
ಬಿಎಸ್‌ಪಿಗೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ ಸಂಸದ ರಿತೇಶ್ ಪಾಂಡೆ
ಬಿಎಸ್‌ಪಿ ಲೋಕಸಭಾ ಸಂಸದ ರಿತೇಶ್ ಪಾಂಡೆ ಭಾನುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಲಕ್ನೋ/ನವದೆಹಲಿ, ಫೆ.25: ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮುನ್ನ, ಅಂಬೇಡ್ಕರ್ ನಗರದ ಬಿಎಸ್‌ಪಿ ಲೋಕಸಭಾ ಸಂಸದ ರಿತೇಶ್ ಪಾಂಡೆ ಭಾನುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಪಾಂಡೆ, ತಮ್ಮನ್ನು ದೀರ್ಘಕಾಲ ಸಭೆಗಳಿಗೆ ಕರೆಯದ ಕಾರಣ ಅಥವಾ ಪಕ್ಷದ ನಾಯಕತ್ವವು ತಮ್ಮೊಂದಿಗೆ ಮಾತನಾಡದ ಕಾರಣ ಪಕ್ಷಕ್ಕೆ ತನ್ನ ಸೇವೆ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಅವರು ತಮ್ಮ ರಾಜೀನಾಮೆ ಪತ್ರವನ್ನು X ನಲ್ಲಿ ಹಂಚಿಕೊಂಡಿದ್ದಾರೆ.
"ದೀರ್ಘಕಾಲದಿಂದ ಪಕ್ಷದ ಸಭೆಗಳಿಗೆ ನನ್ನನ್ನು ಕರೆಯಲಾಗುತ್ತಿಲ್ಲ ಅಥವಾ ಪಕ್ಷದ ನಾಯಕತ್ವವು ನನ್ನೊಂದಿಗೆ ಮಾತನಾಡಿಲ್ಲ. ನಾನು ನಿಮ್ಮನ್ನು (ಮಾಯಾವತಿ) ಮತ್ತು ಪಕ್ಷದ ಉನ್ನತ ನಾಯಕತ್ವವನ್ನು ಸಂಪರ್ಕಿಸಲು ಮತ್ತು ಭೇಟಿ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಿದ್ದೇನೆ ಆದರೆ ಅದು ಯಾವುದೇ ಫಲಿತಾಂಶ ನೀಡಲಿಲ್ಲ,'' ಎಂದು ಪಾಂಡೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ನಾನು ನಿರಂತರವಾಗಿ ನನ್ನ ಕ್ಷೇತ್ರದ ಇತರ ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಭೇಟಿ ಮಾಡಿದ್ದೇನೆ ಮತ್ತು ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಹೀಗಾಗಿ ಪಕ್ಷಕ್ಕೆ ನನ್ನ ಸೇವೆ ಮತ್ತು ಅಸ್ತಿತ್ವದ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದರು.
ಹಾಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇಲ್ಲ. ಪಕ್ಷದೊಂದಿಗಿನ ಸಂಬಂಧವನ್ನು ಮುರಿಯುವ ನಿರ್ಧಾರವು ಭಾವನಾತ್ಮಕ ದೃಷ್ಟಿಕೋನದಿಂದ ಕಠಿಣ ನಿರ್ಧಾರವಾಗಿದೆ ಎಂದು ಅವರು ಹೇಳಿದರು.
ಕೆಲವು ಗಂಟೆಗಳ ನಂತರ, ಅವರು ಬಿಜೆಪಿಯ ಉತ್ತರ ಪ್ರದೇಶ ಉಸ್ತುವಾರಿ ಬೈಜಯಂತ್ ಜಯ್ ಪಾಂಡಾ, ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ಉತ್ತರ ಪ್ರದೇಶ ಘಟಕದ ಮುಖ್ಯಸ್ಥ ಭೂಪೇಂದ್ರ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಕೇಸರಿ ಪಾಳೆಯ ಸೇರಿದರು. ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಉಪಸ್ಥಿತರಿದ್ದರು.