
ಪಶ್ವಿಮ ಬಂಗಾಳ: ಹಾಲಾಂಗ್ ಬಂಗಲೆಯಲ್ಲಿ ಬೆಂಕಿ ಅವಘಡ
ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ಹಾಲಾಂಗ್ ಬಂಗಲೆಯಲ್ಲಿ ಮಂಗಳವಾರ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ಹಾಲಾಂಗ್ ಬಂಗಲೆಯಲ್ಲಿ ಮಂಗಳವಾರ ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದೊಳಗೆ ಇರುವ ಜನಪ್ರಿಯ ಪ್ರವಾಸಿ ವಸತಿಗೃಹದಲ್ಲಿ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆದರೆ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.
ಘಟನೆಯ ಸಮಯದಲ್ಲಿ ಹಾಲಾಂಗ್ ಬಂಗಲೆಯನ್ನು ಮುಚ್ಚಲಾಗಿತ್ತು. ರಾತ್ರಿ 9 ಗಂಟೆ ಸುಮಾರಿಗೆ ಬಂಗಲೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಬಂಗಲೆಯು ಮರದಿಂದ ಮಾಡಲ್ಪಟ್ಟಿದೆ. ಹೀಗಾಗಿ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಸಿಬ್ಬಂದಿ ಬೆಂಕಿ ನಂದಿಸುವ ಸಾಧನ ಬಳಸಿ ಬೆಂಕಿಯನ್ನು ನಿಯಂತ್ರಿಸಿದರು. ಆದರೆ, ಬೆಂಕಿ ನಿಯಂತ್ರಣಕ್ಕೆ ಬರದಿದ್ದಾಗ ಇತರ ಸಿಬ್ಬಂದಿಯನ್ನೂ ಕರೆಸಲಾಯಿತು. ಬೆಂಕಿಯನ್ನು ನಂದಿಸಲು ಎರಡು ಅಗ್ನಿಶಾಮಕ ದಳದವರನ್ನು ಕರೆಸಲಾಗಿದ್ದು, ಆಸ್ತಿ ಹಾನಿಯ ಪ್ರಮಾಣದ ಬಗ್ಗೆ ಇನ್ನು ತಿಳಿದುಬಂದಿಲ್ಲ ಎಂದು ಮುಖ್ಯ ವನ್ಯಜೀವಿ ವಾರ್ಡನ್ ದೇಬಲ್ ರಾಯ್ ತಿಳಿಸಿದ್ದಾರೆ.
"ಬೆಂಕಿ ಹೊತ್ತಿರುವ ಕಾರಣವನ್ನು ವಿಧಿವಿಜ್ಞಾನ ಪರೀಕ್ಷೆಯ ನಂತರ ಕಂಡುಹಿಡಿಯಲಾಗುವುದು. ಸುತ್ತಮುತ್ತಲಿನ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಗಾಯ ಅಥವಾ ಸಾವು ಗಾಯಗಳ ಬಗ್ಗೆ ನಮಗೆ ಯಾವುದೇ ವರದಿ ಬಂದಿಲ್ಲ" ಎಂದು ರಾಯ್ ತಿಳಿಸಿದ್ದಾರೆ.