾಥ್
ಕೋಲಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ವಿ ಗೌತಮ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಕಾಂಗ್ರೆಸ್ ಪಕ್ಷದವರಿಗೆ ಯಾರೂ ಗಂಡಸರು ಸಿಗಲಿಲ್ಲವೇ ಎಂದು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಪ್ರಶ್ನಿಸಿದ್ದಾರೆ.
ನಗರದ ನಾರಾಯಣಿ ಕನ್ವೆನ್ಷನ್ ಸಭಾಂಗಣದಲ್ಲಿ ಭಾನುವಾರ ನಡೆದ ಜೆಡಿಎಸ್ – ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಜೆಡಿಎಸ್ಗೆ ನಾನು, ಮಲ್ಲೇಶ್ ಬಾಬು ಹಾಗೂ ನಿಸರ್ಗ ನಾರಾಯಣಸ್ವಾಮಿ ಸೇರಿದಂತೆ ಮೂವರು ಅಭ್ಯರ್ಥಿಗಳು ಇದ್ದೆವು. ಆದರೆ ಕಾಂಗ್ರೆಸ್ನವರು ಅಭ್ಯರ್ಥಿ ಹುಡುಕಲು ಪರದಾಡಿದರು. ತಿಂಗಳಿನಿಂದ ಜಗಳ ಮಾಡಿಕೊಂಡು ರಾಷ್ಟ್ರಪಟ್ಟದಲ್ಲಿ ಕೋಲಾರದ ಮರ್ಯಾದೆ ತೆಗೆದರು, ಕೊನೆಗೂ ಅವರಿಗೆ ಸ್ಥಳೀಯ ಅಭ್ಯರ್ಥಿ ಸಿಗಲೇ ಇಲ್ಲ ಎಂದು ಲೇವಣಿ ಮಾಡಿದರು.
ಸ್ಥಳೀಯ ಅಭ್ಯರ್ಥಿ ಮಲ್ಲೇಶ್ ಬಾಬು ಬೇಕಾ? ಬೆಂಗಳೂರಿನಿಂದ ಬಂದಿರುವ ಗೌತಮ್ ಬೇಕಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿದರೆ ವ್ಯರ್ಥವಾಗುತ್ತದೆ. ದೇಶಕ್ಕೆ ಮೋದಿ ಬೇಕು, ರಾಜ್ಯಕ್ಕೆ ಕುಮಾರಸ್ವಾಮಿ ಬೇಕು ಎಂದು ಹೇಳಿದರು.
ಇನ್ನು ಈ ಸಭೆಯಲ್ಲಿ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ , ʼʼರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅವರಿಗೆ ತಕ್ಕ ಉತ್ತರ ನೀಡಬೇಕು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಇಲ್ಲದಿದ್ದರೆ ಸಿದ್ದರಾಮಯ್ಯ ಯಾರೆಂಬುದೇ ಗೊತ್ತಾಗುತ್ತಿರಲಿಲ್ಲʼʼ ಎಂದರು.
ಕೋಲಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್‌ಗೆ ಸಂಬಂಧಿಸಿದಂತೆ ಸಚಿವ ಕೆಎಚ್ ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ನಡುವಿನ ಜಗಳ ತಾರಕಕ್ಕೇರಿತ್ತು.
ಸಚಿವ ಕೆಎಚ್ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಐವರು ಕಾಂಗ್ರೆಸ್ ಶಾಸಕರು ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆವೈ ನಂಜೇಗೌಡ, ಸಚಿವ ಎಂಸಿ ಸುಧಾಕರ್, ಪರಿಷತ್ ಸದಸ್ಯ ಅನಿಲ್ ಕುಮಾರ್ ಹಾಗೂ ನಜೀರ್ ಅಹ್ಮದ್ ರಾಜೀನಾಮೆ ಬೆದರಿಕೆ ಹಾಕಿದ್ದು, ಮುನಿಯಪ್ಪ ಕಟುಂಬಕ್ಕೆ ಟಿಕೆಟ್ ನೀಡದಂತೆ ಪಟ್ಟು ಹಿಡಿದಿದ್ದರು.
ಅಂತಿಮವಾಗಿ ಕೋಲಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಪರಿಶಿಷ್ಟ ಎಡ ಸಮುದಾಯದ ಮಾಜಿ ಮೇಯರ್ ವಿಜಯ್ ಕುಮಾರ್ ಅವರ ಪುತ್ರ ಕೆ ವಿ ಗೌತಮ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ.