
ಬೆಂಗಳೂರಿನ ಅಂಡರ್‌ಪಾಸ್‌ಗಳಲ್ಲಿ ಬೃಹತ್ ಟ್ರಕ್‌ಗಳು ಪದೇಪದೇ ಸಿಲುಕುತ್ತಿರುವುದು ಸಂಚಾರಿ ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ರಾಜ್‌ಕುಮಾರ್ ರಸ್ತೆ ಅಂಡರ್‌ಪಾಸ್‌ನಲ್ಲಿ ಸಿಲುಕಿದ ಬೃಹತ್ ಟ್ರಕ್
ರಾಜ್‌ಕುಮಾರ್ ರಸ್ತೆ ಅಂಡರ್‌ಪಾಸ್‌ನಲ್ಲಿ ಭಾರೀ ಸರಕು ಹೊತ್ತ ಟ್ರಕ್ ಸಿಲುಕಿ ಟಯರ್‌ಗಳು ಸ್ಫೋಟಗೊಂಡಿವೆ. ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಪೊಲೀಸರು ಟ್ರಾಫಿಕ್ ಡೈವರ್ಟ್ ಮಾಡಿದ್ದಾರೆ.
ಬೆಂಗಳೂರಿನ ರಾಜ್‌ಕುಮಾರ್ ರಸ್ತೆ ಅಂಡರ್‌ಪಾಸ್‌ನಲ್ಲಿ ಬೃಹತ್ ಗೂಡ್ಸ್ ಟ್ರಕ್ ಸಿಲುಕಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೂಲಗಳ ಪ್ರಕಾರ, ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಭಾರೀ ಸರಕು ತುಂಬಿಕೊಂಡಿದ್ದ ಟ್ರಕ್ ರಾಜ್‌ಕುಮಾರ್ ರಸ್ತೆ ಅಂಡರ್‌ಪಾಸ್ ಪ್ರವೇಶಿಸಿದೆ. ಆದರೆ ಅಂಡರ್‌ಪಾಸ್‌ನೊಳಗೆ ಸಾಗುತ್ತಿದ್ದ ವೇಳೆ ವಾಹನ ಅಲ್ಲಿಯೇ ಸಿಲುಕಿಕೊಂಡಿದೆ. ಟ್ರಕ್ ಸಿಲುಕಿದ ಬಳಿಕ ಚಾಲಕ ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ.
ಭಾರೀ ಸರಕು ಹೊತ್ತಿದ್ದ ಕಾರಣ ಅಂಡರ್‌ಪಾಸ್‌ನಲ್ಲಿ ಸಿಲುಕಿದ್ದ ಟ್ರಕ್ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಪರಿಣಾಮ ವಾಹನದ ಟಯರ್‌ಗಳು ಹಾನಿಗೊಂಡು ಸ್ಫೋಟಗೊಂಡಿವೆ. ಟ್ರಕ್ ಅನ್ನು ತೆರವುಗೊಳಿಸಲು ಸಾಧ್ಯವಾಗದೆ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ.
ಒರಿಯನ್ ಮಾಲ್ ಕೆಳಸೇತುವೆ ಬಳಿಯೂ ಟ್ರಾಫಿಕ್ ಜಾಮ್
ಟ್ರಕ್ ಸಿಲುಕಿರುವ ಹಿನ್ನೆಲೆಯಲ್ಲಿ ರಾಜ್‌ಕುಮಾರ್ ರಸ್ತೆ ಅಂಡರ್‌ಪಾಸ್‌ನಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿದೆ. ಇದರ ಪರಿಣಾಮ ಒರಿಯನ್ ಮಾಲ್ ಕೆಳಸೇತುವೆ ಸುತ್ತಮುತ್ತಲಿನ ರಸ್ತೆಗಳಲ್ಲೂ ವಾಹನಗಳು ನಿಧಾನಗತಿಯಲ್ಲಿ ಸಾಗುವಂತಾಗಿದೆ. ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ವಾಹನಗಳ ಸಂಚಾರವನ್ನು ಬೇರೆ ಮಾರ್ಗಗಳಿಗೆ ತಿರುಗಿಸಿದ್ದಾರೆ. ಡಾ. ರಾಜ್‌ಕುಮಾರ್ 10ನೇ ಕ್ರಾಸ್ ರಸ್ತೆ ಭಾಗದಲ್ಲಿ ನಿಧಾನಗತಿಯ ಸಂಚಾರವಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಅಂಡರ್‌ಪಾಸ್‌ಗಳಲ್ಲಿ ಟ್ರಕ್ ಸಿಲುಕುವುದು ಪೊಲೀಸರಿಗೆ ಸವಾಲು
ಬೃಹತ್ ವಾಹನಗಳು ಅಂಡರ್‌ಪಾಸ್‌ಗೆ ಪ್ರವೇಶಿಸಿ ಸಿಲುಕಿಕೊಳ್ಳುತ್ತಿರುವುದು ಬೆಂಗಳೂರಿನಲ್ಲಿ ಹೊಸ ಸಮಸ್ಯೆಯಾಗಿ ಪರಿಣಮಿಸಿದೆ. ಬುಧವಾರ (ಸೆ.9) ಮಹಾರಾಣಿ ಕಾಲೇಜು ಬಳಿಯ ಅಂಡರ್‌ಪಾಸ್‌ನಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು. ಇದೀಗ ರಾಜ್‌ಕುಮಾರ್ ರಸ್ತೆ ಅಂಡರ್‌ಪಾಸ್‌ನಲ್ಲಿ ಮತ್ತೊಂದು ಟ್ರಕ್ ಸಿಲುಕಿರುವುದು ನಗರದಲ್ಲಿ ಬೃಹತ್ ವಾಹನಗಳ ಸಂಚಾರ ನಿಯಂತ್ರಣದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಂಡರ್‌ಪಾಸ್‌ಗಳ ಎತ್ತರದ ಮಿತಿಯನ್ನು ಗಮನಿಸದೆ ಭಾರೀ ವಾಹನಗಳು ಪ್ರವೇಶಿಸುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ಟ್ರಾಫಿಕ್ ಪೊಲೀಸರಿಗೂ ಹೆಚ್ಚುವರಿ ಒತ್ತಡ ಎದುರಾಗುತ್ತಿದೆ. ಸವಾರರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

