ಬದನವಾಳು ಸತ್ಯಾಗ್ರಹಕ್ಕೆ ಮರುಜೀವ: ಮುರಿದು ಬಿದ್ದ ಬದುಕನ್ನು ಮತ್ತೆ ಕಟ್ಟುವ ಸಾಹಸ
x

ಈ ಇಡೀ ಚಳವಳಿಯಲ್ಲಿ ಧೀಃಶಕ್ತಿಯಾಗಿ ನಿಂತವರು ಹಿರಿಯ ರಂಗಕರ್ಮಿ, ಗಾಂಧಿವಾದಿ ಪ್ರಸನ್ನ. ಅವರು ಈಗಾಗಲೇ ಕೆಲ ದಿನಗಳಿಂದ ಬದನವಾಳುವಿನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಬದನವಾಳು ಸತ್ಯಾಗ್ರಹಕ್ಕೆ ಮರುಜೀವ: ಮುರಿದು ಬಿದ್ದ ಬದುಕನ್ನು ಮತ್ತೆ ಕಟ್ಟುವ ಸಾಹಸ

1925ರಲ್ಲಿ ತಗಡೂರು ರಾಮಚಂದ್ರ ರಾಯರು ಇಲ್ಲಿ ಖಾದಿ ಕೇಂದ್ರ ಆರಂಭಿಸಿದರು. ಗಾಂಧೀಜಿಯವರು 1927 ಮತ್ತು 1932ರಲ್ಲಿ ಇಲ್ಲಿಗೆ ಭೇಟಿ ನೀಡಿ, ಬದನವಾಳುವಿನ 'ಗ್ರಾಮ ಸ್ವರಾಜ್ಯ'ದ ಮಾದರಿಯನ್ನು ಕಂಡು ಮೆಚ್ಚಿದ್ದರು.


ನೂರಾರು ಗ್ರಾಮೀಣ ಜನರ ಬದುಕನ್ನು ನೇರ್ಪುಗೊಳಿಸುವ ಉದ್ದೇಶದೊಂದಿಗೆ ಹನ್ನೊಂದು ವರ್ಷಗಳ ಹಿಂದೆ ಶುರುವಾದ, ದೇಶಾದ್ಯಂತ ಬಹಳ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ಚಾರಿತ್ರಿಕ ಬದನವಾಳು ಸತ್ಯಾಗ್ರಹಕ್ಕೆ ಮತ್ತೆ ಜೀವ ತುಂಬುವ ಪ್ರಯತ್ನಗಳು ನಡೆಯುತ್ತಿವೆ.

ಅಂದು ಬದನವಾಳುವಿನಲ್ಲಿ ಸತ್ಯಾಗ್ರಹಕ್ಕೆ ಯಾರು ಶಕ್ತಿ ತುಂಬಿದ್ದರೋ, ಯಾರು ಸುಸ್ಥಿರ ಬದುಕಿನ ಕನಸು ಕಂಡಿದ್ದರೋ, ನೂರಾರು ಕೈಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಟೊಂಕ ಕಟ್ಟಿ ನಿಂತರೋ ಅಂತಹ ಸಮಾನ ಮನಸ್ಕರಲ್ಲಿ ಬಹುತೇಕರು ಮೈಸೂರಿನಲ್ಲಿ ಸಭೆ ಸೇರಿ ನಾವು ಎಲ್ಲಿ ತಟಸ್ಥರಾಗಿದ್ದೇವೋ ಅಲ್ಲಿಂದಲೇ ಮತ್ತೆ ಚಾಲನೆ ನೀಡುವ ಅನಿವಾರ್ಯತೆಯನ್ನು ಕಂಡುಕೊಂಡಿದ್ದಾರೆ. ಅವರಲ್ಲಿ ಬದನವಾಳು ಗ್ರಾಮಸ್ಥರಿದ್ದಾರೆ, ಸತ್ಯಾಗ್ರಹಿಗಳಿದ್ದಾರೆ, ಸಮಾಜ ಸೇವಕರಿದ್ದಾರೆ, ರಂಗಕರ್ಮಿಗಳಿದ್ದಾರೆ, ಪತ್ರಕರ್ತರಿದ್ದಾರೆ. ಎಲ್ಲಕ್ಕಿಂತ ಗಾಂಧಿ ಮನಸುಗಳಿವೆ.

ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಸಭಾಂಗಣದಲ್ಲಿ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲಿ ಸಭೆ ಸೇರಿದ ಬದನವಾಳು ಸತ್ಯಾಗ್ರಹಿಗಳು ಖಾದಿ ಗ್ರಾಮೋದ್ಯೋಗ ಕೇಂದ್ರ ಮತ್ತೆ ಜೀವ ತುಂಬುವ ಪ್ರತಿಜ್ಞೆ ಕೈಗೊಂಡರು.

ಇಲ್ಲಿ ವ್ಯಕ್ತವಾದ ಕಳಕಳಿ ಏನೇಂದರೆ 2015ರ ಚಾರಿತ್ರಿಕ ಬದನವಾಳು ಸತ್ಯಾಗ್ರಹದ ನಿರ್ಣಯಗಳನ್ನು ಜಾರಿಗೆ ತರಬೇಕು. ಮನುಕುಲವನ್ನೇ ವಿನಾಶದ ಅಂಚಿಗೆ ತಳ್ಳಿರುವ ರಕ್ಕಸ ಸ್ವರೂಪಿಯಾದ ಯಂತ್ರನಾಗರಿಕತೆಗೆ ಸೆಡ್ಡು ಹೊಡೆದು ಆ ಮೂಲಕ ಸುಸ್ಥಿರ ಬದುಕು ಮತ್ತು ಸುಸ್ಥಿರ ಆರ್ಥಿಕತೆ ನೆಲೆಗೊಳ್ಳುವಂತೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಬದನವಾಳು ಸತ್ಯಾಗ್ರಹವನ್ನೇ ಗ್ರಾಮ ಸತ್ಯಾಗ್ರಹ ಎಂದು ಮರುನಾಮಕರಣ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.

ಗ್ರಾಮ ಸತ್ಯಾಗ್ರಹಕ್ಕೆ ಮರುಚಾಲನೆ ನೀಡುವುದರಿಂದ ಗ್ರಾಮ ವ್ಯವಸ್ಥೆ, ಕೈ ಉತ್ಪನ್ನಗಳ ಆರ್ಥಿಕತೆ, ಸಹಜ ಕೃಷಿ, ಸ್ಥಳೀಯ ಸಂಸ್ಕೃತಿಗಳು, ಮಾತೃಭಾಷೆಗಳು, ದುರ್ಬಲ ಜನವರ್ಗಗಳು ಮತ್ತು ದುರ್ಬಲಗೊಂಡಿರುವ ಪ್ರಾಕೃತಿಕ ಸಂಪನ್ಮೂಲಗಳು-ಇವೆಲ್ಲವನ್ನೂ ಮೇಲೆತ್ತಬಲ್ಲ ಅಹಿಂಸಾತ್ಮಕ ಚಳವಳಿಯಾಗಿ ಮುಂದುವರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಈ ಇಡೀ ಚಳವಳಿಯಲ್ಲಿ ಧೀಃಶಕ್ತಿಯಾಗಿ ನಿಂತವರು ಹಿರಿಯ ರಂಗಕರ್ಮಿ, ಗಾಂಧಿವಾದಿ ಪ್ರಸನ್ನ. ಅವರು ಈಗಾಗಲೇ ಕೆಲ ದಿನಗಳಿಂದ ಬದನವಾಳುವಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸತ್ಯಾಗ್ರಹಿಗಳನ್ನು, ಗ್ರಾಮಸ್ಥರನ್ನು, ನೇಕಾರರನ್ನು ಮತ್ತು ಸಮಾನ ಮನಸ್ಕರನ್ನು ಒಂದುಗೂಡಿಸುವ ಕೆಲಸದಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ. ಇದರೊಂದಿಗೆ ಚಳವಳಿಗೆ ಹೊಸ ಆಯಾಮ ನೀಡುವ ಉದ್ದೇಶಕ್ಕೆ ಚಾಲನೆ ಸಿಕ್ಕಂತಾಗಿದೆ.

ಬರವನ್ನು ಗೆದ್ದ ಬದನವಾಳು

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಬದನವಾಳು ಶಾಪಗ್ರಸ್ತ ಊರು. ಕಾಲಕಾಲಕ್ಕೂ ಕಾಡುತ್ತಿದ್ದುದು ಕ್ಷಾಮ ಮತ್ತು ಬಡತನ. ಇದರಿಂದ ಗ್ರಾಮದ ಜನರನ್ನು ಹೇಗಾದರೂ ಮಾಡಿ ಪಾರುಮಾಡಬೇಕು ಎಂದು ಹೊರಟವರು ತಗಡೂರಿನ ಗಾಂಧಿವಾದಿ ರಾಮಚಂದ್ರ ರಾಯರು. ಹಾಗೆ ಆರಂಭವಾಗಿದ್ದು ಬದನವಾಳುವಿನ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರ. ಅದು 1925 ರಲ್ಲಿ. ದುಡಿಮೆಯೇ ಇಲ್ಲದೆ ಹತಾಶರಾಗಿ ಕುಳಿತಿದ್ದ ಗ್ರಾಮದ ಸುತ್ತಮುತ್ತಲಿನ ಜನ ಈ ಊರಿಗೇ ದಾಂಗುಡಿ ಇಟ್ಟರು. ರಾಟೆಯ ಭರಾಟೆ ಜೋರಾಯಿತು. ಜನರ ಉತ್ಸಾಹ ಮೇರೆ ಮೀರಿತು. ರಾಟೆಗಳ ಸಂಖ್ಯೆ ನೂರಲ್ಲ ಸಾವಿರಕ್ಕೇರಿತು. ನೂಲುವ ಜೊತೆಗೆ ಬಟ್ಟೆ ನೆಯ್ಗೆಯೂ ಶುರುವಾಯಿತು. ಈ ಪರಿಯಾಗಿ ಖಾದಿ ಜನರ ಬದುಕನ್ನು ಹಸನಾಗಿಸಿದ್ದನ್ನು ಕೇಳಿ ಹರ್ಷಿತರಾದ ಗಾಂಧೀಜಿ ನೇರವಾಗಿ ಬದನವಾಳಿಗೆ ಬಂದಿಳಿದರು. ಒಂದಲ್ಲ ಎರಡೆರಡು ಬಾರಿ (1927 ಮತ್ತು1932ರಲ್ಲಿ). ಗ್ರಾಮಸ್ವರಾಜ್ಯದ ಕನಸು ಸಾಕಾರಗೊಂಡಿದ್ದನ್ನು ಕಂಡು ಹಿರಿಹಿರಿ ಹಿಗ್ಗಿದರು. ಗ್ರಾಮೀಣ ಅರ್ಥ ವ್ಯವಸ್ಥೆಯನ್ನು ಖಾದಿ ಸಮೃದ್ಧಗೊಳಿಸಿದ ರೀತಿಗೇ ಅವರು ಬೆರಗಾದರು.

ಬದನವಾಳು ದಟ್ಟ ದರಿದ್ರ ಬರವನ್ನು ಗೆದ್ದಿತ್ತು. ಜನರ ಶ್ರಮವೇ ಅವರ ಬದುಕನ್ನು ನೇರ್ಪುಗೊಳಿಸಿತ್ತು. ಒಂದಾದ ಮೇಲೆ ಒಂದರಂತೆ 60ಕ್ಕೂ ಹೆಚ್ಚು ಕೈಮಗ್ಗಗಳು ತಳವೂರಿದವು. ಜನರ ಕೈಗೆ, ಮನಸ್ಸಿಗೆ ಬಿಡುವಿಲ್ಲವಾಯಿತು. ಗ್ರಾಮದ ಚರಕ ಸಂಸ್ಕೃತಿ ದೇಶಕ್ಕೇ ಮಾದರಿಯಾಯಿತು. ಆದರೆ ಯಾವತ್ತು ರಕ್ಕಸ ಗಾತ್ರದ ಯಂತ್ರಗಳು ಕಾಲಿಟ್ಟವೋ ಶ್ರಮದಿಂದ ಕಟ್ಟಿದ ಬದುಕನ್ನು ಲಟಲಟನೇ ಕುಟ್ಟಿ ಕೆಡವಿ ಬಿಟ್ಟವು. ಜಾತಿ ವೈಷಮ್ಯವೂ ಸದ್ದು ಮಾಡಿತು. ಅದರೊಂದಿಗೆ ಮನಸುಗಳೂ ಮುರಿದು ಹೋದವು,. ಬದನವಾಳು ಕ್ರಮೇಣ ಎಲ್ಲವನ್ನೂ ಕಳಕೊಂಡು ಬಡತನದ ಗೂಡಿನೊಳಗೆ ಮುಚ್ಚಟೆ ಮಲಗಿಬಿಟ್ಟಿತು.

ಮತ್ತೆ ಕಟ್ಟುವ ಕೆಲಸ

ಹೀಗೆ ಮುರಿದು ಬಿದ್ದ ಬದುಕನ್ನು ಕಟ್ಟುತ್ತೇನೆ ಎಂದು ಹೊರಟ ಪ್ರಸನ್ನ ಅವರು 2015ರಲ್ಲಿ ಬದನವಾಳು ಚಳವಳಿಗೆ ಚಾಲನೆ ನೀಡುವ ಕೆಲಸ ಮಾಡಿದ್ದರು. ʼಬದನವಾಳುವಿಗೆ ಬನ್ನಿ, ನಾಳಿನ ಬದುಕನ್ನು ಉಳಿಸಿʼ ಎಂದು ಕರೆಕೊಟ್ಟಿದ್ದ ಅವರು ಐದು ದಿಕ್ಕುಗಳಿಂದ ಬದನವಾಳುವಿಗೆ ಕಾಲ್ನಡಿಗೆಯನ್ನು ಕೈಗೊಂಡಿದ್ದರು. ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಟ ಇರ್ಫಾನ್ ಖಾನ್ ಸೇರಿದಂತೆ ರಾಷ್ಟ್ರದ ನಾನಾ ಭಾಗಗಳಿಂದ ಆಗಮಿಸಿದ ಕಾರ್ಯಕರ್ತರು, ಚಿತ್ರನಟರು, ರಂಗಕರ್ಮಿಗಳು, ಪತ್ರಕರ್ತರು ಬೆಂಬಲ ವ್ಯಕ್ತಪಡಿಸಿದ್ದು ವಿಶೇಷ.

ಪ್ರಸನ್ನ ಮತ್ತು ಇತರ ಸತ್ಯಾಗ್ರಹಿಗಳು ಅನೇಕ ದಿನಗಳ ಕಾಲ ಬದನವಾಳುವಿನ ಮುರುಕು ಮನೆಯಲ್ಲಿ ಕುಳಿತು ಮುರಿದು ಬಿದ್ದ ಬದುಕನ್ನು ಕಟ್ಟುವ ಪ್ರಯತ್ನವನ್ನು ಮಾಡಿದ್ದರು. ಕನಿಷ್ಠ ಬಟ್ಟೆ, ಕನಿಷ್ಠ ಪಾತ್ರೆ, ಎಲ್ಲ ಕನಿಷ್ಠ ಸೌಲಭ್ಯಗಳೊಂದಿಗೆ ಶುದ್ಧ ಪರಿಸರದಲ್ಲಿ ಕಳೆಯುವ ಅವರ ನಿಲುವು ಅನೇಕರಿಗೆ ಚೇತೋಹಾರಿಯಾಗಿತ್ತು. ಹಾಗಾಗಿ ಆ ಚಳವಳಿ ದೊಡ್ಡ ಯಶಸ್ಸನ್ನೇ ಕಂಡಿತ್ತು ಎಂಬುದು ನಿಸ್ಸಂದೇಹ.

“ಅವರವರ ಗ್ರಾಮದಲ್ಲೇ ಇದ್ದುಕೊಂಡು ಗುಳೆ ಹೋಗದಂತೆ ಕೆಲಸ ಮಾಡುತ್ತ, ಉತ್ಪಾದನೆಯಲ್ಲಿ ತೊಡಗಿಕೊಳ್ಳುತ್ತ ಇದ್ದುದರಲ್ಲಿ ನೆಮ್ಮದಿಯಿಂದ ಬದುಕುವ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿತ್ತು. ಹರಿದು ಹಂಚಿ ಹೋದ ಬದುಕಿನ ಸುತ್ತ ಸುಸ್ಥಿರ ಬದುಕಿನ ಸಾಧ್ಯತೆಯನ್ನು ಹುಡುಕುತ್ತ ಹೋಗಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ಬದನವಾಳು ಸತ್ಯಾಗ್ರಹದ ಬಳಿಕ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಿದೆವು. ಆದರೆ ಕಾಲ ಕ್ರಮೇಣ ಅವೆಲ್ಲ ಸಡಿಲವಾಗುತ್ತ ಹೋದವು. ಕೆಲವರು ತಟಸ್ಥ ನಿಲುವು ತಳೆದರು. ಅಲ್ಲಿನ ಖಾದಿ ಕೇಂದ್ರದಲ್ಲಿ ದುಡಿಯುವವರಿಗೆ ಸಂಬಳವೇ ಇಲ್ಲದಂತಾಯಿತು,” ಎಂದು ವಿಷಾದದಿಂದ ನುಡಿಯುತ್ತಾರೆ ಬದನವಾಳು ಸತ್ಯಾಗೃಹದ ಸಂಚಾಲಕರಾಗಿದ್ದ ಜಿ.ಎಸ್. ಜಯದೇವ್.

ಮನುಷ್ಯರಿಗಾಗಿ ಅಭಿವೃದ್ಧಿ ಆಗಲಿ

ನಿರಂತರ ಪ್ರಯತ್ನದ ಬಳಿಕ ಇತ್ತೀಚಿಗೆ ಬದನವಾಳು ಖಾದಿ ಕೇಂದ್ರಕ್ಕೆ ಸರ್ಕಾರ ನಲವತ್ತು ಕೋಟಿ ರೂ. ಮಂಜೂರು ಮಾಡಿದೆ. ಈ ಹಣದಿಂದ ಗ್ರಾಮೀಣ ಉದ್ಯೋಗ, ಉತ್ಪಾದನೆ, ಖಾದಿ ಕೇಂದ್ರಕ್ಕೆ ಜೀವ ತುಂಬುವ ಕೆಲಸ ಆಗಬೇಕಾಗಿದೆ. ಆದರೆ ಸರ್ಕಾರ ಕೈಗೊಳ್ಳುವ ಕಾರ್ಯಕ್ರಮಗಳು ಸಾಮಾನ್ಯವಾಗಿ ಕೇಂದ್ರೀಕೃತವಾಗಿರುತ್ತವೆ. ಕಟ್ಟಡ ನಿರ್ಮಾಣ ಮಾಡುವುದು, ಅದನ್ನು ಬಹಳ ಬೇಗ ಮುಗಿಸುವುದು, ಇಷ್ಟೇ ಅದರ ಉದ್ದೇಶವಾಗಿರುತ್ತದೆ. ಅಭಿವೃದ್ಧಿಗಾಗಿ ಮನುಷ್ಯರೋ, ಮನುಷ್ಯರಿಗಾಗಿ ಅಭಿವೃದ್ಧಿಯೋ ಎಂಬ ಪರಿಸ್ಥಿತಿ ಇಂದು ಎಲ್ಲ ಕಡೆ ವ್ಯಾಪಕವಾಗಿದೆ. ಅಭಿವೃದ್ಧಿಗಳು ಮನುಷ್ಯರಿಗಾಗಿ ಇದೆ ಎಂದು ಅನ್ನಿಸುತ್ತಲೇ ಇಲ್ಲ. ಹಾಗಾಗಿ ಬದನವಾಳುವಿನಲ್ಲಿ ಏನೇ ಅಭಿವೃದ್ಧಿ ಆದರೂ ಅದು ಆ ಊರಿಗಾಗಿ ಮತ್ತು ಬದನವಾಳು ಗ್ರಾಮಸ್ಥರಿಗಾಗಿ ಆಗಬೇಕಿದೆ. ಬದನವಾಳು ಒಂದು ಕೇಂದ್ರವಾಗಿದ್ದುಕೊಂಡು ಸುತ್ತಮುತ್ತಲ ಹಳ್ಳಿಗಳ ಸಮುಚ್ಛಯ ಉತ್ಪಾದನೆಯನ್ನು ಮತ್ತು ಸರ್ವೋದಯದ ಆರ್ಥಿಕತೆಯನ್ನು ಹುಟ್ಟು ಹಾಕಬೇಕು ಎಂಬ ಹಕ್ಕೊತ್ತಾಯವನ್ನು ಮಂಡಿಸುತ್ತಾರೆ ಬದನವಾಳು ಗ್ರಾಮದವರೇ ಆದ ಜಯದೇವ್.

2015ರಲ್ಲಿ ಬದನವಾಳು ಸತ್ಯಾಗೃಹವನ್ನು ಮಾಡಿದಾಗ ಪರಿಸ್ಥಿತಿ ಹೇಗಿತ್ತೋ ಅದಕ್ಕಿಂತ ತೀವ್ರತರವಾದ ಅಸ್ಥಿರತೆ ಇವತ್ತು ನಮ್ಮ ಸಮಾಜವನ್ನ, ಜಗತ್ತನ್ನು ಮನುಕುಲವನ್ನೂ ಆವರಿಸಿದೆ. ಈಗ ಇಂತಹ ರಾಕ್ಷಸ ಯಂತ್ರದ ಎದುರಿಗೆ ಎರಡು ಪುಟ್ಟ ಕೈಗಗಳು ಹೇಗೆ ನಿಲ್ಲಲು ಸಾಧ್ಯ ಎಂಬುದೇ ಒಗಟಾಗಿದೆ. ಆದರೆ ಕಳೆದ ಹತ್ತು-ಹನ್ನೆರಡು ವರ್ಷಗಳಲ್ಲಿ ಕನಿಷ್ಠ ಶ್ರೀಮಂತ ವರ್ಗಗಳು, ಸಿರಿವಂತ ದೇಶಗಳು ಸಹಜ ಉತ್ಪನ್ನಗಳ ಕಡೆಗೆ ಆಕರ್ಷಿತರಾಗಿವೆ. ಅವರಿಗೀಗ ಗಾಣದಲ್ಲಿ ಮಾಡಿದ ಎಣ್ಣೆ ಬೇಕು. ಅದಕ್ಕಾಗಿ ದುಬಾರಿ ಹಣವನ್ನೂ ತೆರುವುದಕ್ಕೆ ಅವರು ಸಿದ್ಧರಿದ್ದಾರೆ. ಅವರು ಉತ್ತಮ ಅಕ್ಕಿ ಖರೀದಿಸಲು ಸಿದ್ಧರಿದ್ದಾರೆ. ಸಹಜ ಮತ್ತು ಹತ್ತಿ ಬಟ್ಟೆಗೆ ಜಾಸ್ತಿ ಹಣಕೊಟ್ಟು ಖರೀದಿ ಮಾಡಲು ಸಿದ್ಧರಿದ್ದಾರೆ. ಹಾಗಾಗಿ ನಾವು ಇವತ್ತು ಒಳ್ಳೆಯ ಸಂಘಟನೆಗಳನ್ನು, ಖಾದಿ ಕೇಂದ್ರಗಳನ್ನು ಆರಂಭಿಸಿದರೆ ಅದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುವ ಸಾಧ್ಯತೆಯಿದೆ. ಆ ಮಾರುಕಟ್ಟೆಯಲ್ಲಿ ಸಿಕ್ಕ ಹೆಚ್ಚಿನ ಬೆಲೆಯನ್ನು ನಾವು ಅಮುಲ್ ಮಾದರಿಯಲ್ಲಿ ಉತ್ಪಾದಕರಿಗೆ ನಾವು ತಲುಪಿಸಿದರೆ ಆಗ ಗ್ರಾಮ ಗೆಲ್ಲುತ್ತದೆ ಎಂಬುದು ನಮ್ಮ ಗುರಿ. ಇವತ್ತು ಗ್ರಾಮಗಳನ್ನು ಗೆಲ್ಲಿಸುವುದಕ್ಕೆ ನಮಗೆ ಸಣ್ಣ ಆಧಾರ ಸಿಕ್ಕಿದೆ. ಮಾರುಕಟ್ಟೆ ಸಿದ್ಧವಾಗಿರುವುದೇ ಇದಕ್ಕೆ ಆಧಾರ ಎನ್ನುತ್ತಾರೆ ಈ ಚಳವಳಿಯಲ್ಲಿ ಮುಂಚೂಣಿಯಲ್ಲಿ ಗಟ್ಟಿಯಾಗಿ ನಿಂತಿರುವ ಪ್ರಸನ್ನ ಅವರು.

“ಜಪಾನ್ ದೇಶದ ಹೆಸರಾಂತ ವಿನ್ಯಾಸಕಾರ ಫ್ಯಾಶನ್ ಬ್ರಾಂಡ್ ಶುರುಮಾಡಿದ. ಅದರ ಹೆಸರು ಹಾತ್. ಆತ ಆ ಬ್ರಾಂಡ್ ಮೂಲಕ ಶುದ್ಧವಾದ ಖಾದಿ ಬಟ್ಟೆಯನ್ನು ಇಟ್ಟುಕೊಂಡು ದೊಡ್ಡ ಪ್ರಮಾಣದಲ್ಲಿ ಬ್ರಾಂಡಿಂಗ್ ಮಾಡ್ತಾ ಇದ್ದಾನೆ. ಆತನಿಗೆ ಇರುವ ಕೊರತೆ ಏನೆಂದರೆ ಶುದ್ಧವಾದುದು ಸಿಗುತ್ತಿಲ್ಲ. ಭಾರತದಿಂದ ಎಷ್ಟು ಬಟ್ಟೆ ಕೊಡ್ತೀರೋ ಅಷ್ಟು ಬಟ್ಟೆ ನನಗೆ ಬೇಕು. ಆದರೆ ಅದು ಶುದ್ಧ ಖಾದಿಯಾಗಿರಬೇಕು. ಪರಿಶುದ್ಧತೆಯ ಗ್ಯಾರಂಟಿ ಕೊಟ್ಟರೆ ನೀವು ಹೇಳಿದ ಬೆಲೆಗೆ ಕೊಳ್ಳಲು ಸಿದ್ಧನಿದ್ದೇನೆ ಎಂದು ಹೇಳುತ್ತಿದ್ದಾನೆ,” ಎನ್ನುವ ಪ್ರಸನ್ನ ಅವರು, ನಾವೆಲ್ಲ ಈಗ ಶುದ್ಧವಾದುದನ್ನು ಕೊಡುವ ಸಂಕಲ್ಪ ಮಾಡಬೇಕು ಎನ್ನುತ್ತಾರೆ.

ಗಾಂಧಿ ಆಶ್ರಮವಾಗಿ ಖಾದಿ ಕೇಂದ್ರ

ಈ ಎಲ್ಲ ಚಳವಳಿ, ಹೋರಾಟದ ಜೊತೆ ಜೊತೆಗೇ ಬದನವಾಳು ಖಾದಿ ಕೇಂದ್ರವನ್ನು ಒಂದು ಗಾಂಧಿ ಆಶ್ರಮವಾಗಿ ರೂಪಿಸುವ ದೃಢ ನಿರ್ಧಾರವನ್ನು ಬದನವಾಳು ಹೋರಾಟ ಸಮಿತಿ ಕೈಗೊಂಡಿದೆ. ಇದನ್ನು ಸತ್ಯಾಗ್ರಹಿಗಳೇ ತಮ್ಮ ಶ್ರಮದಿಂದ, ಸ್ಥಳೀಯರ ಸಹಯೋಗದೊಂದಿಗೆ ರೂಪಿಸುವ ತೀರ್ಮಾನಕ್ಕೆ ಬಂದಿದ್ದಾರೆ. “ಬದನವಾಳು ಎನ್ನುವುದು ಒಂದು ಸಂಕೇತ ಮಾತ್ರ. ಅದರ ಸ್ಪೂರ್ತಿಯಲ್ಲಿ ಪ್ರತಿಯೊಬ್ಬರ ಊರಿನಲ್ಲೂ ಇರುವ ಗಾಂಧಿ ಆಶ್ರಮವೊ, ಚರಕ ಸಂಸ್ಥೆಯೋ, ಶಾಲೆಯೋ ಇದೆ. ಅದನ್ನು ಆ ಊರಿನ ಜನರ ಶ್ರಮದ ಮೂಲಕ ಅವುಗಳನ್ನು ಇನ್ನಷ್ಟು ಗಟ್ಟಿಗೊಳಿಸುವುದು ಕೂಡ ಈ ನಿರ್ಣಯದ ಆಶಯವಾಗಿದೆ,” ಎನ್ನುತ್ತಾರೆ ಪ್ರಸನ್ನ ಅವರು.

“ಇಂದು ಟಾಟಾ, ಅಂಬಾನಿ, ಅದಾನಿಯಂಥ ಉದ್ಯಮಪತಿಗಳು ಕೋಟಿ ಕೋಟಿ ಸುರಿದು ಅಂಗಡಿಗಳನ್ನು ತೆರೆದಿದ್ದಾರೆ. ಆದರೆ ಅವರಿಗೆ ಶುದ್ಧವಾದ ಪದಾರ್ಥ ಸಿಗ್ತಾ ಇಲ್ಲ. ಇಲ್ಲಿ ತನಕ ನೀವು ಹಾಕ್ಕೊಂಡಿರುವ ಬಟ್ಟೆಯಲ್ಲಿ ಶುದ್ಧವಾದ ರೇಷ್ಮೆ ಇದೆಯೋ ಅಥವಾ ಅದು ಸಿಂಥೆಟಿಕ್ಕಾ ಅನ್ನುವುದನ್ನು ಅಳೆಯಲು ಸಾಧ್ಯವಿರಲಿಲ್ಲ. ಇಂದು ಆ ತಂತ್ರಜ್ಞಾನವೂ ಬಂದಿದೆದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಕೈಗಾರಿಕೆಗಳನ್ನು ಮೇಲೆತ್ತಲು ಅವಕಾಶವಿದೆ. ಅದಕ್ಕಿರುವ ತೊಂದರೆ ಎಂದರೆ ನಮ್ಮ ಸರ್ಕಾರಗಳು, ಅಧಿಕಾರಿಗಳು ಹಳೆಯ ಮನಸ್ಥಿತಿಯಲ್ಲೇ ತೊಳಲಾಟ ನಡೆಸಿದ್ದಾರೆ. ಜನ ಇವತ್ತು ಖಾದಿಯನ್ನು ಖರೀದಿ ಮಾಡುತ್ತಿದ್ದಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಪಾರ್ಲಿಮೆಂಟಿನಲ್ಲಿ ಹೇಳಿದ ೧೧ ಲಕ್ಷ ಕೋಟಿ ರೂ. ಖಾದಿ ಮಾರಾಟವಾಗಿದೆ ಎಂಬುದು ಅರ್ಧ ಸತ್ಯ. ಪೂರ್ಣ ಸತ್ಯ ಏನೆಂದರೆ ಹಾಗೆ ಮಾರಾಟವಾಗಿರುವುದು ಪರಿಶುದ್ಧ ಖಾದಿ ಅಲ್ಲ. ಅದು ಖಾದಿಯಂತೆ ಕಾಣುವ ನಕಲಿ ಸಿಂಥೆಟಿಕ್ ವಸ್ತು. ಈ ವಸ್ತುವೇ ನಮ್ಮ ಖಾದಿಯನ್ನು, ನಮ್ಮ ಗ್ರಾಮೀಣ ಬದುಕನ್ನು ಕೊಲ್ಲುತ್ತಿದೆ. ಗ್ರಾಮೀಣ ಮಹಿಳೆಯರ ಕೈಗಳನ್ನು ಕತ್ತರಿಸುತ್ತಿದೆ,” ಎಂದು ಪ್ರಸನ್ನ ಅವರು ನೋವಿನಿಂದ ನುಡಿಯುತ್ತಾರೆ.

ಶಾಲ್ ಮಾರಿ ಸಂಬಳ ಕೊಟ್ಟೆವು

“ಖಾದಿ ಕೇಂದ್ರದ ಉದ್ಯೋಗಿಗಳಿಗೆ ಸರ್ಕಾರ ಮೂರು ತಿಂಗಳಿಂದ ಸಂಬಳವನ್ನೇ ಕೊಟ್ಟಿರಲಿಲ್ಲ. ಅವರು ಬದುಕುವುದಾದರೂ ಹೇಗೆ? ಕೊನೆಗೆ ನಾವೆಲ್ಲ ಹೋಗಿ ಕೈಮಗ್ಗದಿಂದ ತಯಾರಿಸಿದ ಬಾತ್ ಟವೆಲ್ ಗಳನ್ನು ಹಾದಿಬದಿಯಲ್ಲಿ ನಿಂತು ಮಾರಾಟ ಮಾಡಿದೆವು. ಅದರಿಂದ ಸಂಗ್ರಹವಾಗಿದ್ದು ಎರಡೂವರೆ ಲಕ್ಷ ರೂ. ಅದರಿಂದ ನೌಕರರಿಗೆ ಸಂಬಳ ಕೊಟ್ಟೆವು,” ಎನ್ನುತ್ತಾರೆ ಬದನವಾಳು ಚಳವಳಿಯ ಇನ್ನೊಬ್ಬ ಸದಸ್ಯರಾದ ಎಂ.ಮಹದೇವಪ್ಪ ಅವರು.

ಒಂದು ಕಾಲದಲ್ಲಿ ಇಡೀ ದೇಶವೇ ಹುಬ್ಬೇರಿಸುವಂತೆ ಮಾಡಿದ್ದ ಬದನವಾಳು ಈಗ ಅಕ್ಷರಶಃ ಬಡಕಲಾಗಿದೆ. ಮತ್ತೆ ಅದಕ್ಕೆ ಕಸುವು ತುಂಬುವ ಸಾಹಸಕ್ಕೆ ಸತ್ಯಾಗ್ರಹಿಗಳು ಕೈ ಹಾಕಿದ್ದಾರೆ. ಅದು ಸುಲಭದ ಕೆಲಸವಂತೂ ಅಲ್ಲ. ಆದರೆ ಜಿದ್ದಿಗೆ ಬಿದ್ದರೆ ಕನಿಷ್ಠ ಒಂದು ನೂರು ಮಂದಿಯ ಬದುಕನ್ನಾದರೂ ಎತ್ತಿ ಹಿಡಿಯಬಹುದು. ಸತ್ಯಾಗ್ರಹಿಗಳಿಗೆ ಆ ಹಠವಂತೂ ಇದೆ.

Read More
Next Story