ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಂಎಸ್‌ಪಿಗೆ ಕಾನೂನು ಖಾತರಿ: ಖರ್ಗೆ ಭರವಸೆ
x
ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಂಎಸ್‌ಪಿಗೆ ಕಾನೂನು ಖಾತರಿ: ಖರ್ಗೆ ಭರವಸೆ

ತಮ್ಮ ಪಕ್ಷವು ಅಧಿಕಾರಕ್ಕೆ ಬಂದ ನಂತರ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಹೇಳಿದ್ದಾರೆ


ಅಂಬಿಕಾಪುರ: ತಮ್ಮ ಪಕ್ಷವು ಅಧಿಕಾರಕ್ಕೆ ಬಂದ ನಂತರ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಹೇಳಿದ್ದಾರೆ. ರೈತರ `ದೆಹಲಿ ಚಲೋ' ಆಂದೋಲನ ಬಿರುಸುಗೊಂಡಿರುವ ಹೊತ್ತಿನಲ್ಲಿ ಎಐಸಿಸಿ ಅಧ್ಯಕ್ಷರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಲೋಕಸಭೆ ಚುನಾವಣೆಗೆ ಮುನ್ನ ಇದು ತಮ್ಮ ಪಕ್ಷದ ಮೊದಲ ʼಗ್ಯಾರೆಂಟಿʼ ಎಂದು ಅವರು ಹೇಳಿದರು.

ಛತ್ತೀಸ್‌ಗಢದ ಅಂಬಿಕಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ `ಭಾರತ್ ಜೋಡೋ ನ್ಯಾಯ್ ಯಾತ್ರೆ' ವೇಳೆ ಮಾತನಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದು, ಜನರು ಮೋದಿಯವರ "ಗ್ಯಾರಂಟಿ"ಗಳನ್ನು ನಂಬಬಾರದು ಎಂದು ಕರೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಹಿತದೃಷ್ಟಿಯಿಂದ ಎಂಎಸ್‌ಪಿಗೆ ಕಾನೂನಾತ್ಮಕವಾಗಿ ಖಾತರಿ ನೀಡುವುದಾಗಿ ಖರ್ಗೆ ಹೇಳಿದರು.

‘ದೆಹಲಿ ಚಲೋ’ ಹೋರಾಟ ಕೈಗೊಂಡಿರುವ ರೈತರ ಬೇಡಿಕೆಗಳಲ್ಲಿ ಎಂಎಸ್‌ಪಿ ಖಾತರಿ ಕಾನೂನನ್ನು ಜಾರಿಗೊಳಿಸುವುದು ಕೂಡಾ ಒಂದು.

ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಮತ್ತು ಅವರು ತಮಗಾಗಿ ಮಾತ್ರ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಬಡವರ ಪಕ್ಷವಾದರೆ, ಬಿಜೆಪಿ ಶ್ರೀಮಂತರ ಪಕ್ಷ ಎಂದು ಖರ್ಗೆ ವಾಗ್ದಾಳಿ ನಡೆಸಿದರು.

Read More
Next Story