ಬೆಂಗಳೂರು ವಿವಿ ನೀರಿನ ಸಮಸ್ಯೆ | ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ಶೌಚಕ್ಕೂ ನೀರಿಲ್ಲ!
ಆರು ನೂರು ವಿದ್ಯಾರ್ಥಿನಿಯರು ವಾಸವಿರುವ ಹಾಸ್ಟೆಲ್‌ನಲ್ಲಿ ಒಂದೇ ಒಂದು ಕುಡಿಯುವ ನೀರಿನ ನಲ್ಲಿ ಇದ್ದು, ಕುಡಿಯುವ ನೀರಿಗಾಗಿ ವಿದ್ಯಾರ್ಥಿನಿಯರು ತಾಸುಗಟ್ಟಲೆ ಸಾಲುಗಟ್ಟಿ ನಿಲ್ಲುವ ದುಃಸ್ಥಿತಿ ಎದುರಾಗಿದೆ.
ಬೆಂಗಳೂರಿನ ವಿವಿ ಲೇಡಿಸ್ ಹಾಸ್ಟೆಲ್ ಅವ್ಯವಸ್ಥೆ ಈಗ ಬಯಲಿಗೆ ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯದ (ಬಿಯು) ಜ್ಞಾನ ಭಾರತಿ ಕ್ಯಾಂಪಸ್ ರಮಾಬಾಯಿ ಮಹಿಳೆಯರ ಹಾಸ್ಟೆಲ್‌ನಲ್ಲಿ ಸಮಸ್ಯೆಗಳು ಬೆಟ್ಟದಷ್ಟಿದೆ.
ಸುಮಾರು 600 ಹುಡುಗಿಯರು ವಾಸಿಸುತ್ತಿರುವ ಹಾಸ್ಟೆಲ್‌ನಲ್ಲಿ ಒಂದೇ ಒಂದು ಕುಡಿಯುವ ನೀರಿನ ಪೈಪ್ ಇದ್ದು, ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ.
ಹಾಸ್ಟೆಲ್‌ನಲ್ಲಿ ನೀರಿನ ಕೊರತೆ ಮತ್ತು ಆಗಾಗ್ಗೆ ವಿದ್ಯುತ್ ಕಡಿತದ ಸಮಸ್ಯೆ ಅಲ್ಲದೆ ನೈರ್ಮಲ್ಯದ ಕೊರತೆ ಮತ್ತಿತರ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬಯಲಾಗಿದೆ. ನೀರಿಲ್ಲದೆ ಬೆಳಗ್ಗೆ ಶೌಚಾಲಯಕ್ಕೂ ಹೋಗಲೂ ಸಾಧ್ಯವಿರದ ದುಸ್ಥಿತಿ ಎದುರಾಗಿದೆ. ಇದಲ್ಲದೆ ಸರಿಯಾದ ಶುಚಿತ್ವವುಳ್ಳ ಆಹಾರವಿಲ್ಲ, ನೈಮರ್ಲ್ಯವಿಲ್ಲದೆ ಹಾಸ್ಟಲ್‌ನಲ್ಲಿ ರೋಗ ಹರಡುವ ಭೀತಿ, ಹಾಸ್ಟೆಲ್ ತುಂಬ ನಾಯಿ, ಬೆಕ್ಕುಗಳ ಕಾಟ, ಮಳೆಬಂದರೆ ಹಾಸ್ಟೆಲ್ ಪೂರ್ತಿ ನೀರು ತುಂಬುವ ಸ್ಥಿತಿ ಸಾಮಾನ್ಯವಾಗಿದೆ. ಈ ಅವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಹೇಳಿಕೊಂಡರೂ ಕ್ಯಾರೆ ಅನ್ನುತ್ತಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.
ಕುಡಿಯುವ ನೀರಿಗಾಗಿ ಪರದಾಟ
ಹಾಸ್ಟೆಲ್‌ನ ಪ್ರತೀ ಪ್ಲೋರ್‌ನಲ್ಲಿ ವಾಟರ್ ಪ್ಯೂರಿಫೈಯರ್‌ಗಳು ಇದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಒಂದೇ ಒಂದು ಕುಡಿಯುವ ನೀರಿನ ನಲ್ಲಿ ಇದ್ದು, ನಿತ್ಯ ಆ ನಲ್ಲಿಯ ಮುಂದೆ 600 ಜನ ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುತ್ತಾರೆ.
ಮಳೆ ಬಂದರೆ ಬಿಗಡಾಯಿಸುವ ನೀರಿನ ಸಮಸ್ಯೆ
ರಮಾ ಬಾಯಿ ಬಾಲಕಿಯರ ಹಾಸ್ಟೆಲ್‌ನಲ್ಲಿ ವಾಸಿಸುವ ವಿದ್ಯಾರ್ಥಿಗಳು ಕಳೆದ ಒಂಬತ್ತು ತಿಂಗಳಿಂದ ನೀರಿನ ಕೊರತೆ ಎದುರಿಸುತ್ತಿದ್ದರೂ ಅಧಿಕಾರಿಗಳು ಏನೂ ಮಾಡಲಿಲ್ಲ. ನೀರಿನ ಕೊರತೆಯ ಕಾರಣ, ಅಶುಚಿಯಾದ ಶೌಚಾಲಯಗಳಿಂದ ಸೋಂಕಿನ ಭಯವಿದೆ. ನೀರಿನ ಸಮಸ್ಯೆಯಿಂದಾಗಿ ಹಾಸ್ಟೆಲ್ನಲ್ಲಿ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿಲ್ಲ ಎಂದು ವಿದ್ಯಾರ್ಥಿಗಳ ಆರೋಪವಾಗಿದೆ. ಈ ಮಧ್ಯೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಿದ್ಯುತ್ ವ್ಯತ್ಯಯವು ನೀರಿನ ಕೊರತೆಗೆ ಕಾರಣವಾಗಿದೆ.
ಮಳೆಯಿಂದಾಗಿ ಮರಗಳು ನೆಲಕ್ಕುರಿಳಿ, ಹಲವಾರು ವಿದ್ಯುತ್ ಕಂಬಗಳು ನೆಲಕ್ಕುರುಳುವುದರಿಂದ 18 ಗಂಟೆ ವಿದ್ಯುತ್, ನೀರು ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹಾಸ್ಟೆಲ್ನಲ್ಲಿ ಒಟ್ಟು 600 ವಿದ್ಯಾರ್ಥಿಗಳು ಇದ್ದಾರೆ. ಆದರೆ ಅಲ್ಲಿರುವುದು ಎರಡು ಓವರ್ಹೆಡ್ ಟ್ಯಾಂಕ್ಗಳು ಮಾತ್ರ. ಆ ಎರಡು ಟ್ಯಾಂಕ್ಗಳಲ್ಲಿನ ನೀರು 600 ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ಆರೋಪ. ಆದರೆ ಶನಿವಾರ (ಮೇ 10) 18 ಗಂಟೆಗಳ ಕಾಲ ವಿದ್ಯುತ್ ಇರಲಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ದಿನಪೂರ್ತಿ ನೀರಿನ ಸಮಸ್ಯೆ ಎದುರಾಯಿತು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಶನಿವಾರ ಬೀದಿಗಿಳಿದು ಪ್ರತಿಭಟನೆ ಕೂಡ ನಡೆಸಿದ್ದಾರೆ.
ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿನಿ ಅರ್ಚನಾ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡುತ್ತಾ, ʻʻಬೇಸಿಗೆ ಕಾಲ ಬಂದಾಗಿನಿಂದ ಮೂರು ತಿಂಗಳಿನಿಂದ ನೀರಿನ ಸಮಸ್ಯೆ ಬಹಳಷ್ಟು ಇತ್ತು. ಆದರೆ ಕಳೆದ ಐದು ದಿನಗಳಿಂದ ದಿನದಲ್ಲಿ ಇದು ತೀವ್ರವಾಗಿದೆ. ಕುಡಿಯಲೂ ನೀರಲ್ಲದೆ ಪರದಾಡಬೇಕಾಯಿತು. ಒಂದೇ ಟ್ಯಾಪಿನಿಂದ 600 ಜನರು ನೀರು ಕುಡಿಯುವ ಪರಿಸ್ಥಿತಿ ಎದುರಾಗಿತ್ತು. ಸಂಬಂಧಪಟ್ಟವರಿಗೆ ಎಷ್ಟು ಬಾರಿ ದೂರು ನೀಡಿದರೂ ನಮ್ಮ ಮನವಿಗೆ ಸ್ಪಂದಿಸುತ್ತಿರಲಿಲ್ಲ. ಇನ್ನು ಸ್ನಾನ ಮಾಡಲು, ಶೌಚಾಲಯ ಹೋಗಲು ಅದರಲ್ಲೂ ವೈಯಕ್ತಿಕ ಸಮಸ್ಯೆ ಇರುವವರಿಗೆ ತುಂಬಾ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಎಲ್ಲರೂ ಸೇರಿ ಪ್ರತಿಭಟನೆ ನಡೆಸಿದ್ದೇವೆʼʼ ಎಂದು ತಿಳಿಸಿದರು.
ಹಾಸ್ಟೆಲ್‌ನಲ್ಲಿ ಶುಚಿತ್ವದ ಕೊರತೆ
ಅಡುಗೆ ಮನೆಯನ್ನು ಕೂಡ ನೈರ್ಮಲ್ಯ ಸ್ಥಿತಿಯಲ್ಲಿ ಇಡಲಾಗಿಲ್ಲ. ವಾಟರ್ ಪ್ಯೂರಿಫೈಯರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆಹಾರದ ಸಮಸ್ಯೆ ಬಹಳಷಟ್ಟು ಇದೆ. ಆಹಾರಕ್ಕೆ ಡಾಲ್ಡ, ಸೋಡಾ ಜಾಸ್ತಿ ಬಳಸಲಾಗುತ್ತದೆ. ಹೀಗಾಗಿ ಊಟ ಮಾಡಿದ ತಕ್ಷಣ ಹೊಟ್ಟೆನೋವು ಬರುತ್ತದೆ. ಹಾಸ್ಟೆಲ್‌ನಲ್ಲಿ ನಾಯಿ, ಬೆಕ್ಕುಗಳ ಕಾಟ ಹೆಚ್ಚಾಗಿದ್ದು, ರಾತ್ರಿ ಸಮಯದಲ್ಲಿ ನಿದ್ದೆ ಮಾಡಲು ಬಹಳಷ್ಟು ತೊಂದರೆಯಾಗುತ್ತಿದೆ. ಮಳೆನೀರು ಹಾಸ್ಟೆಲ್ ಒಳಗಡೆ ಬರುತ್ತದೆ. ಊಟದ ಸ್ಥಳ, ಅಡುಗೆ ಕೋಣೆ ಸೇರಿದಂತೆ ಶೌಚಾಲಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ ಎಂದು ವಿದ್ಯಾರ್ಥಿ ಸಂಜನಾ(ಹೆಸರು ಬದಲಿಸಲಾಗಿದೆ) ಹಾಸ್ಟೆಲ್ ಸಮಸ್ಯೆಗಳ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಾರದಲ್ಲಿ ಎರಡು ಬಾರಿ ಸ್ನಾನ
ಮೊದಲ ವರ್ಷದ ಬಿಎ ವಿದ್ಯಾರ್ಥಿನಿ ನೇತ್ರಾ, ಹಾಸ್ಟೆಲ್ ತುಂಬಾ ಗಲೀಜು ಅಶುದ್ಧವಾಗಿದೆ. ಅಡುಗೆ ಮನೆಯನ್ನು ಕೂಡ ನೈರ್ಮಲ್ಯ ಸ್ಥಿತಿಯಲ್ಲಿ ಇಡಲಾಗಿಲ್ಲ. ವಾಟರ್ ಪ್ಯೂರಿಫೈಯರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ನೀರಿನ ಸಮಸ್ಯೆಯಿಂದಾಗಿ ನಾವು ವಾರದಲ್ಲಿ ಎರಡು ಬಾರಿ ಮಾತ್ರ ಸ್ನಾನ ಮಾಡುವ ಪರಿಸ್ಥಿತಿ ಎದುರಾಗಿದೆ. ಹಾಸ್ಟೆಲ್ ಪಕ್ಕದ ನಿವಾಸಿಗಳ ನೆರವು ಪಡೆದು ಅವರ ಮನೆಗಳಲ್ಲಿ ಸ್ನಾನಮಾಡುವುದು, ಬಟ್ಟೆ ತೊಳೆಯುವದನ್ನು ಮಾಡಬೇಕಿದೆ ಎಂದು ತಿಳಿಸಿದರು.
ಸರಿಯಾದ ವಾಟರ್ ಸ್ಟೋರೇಜ್ ಟ್ಯಾಂಕ್ ವ್ಯವಸ್ಥೆ ಇಲ್ಲ
ʻʻಈ ನೀರಿನ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಕಳೆದ ಎಂಟು ವರ್ಷಗಳಿಂದ ಈ ಸಮಸ್ಯೆಗಳು ಹಾಗೆಯೇ ಇದೆ. ಈಗ 600 ಮಕ್ಕಳು ಈ ಹಾಸ್ಟೆಲ್‌ನಲ್ಲಿ ನೆಲೆಸಿದ್ದು, ಕೇವಲ ಎರಡೇ ಎರಡು ಓವರ್ಹೆಡ್ ಟ್ಯಾಂಕ್‌ಗಳು ಇರುವುದರಿಂದ ಅದರಲ್ಲಿ ತುಂಬುವ ನೀರು 600 ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ. ಇನ್ನು ಮಳೆ ಬಂದು ವಿದ್ಯುತ್ ಸಮಸ್ಯೆಯಾದರಂತೂ ಬಹಳಷ್ಟು ಸಮಸ್ಯೆ ಆಗುತ್ತದೆ. 2016ರಲ್ಲಿ ಈ ಹಾಸ್ಟೆಲ್ ಉದ್ಘಾಟನೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಎಕ್ಟ್ಸ್ ವಾಟರ್ ಸ್ಟೋರೇಜ್ ಟ್ಯಾಂಕ್ ವ್ಯವಸ್ಥೆ ಮಾಡಿಲ್ಲ. ಇನ್ನು ಎರಡು ವಾಟರ್ ಸ್ಟೋರೇಜ್ ಟ್ಯಾಂಕ್ ವ್ಯವಸ್ಥೆ ಇದ್ದರೆ ಈ ನೀರಿನ ಸಮಸ್ಯೆ ಬರುತ್ತಿರಲಿಲ್ಲ. ಕಳೆದ ಎಂಟು ವರ್ಷಗಳಿಂದ ಈ ಸಮಸ್ಯೆ ಎದುರಾಗುತ್ತಿದೆ. ಆದರೆ ಈ ಸಮಸ್ಯೆ ಬಗ್ಗೆ ಸಂಬಂಧಪಟ್ಟವರು ಆಸಕ್ತಿ ವಹಿಸಲಿಲ್ಲ. ಹೀಗಾಗಿ ಶನಿವಾರದಂದು ನೀರಿನ ಪರಿಸ್ಥಿತಿ ಬಿಗಡಾಯಿಸಿದ್ದು, ವಿದ್ಯಾರ್ಥಿಗಳು ರೋಡಿಗಿಳಿದು ಪ್ರತಿಭಟನೆ ನಡೆಸುವಂತಾಗಿದೆʼʼ ಎಂದು ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಲೋಕೇಶ್ ರಾಮ್ ದ ಫೆಡರಲ್ ಕರ್ನಾಟಕ್ಕೆ ತಿಳಿಸಿದ್ದಾರೆ.
ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ಹಾಸ್ಟೆಲ್ ವಿದ್ಯಾರ್ಥಿಗಳ ಪ್ರತಿಭಟನೆಯ ಬಳಿಕ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ನಾವು ತಕ್ಷಣ ಕ್ರಮ ಕೈಗೊಂಡಿದ್ದೇವೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ, ನೀರಿನ ಕೊರತೆಯನ್ನು ನಿವಾರಿಸಲು ನಾವು ಬೋರ್ವೆಲ್ ಕೊರೆಯಲು ಯೋಜಿಸುತ್ತಿದ್ದೇವೆ ಎಂದು ಉಪಕುಲಪತಿ ಜಯಕರ ಎಸ್ಎಂ ಭರವಸೆ ನೀಡಿದ್ದಾರೆ.
ಒಟ್ಟಾರೆ ಹಾಸ್ಟೆಲ್‌ನಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಹೆಚ್ಚುವರಿಯಾಗಿ ಎರಡು ಟ್ಯಾಂಕರ್ ನೀರಿನ ವ್ಯಸಸ್ಥೆಯನ್ನು ಮಾಡಲಾಗಿದೆ. ಇದು ತಾತ್ಕಾಲಿಕ ಪರಿಹಾರವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಮಳೆ ಬಂದರೆ ಮತ್ತೆ ವಿದ್ಯತ್ ಕಡಿತದ ಸಮಸ್ಯೆ ಎದುರಾಗಬಹುದು. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಆಡಳಿತ ಮಂಡಳಿ ಕೈಗೊಳ್ಳಬೇಕಾಗಿದೆ. ನೀರಿನ ಸಮಸ್ಯೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರದ ಕೊರತೆ, ಶುಚಿತ್ವದ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಈ ಸಮಸ್ಯೆಗಳತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಶೀಘ್ರವಾಗಿ ಪರಿಹರಿಸಬೇಕಾಗಿದೆ.