
ಆನೆ ಕೊಲ್ಲಲು ಅನುಮತಿ ವಿಚಾರ | ಕಡುಟೀಕೆಗೆ ಗುರಿಯಾದ ಬೆಳ್ತಂಗಡಿ ಶಾಸಕರ ಹೇಳಿಕೆ
ರಾಜ್ಯದಲ್ಲಿ ಆನೆ-ಮಾನವ ಸಂಘರ್ಷ ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಸಂಘರ್ಷ ನಡೆಯುತ್ತಲೇ ಇದೆ. ಅರಣ್ಯ ಒತ್ತುವರಿ, ಅರಣ್ಯದಲ್ಲಿ ಹೆಚ್ಚಿದ ಮಾನವ ಚಟುವಟಿಕೆಗಳ ಪರಿಣಾಮ ನೈಸರ್ಗಿಕವಾದ ಆನೆಪಥಗಳು ನಶಿಸಿವೆ. ವನ್ಯಜೀವಿಗಳ ಜಾಗ ಅತಿಕ್ರಮಿಸಿಕೊಂಡ ಪರಿಣಾಮ ಅವು ನಾಡಿಗೆ ಬರುತ್ತಿವೆ. ಆದರೆ, ಹಾವಳಿಯ ಕಾರಣಕ್ಕೆ ವನ್ಯಜೀವಿಗಳನ್ನು ಕೊಲ್ಲಲು ಅವಕಾಶ ಕೋರಿರುವ ಶಾಸಕ ಹರೀಶ್ ಪೂಂಜಾ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜಬಾವ್ದಾರಿ ಸ್ಥಾನದಲ್ಲಿರುವ ಒಬ್ಬ ಶಾಸಕರೊಬ್ಬರು ವನ್ಯಜೀವಿಗಳ ಹತ್ಯೆಗೆ ಅನುಮತಿ ಕೇಳಿರುವುದನ್ನು ಖಂಡಿಸಿ ಭಾಣುವಾರ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಆನೆ ಕೊಲ್ಲಲು ಸದನದಲ್ಲಿ ಅನುಮತಿ ಕೇಳುವ ಮೂಲಕ ಹರೀಶ್ ಪೂಂಜಾ ಹದ್ದುಮೀರಿದ್ದಾರೆ. ಅವರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ, ಶಾಸಕರ ಬ್ಯಾನರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಅಂದ ಹಾಗೆ ಶಾಸಕ ಹರೀಶ್ ಪೂಂಜಾ ಈ ಹಿಂದೆ ಕೂಡ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಮೇಲೆ ದರ್ಪ ತೋರಿಸಿ ವಿವಾದಕ್ಕೆ ಕಾರಣರಾಗಿದ್ದರು.
ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಶಾಸಕರ ಅತಿರೇಕದ ವರ್ತನೆ ಇದೇ ಮೊದಲಲ್ಲ
ಕೆಲ ತಿಂಗಳುಗಳ ಹಿಂದೆ ಬೆಳ್ತಂಗಡಿ ಸಮೀಪದ ಮೇಲಂತಬೆಟ್ಟು ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ಮೇಲೆ ಪೊಲೀಸರು ದಾಳಿ ನಡೆಸಿ, ರೌಡಿಶೀಟರ್ ಆಗಿದ್ದ ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಎಂಬಾತನನ್ನು ಬಂಧಿಸಿದ್ದರು. ದಾಳಿಯ ವೇಳೆ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಮ್ಮ ಬೆಂಬಲಿಗರೊಂದಿಗೆ ಬೆಳ್ತಂಗಡಿ ಠಾಣೆಗೆ ಬಂದು ಪೊಲೀಸರ ವಿರುದ್ದ ದರ್ಪ ಪ್ರದರ್ಶಿಸಿದ್ದರು. ಅವ್ಯಾಚವಾಗಿ ನಿಂದಿಸಿ ಬೆದರಿಕೆ ಹಾಕಿದ್ದರು. ಆಗ ಪೊಲೀಸರು ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಮೇ 18 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದಲ್ಲದೇ ಪೊಲೀಸರಿಗೆ ಬೆದರಿಕೆ ಹಾಕಿದ್ದರು. ಬಂಧನಕ್ಕೊಳಗಾಗಿರುವ ನಮ್ಮ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ದ. ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯೇ ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಆಗ ಮತ್ತೊಂದು ಎಫ್‌ಐಆರ್ ಶಾಸಕರ ವಿರುದ್ಧ ದಾಖಲಿಸಲಾಗಿತ್ತು.
ಹರೀಶ್ ಪೂಂಜಾ ಕೇಳಿದ್ದೇನು?
ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾವಳಿ ವಿಪರೀತವಾಗಿದೆ. ಆನೆ ಹಾವಳಿ ನಿಯಂತ್ರಿಸಲು ಆಗದಿದ್ದರೆ ಕೊಲ್ಲಲು ನಮಗೆ ಅವಕಾಶ ಕೊಡಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದರು. ಆನೆ ಹಾವಳಿ ಕುರಿತು ಮಾತನಾಡುವ ವೇಳೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆನೆ ಹಾವಳಿ ತಡೆಯಲು ಕಾಮಗಾರಿಗಳ ವರದಿ ನೀಡಿದ್ದೀರಿ, ಸೌರಶಕ್ತಿ ಬೇಲಿ, ರೈಲು ಹಳಿಗಳ ಜೋಡಣೆ ಎಂದೆಲ್ಲಾ ಹೇಳಿದ್ದೀರಿ. ಆದರೆ ನೀವು ಮಾಡುತ್ತಿರುವ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕರ ಈ ಹೇಳಿಕೆಗೆ ಸರ್ಕಾರ ಸೇರಿದಂತೆ ವನ್ಯ ಜೀವಿ ಪ್ರಿಯರು, ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಅರಣ್ಯ ಸಚಿವರ ಆಕ್ರೋಶ
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ವನ್ಯಜೀವಿಗಳ ಹಾವಳಿ ಕುರಿತು ಮಾತನಾಡುವ ವೇಳೆ ಶಾಸಕ ಹರೀಶ್ ಪೂಂಜಾ ನೀಡಿದ ಹೇಳಿಕೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಆನೆ ಹಾವಳಿ ತಡೆಗಾಗಿ 2 ವರ್ಷಗಳಲ್ಲಿ 489.46 ಮೀ. ಸೌರಬೇಲಿ, 284.82 ಆನೆ ತಡೆ ಕಂದಕ ನಿರ್ಮಾಣ ಮಾಡಿ ನಿರ್ವಹಿಸುತ್ತಿದೆ. ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ರಾಮನಗರ, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8 ಆನೆ ಕಾರ್ಯಪಡೆಗಳು ಕೂಡ ಕಾರ್ಯ ನಿರ್ವಹಿಸುತ್ತಿವೆ. ಹೀಗಿರುವಾಗ ಆನೆ ಕೊಲ್ಲಲು ಅನುಮತಿ ಕೋರುವುದು ಶಾಸಕರಾದವರಿಗೆ ತಕ್ಕುದಲ್ಲ ಎಂದು ತಿರುಗೇಟು ನೀಡಿದ್ದಾರೆ.
ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಚಲನವಲನ ಗಮನಿಸಲಾಗುತ್ತಿದೆ. ಕಾಡಂಚಿನ ಜನರಿಗೆ ನಿತ್ಯ ಸಂದೇಶ ಹಾಗೂ ಧ್ವನಿವರ್ಧಕದ ಮೂಲಕ ಎಚ್ಚರಿಕೆ ಸಹ ನೀಡಲಾಗುತ್ತಿದೆ. ಕೃತಕಬುದ್ಧಿಮತ್ತೆ ಆಧರಿತ ಕ್ಯಾಮೆರಾ ಅಳವಡಿಸಿ ವನ್ಯಜೀವಿಗಳ ಸಂಚಾರದ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದ್ದಾರೆ. ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಮನುಷ್ಯರಿಗೆ ಬದುಕುವ ಹಕ್ಕಿರುವಂತೆಯೇ ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಹೇಳಿದ್ದಾರೆ.
ಸಂತ್ರಸ್ಥರ ಕುಟುಂಬಕ್ಕೆ ಪರಿಹಾರ
ವನ್ಯಜೀವಿಗಳ ದಾಳಿಯಿಂದ ಪ್ರಾಣಹಾನಿಯಾದವರ ಕುಟುಂಬ ಸದಸ್ಯರಿಗೆ ಸರ್ಕಾರ 15 ಲಕ್ಷ ರೂ. ದಯಾತ್ಮಕ ಪರಿಹಾರ ನೀಡುತ್ತಿದೆ. ಅದೇ ರೀತಿ ಶಾಶ್ವತ ಅಂಗವಿಕಲತೆ ಉಂಟಾದರೆ 10 ಲಕ್ಷ ರೂ., ಭಾಗಶಃ ಅಂಗವಿಕಲತೆ ಉಂಟಾದರೆ 5 ಲಕ್ಷ ರೂ. ಗಾಯಾಳುಗಳಿಗೆ 60 ಸಾವಿರ ರೂ. ಕಾಡಾನೆ ದಾಳಿಯಿಂದ ಆಸ್ತಿಪಾಸ್ತಿ ಹಾನಿ ಉಂಟಾದರೆ ಪ್ರತಿ ಪ್ರಕರಣಕ್ಕೆ 20 ಸಾವಿರ ರೂ.ದಂತೆ ದಯಾತ್ಮಕ ಪರಿಹಾರ ನೀಡಲಾಗುತ್ತಿದೆ. ಜೊತೆಗೆ ಮೃತರ ಕುಟುಂಬ ಹಾಗೂ ಶಾಶ್ವತ ಅಂಗವಿಕಲರಾದವರಿಗೆ ಮಾಸಿಕ 4 ಸಾವಿರ ರೂ. ಮಾಸಾಶನವನ್ನು 5 ವರ್ಷಗಳಿಂದ ನೀಡಲಾಗುತ್ತಿದೆ.