ಬಂಗಾಳ: ಉದ್ರಿಕ್ತ ಸಂದೇಶ ಖಾಲಿಗೆ ಭೇಟಿ ನೀಡಲು ಬಿಜೆಪಿ ಮಹಿಳಾ ನಿಯೋಗ ಸಿದ್ಧತೆ
x
ಫೈಲ್‌ ಫೋಟೋ

ಬಂಗಾಳ: ಉದ್ರಿಕ್ತ ಸಂದೇಶ ಖಾಲಿಗೆ ಭೇಟಿ ನೀಡಲು ಬಿಜೆಪಿ ಮಹಿಳಾ ನಿಯೋಗ ಸಿದ್ಧತೆ

ಪಶ್ಚಿಮ ಬಂಗಾಳದ ಸಂದೇಶ್‌ ಖಾಲಿಯಲ್ಲಿ ಟಿಎಂಸಿ ಮುಖಂಡರಿಂದ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ.


ಕೋಲ್ಕತ್ತಾ, ಫೆ 23: ಉದ್ರಿಕ್ತ ಸಂದೇಶ್‌ ಖಾಲಿ ಪ್ರದೇಶಕ್ಕೆ ಇಂದು (ಶುಕ್ರವಾರ) ಭೇಟಿ ನೀಡಲು ಪಶ್ಚಿಮ ಬಂಗಾಳದ ಬಿಜೆಪಿಯ ಮಹಿಳೆಯರ ನಿಯೋಗವು ಸಿದ್ಧವಾಗಿದೆ. ಸಂದೇಶ್‌ಖಾಲಿಯಲ್ಲಿ ಟಿಎಂಸಿ ಮುಖಂಡರಿಂದ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ನಿಯೋಗವೂ ಇಂದು ಮಧ್ಯಾಹ್ನ ಈ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ಬಿಜೆಪಿ ನಿಯೋಗಕ್ಕೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಲಾಕೆಟ್ ಚಟರ್ಜಿ ಮತ್ತು ಅಗ್ನಿಮಿತ್ರ ಪಾಲ್ ನೇತೃತ್ವ ವಹಿಸಲಿದ್ದಾರೆ.

"ನಾವು ಸಂದೇಶಖಾಲಿಯ ಮಹಿಳೆಯರನ್ನು ಭೇಟಿಯಾಗಿ, ಅವರ ದೂರುಗಳನ್ನು ಕೇಳಲು ಬಯಸುತ್ತೇವೆ" ಎಂದು ಪಾಲ್ ಹೇಳಿದರು.

ಈ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಬುಧವಾರ ರಾಜ್ಯ ಸರ್ಕಾರ ಮತ್ತು ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ನೀಡಿದೆ.

ಗುರುವಾರ ಸಂದೇಶಖಾಲಿಯಲ್ಲಿ ನಡೆದ ಪ್ರತಿಭಟನೆಗಳ ವೇಳೆ, ಉದ್ರಿಕ್ತ ಪ್ರತಿಭಟನಾಕಾರರು ಟಿಎಂಸಿ ನಾಯಕನ ಆಸ್ತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಗ್ರಾಮಸ್ಥರಿಗೆ ಹಿಂಸೆ ನೀಡಿದವರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ಬಂಗಾಳದ ಡಿಜಿಪಿ ರಾಜೀವ್ ಕುಮಾರ್ ಪ್ರತಿಜ್ಞೆ ಮಾಡಿದರು.

ಈಗಾಗಲೇ ಪ್ರದೇಶಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ತಂಡವು ಜಮೀನನ್ನು ಬಲವಂತವಾಗಿ ವಶಪಡಿಸಿಕೊಂಡಿರುವ ಹಾಗೂ ಚಿತ್ರಹಿಂಸೆ ನೀಡಿರುವ ಬಗ್ಗೆ ಅನೇಕ ದೂರುಗಳನ್ನು ಸಂಗ್ರಹಿಸಿದೆ.

ಹಂಗಾಮಿ ಉಪಾಧ್ಯಕ್ಷ ಅನಂತ ನಾಯಕ್ ನೇತೃತ್ವದ ಎನ್‌ಸಿಎಸ್‌ಟಿ ತಂಡವು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದು, ಬಲವಂತದ ಭೂಕಬಳಿಕೆ ಮತ್ತು ಚಿತ್ರಹಿಂಸೆಯ 23 ದೂರುಗಳನ್ನು ದಾಖಲಿಸಿದೆ. ಈ ಕುಂದುಕೊರತೆಗಳನ್ನು ಅಧ್ಯಕ್ಷರಿಗೆ ಸಲ್ಲಿಸುವ ವರದಿಯಲ್ಲಿ ಸೇರಿಸಲಾಗುವುದು ಎಂದು ನಾಯಕ್ ತಿಳಿಸಿದರು.

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಸ್ಥಳೀಯ ಟಿಎಂಸಿ ಮುಖಂಡ ಶಾಜಹಾನ್ ಶೇಖ್ ಮತ್ತು ಆತನ ಬೆಂಬಲಿಗರು ಬಲವಂತವಾಗಿ ಭೂ ಕಬಳಿಕೆ ಮಾಡಿದ್ದಾರೆ ಮತ್ತು, ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಅನೇಕ ಮಹಿಳೆಯರು ಆರೋಪಿಸಿದ್ದಾರೆ.

ಜನವರಿ 5 ರಂದು ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ತನ್ನ ಆವರಣವನ್ನು ಪರೀಕ್ಷಿಸಲು ಹೋಗಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಶಾಜಹಾನ್‌ಗೆ ಬೆಂಬಲಿಗರು ಎನ್ನಲಾದ ಗುಂಪೊಂದು ದಾಳಿ ಮಾಡಿದ್ದು, ಅದರ ಬಳಿಕ ಶಾಜಹಾನ್‌ ಪರಾರಿಯಾಗಿದ್ದಾನೆ.

Read More
Next Story