ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣುಮುಚ್ಚಿ ಅಪರ್ಣಾರ ಕನ್ನಡ ಸವಿಯಿರಿ ಎಂದ BMRCL
ನಿಧನರಾಗಿರುವ ನಿರೂಪಕಿ ಅಪರ್ಣಾ ಅವರಿಗೆ ಸಂತಾಪ ಸೂಚಿಸಿರುವ ಬಿಎಂಆರ್ಸಿಎಲ್ ಅಧಿಕಾರಿಗಳು, ನಮ್ಮ ಮೆಟ್ರೋದಲ್ಲಿ ಅವರಿಗೆ ವಾಯ್ಸ್ ಅನೌನ್ಸ್ ಮಾಡುವ ಮೂಲಕ ಗೌರವದ ಸಂತಾಪ ಸೂಚಿಸಿದ್ದಾರೆ.
ಖ್ಯಾತ ನಿರೂಪಕಿ ಅಪರ್ಣಾ ನಿಧನರಾಗಿದ್ದಾರೆ. ಆನೇಕ ಕಾರ್ಯಕ್ರಮಗಳಿಗೆ ಧ್ವನಿಯಾಗಿದ್ದ ಅಪರ್ಣಾ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಆರಂಭವಾದಾಗ ಪ್ರಯಾಣಿಕರಿಗೆ ಮಾಹಿತಿಯನ್ನು ನೀಡುವುದಕ್ಕೆ ಮೊದಲು ಇವರ ಧ್ವನಿಯನ್ನೇ ಆಯ್ಕೆ ಮಾಡಲಾಗಿತ್ತು. ಇಂದಿಗೂ ಅಪರ್ಣಾ ಅವರ ಧ್ವನಿ ಮೆಟ್ರೋದಲ್ಲಿ ಮೊಳಗುತ್ತದೆ.
ಇದೀಗ ನಿರೂಪಕಿ ಅಪರ್ಣಾ ಅವರಿಗೆ ಬಿಎಂಆರ್ಸಿಎಲ್ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ವಾಯ್ಸ್ ಅನೌನ್ಸ್ ಮಾಡವ ಮೂಲಕ ಗೌರವದ ಸಂತಾಪ ಸೂಚಿಸಿದ್ದಾರೆ.
“ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋವಿನಲ್ಲಿ ಎಂದೆಂದಿಗೂ ಜೀವಂತ. ಮುಂದಿನ ಬಾರಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ” ಎಂದು ಬರೆದುಕೊಂಡಿದೆ .
ನಿರೂಪಕಿ ಅಪರ್ಣಾ ಅವರು ಕಳೆದ 13 ವರ್ಷಗಳಿಂದ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದಾರೆ. ಮೊದಲ ಬಾರಿಗೆ 2011ರ ಅಕ್ಟೋಬರ್ 20 ರಂದು ಎಂಜಿ ರೋಡ್ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಆರಂಭಿಸಿದಾಗಿನಿಂದ ಇತ್ತೀಚೆಗೆ 2023ರ ಅಕ್ಟೋಬರ್ 9 ರಂದು ಉದ್ಘಾಟನೆಗೊಂಡ ಕೆಂಗೇರಿಯಿಂದ ಚಲ್ಲಘಟ್ಟ, ಕೆ.ಆರ್ ಪುರನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ಮತ್ತು ನಿಲ್ದಾಣಗಳಿಗಾಗಿ ನಟಿ ಅಪರ್ಣಾ ವಾಯ್ಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಅಧಿಕಾರಿಗಳು ಅಪರ್ಣಾ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು.