ಸಿಎಂ ಸಹಿ ಫೋರ್ಜರಿ: ಕಠಿಣ ಕ್ರಮಕ್ಕೆ ಅಜಿತ್ ಪವಾರ್ ಸೂಚನೆ
x

ಸಿಎಂ ಸಹಿ ಫೋರ್ಜರಿ: ಕಠಿಣ ಕ್ರಮಕ್ಕೆ ಅಜಿತ್ ಪವಾರ್ ಸೂಚನೆ

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚರ್ಚೆ, ಕಠಿಣ ಕ್ರಮದ ಎಚ್ಚರಿಕೆ


ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಕಲಿ ಸಹಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಧಾನಸಭೆಯಲ್ಲಿ ಗುರುವಾರ ಹೇಳಿದ್ದಾರೆ.

ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ನಕಲಿ ಸಹಿ ಮತ್ತು ಅಂಚೆಚೀಟಿಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೆಲವು ನಿರ್ದಿಷ್ಟ ಕ್ರಮ ತೆಗೆದುಕೊಳ್ಳುವಂತೆ ಬಂದ ಜ್ಞಾಪಕ ಪತ್ರಗಳನ್ನು ಮುಖ್ಯಮಂತ್ರಿ ಕಚೇರಿ (ಸಿಎಂಒ) ಸಿಬ್ಬಂದಿ ಎಚ್ಚರಿಕೆಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವಿರೋಧ ಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ ಅವರು ಗುರುವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಸಿಎಂ ಅವರ ಹೆಸರಿನಲ್ಲಿ ನಕಲಿ ಅಂಚೆಚೀಟಿಗಳು ಮತ್ತು ಸಹಿ ನಕಲು ಮಾಡಿರುವುದು ಗಂಭೀರ ವಿಚಾರ ಎಂದು ಹೇಳಿದರು.

ಆರು ತಿಂಗಳಿನಿಂದ ಸಿ.ಎಂ ಅವರ ಕಚೇರಿಯಲ್ಲಿ ನಕಲಿ ಅಧಿಕಾರಿ ಇರುವುದು ಇತ್ತೀಚೆಗೆ ಪತ್ತೆಯಾಗಿತ್ತು. ಪ್ರಕರಣ ಕುರಿತು ಕಠಿಣ ಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ ಪವಾರ್ ಭರವಸೆ ನೀಡಿದ್ದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ ಎಂದಿದ್ದಾರೆ.

ಇತ್ತೀಚೆಗೆ, ಮುಖ್ಯಮಂತ್ರಿಗಳ ನಕಲಿ ಸಹಿ ಮತ್ತು ಸ್ಟ್ಯಾಂಪ್‌ಗಳೊಂದಿಗೆ ಹಣ ಹಾಗೂ ವರ್ಗಾವಣೆ ಬೇಡಿಕೆಗಳಿಗೆ ಸಂಬಂಧಿಸಿದಂತೆ 10 ರಿಂದ 12 ಜ್ಞಾಪಕ ಪತ್ರಗಳು ಸಿಎಂ ಕಚೇರಿಗೆ ಬಂದಿವೆ ಎಂದು ವರದಿಯಾಗಿದೆ.

ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

Read More
Next Story