ನಟ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ದೂರು
ಬೆಂಗಳೂರು: ನಟ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ಒಬಿಸಿ ಯುವ ಮೋರ್ಚಾ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಪತ್ನಿ ಪರ ಪ್ರಚಾರ ಮಾಡುತ್ತಿರುವ ನಟ ಶಿವರಾಜ್ ಕುಮಾರ್ ಅವರ ಭಾವಚಿತ್ರವುಳ್ಳ ಫ್ಲೆಕ್ಸ್, ಸಿನಿಮಾ ಫೋಸ್ಟರ್, ಜಾಹೀರಾತುಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅಖಾಡಕ್ಕಿಳಿದಿದ್ದು, ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಭದ್ರಾವತಿ ಮತ್ತಿತರ ಕಡೆಗಳಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದು, ಪತ್ನಿ ಗೀತಾ ಅವರ ಪರವಾಗಿ ಶಿವರಾಜ್ ಕುಮಾರ್ ಕೂಡಾ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.
ಪತ್ರದಲ್ಲಿ ಏನಿದೆ?
ಶಿವರಾಜ್‌ಕುಮಾರ್ ರಾಜ್ಯದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ತಮ್ಮ ಸಿನಿಮಾ ಹಾಗೂ ವ್ಯಕ್ತಿತ್ವದ ಕಾರಣಕ್ಕೆ ಜನಪ್ರಿಯತೆ ಪಡೆದಿದ್ದು, ಮತದಾರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಅವರು ಭಾಗವಹಿಸುತ್ತಿರುವುದನ್ನು ನಾವು ಗೌರವಿಸುತ್ತೇವೆ. ಆದರೆ, ಚುನಾವಣೆ, ಮತದಾರರ ಮೇಲೆ ಪ್ರಭಾವ ಬೀರುವುದು ಸರಿಯಲ್ಲ. ಚುನಾವಣಾ ಆಯೋಗವು ನ್ಯಾಯಯುತವಾದ ಚುನಾವಣೆಯನ್ನು ನಡೆಸುತ್ತದೆ ಎಂದು ನನಗೆ ಭರವಸೆ ಇದೆ. ನನ್ನ ಮನವಿಗೆ ಆಯೋಗವು ಸ್ಪಂದಿಸುತ್ತದೆ ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನಂಬಿದ್ದೇನೆ ಎಂದು ಮೋರ್ಚಾದ ಅಧ್ಯಕ್ಷ ಆರ್. ರಘು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದು ಅವರ ಪತ್ನಿಗೆ ಸಾಥ್ ನೀಡುತ್ತಿರುವ ಶಿವರಾಜ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದ ಚಲನಚಿತ್ರ ನಿರ್ಮಾಪಕರು ಬೆಂಬಲವಾಗಿ ನಿಂತಿದ್ದಾರೆ. ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ಮಾಡಲು ನಿರ್ಮಾಪಕರು ನಿರ್ಧಾರ ಮಾಡಿದ್ದಾರೆ.