ಚಂದ್ರಶೇಖರನ್ ಸಾವಿಗೆ ನ್ಯಾಯ ಒದಗಿಸಬೇಕಿದೆ: ಮಧು ಬಂಗಾರಪ್ಪ
ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರನ್ ಸಾವಿಗೆ ನ್ಯಾಯ ಒದಗಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರನ್ ಸಾವಿಗೆ ನ್ಯಾಯ ಒದಗಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಬುಧವಾರ ( ಮೇ 29) ಸಂಜೆ ಚಂದ್ರಶೇಖರನ್ ಅವರ ಮನೆಗೆ ಭೇಟಿ ನೀಡಿದ ಸಚಿವರು, ಮೃತರ ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸುಮಾರು 20 ನಿಮಿಷಗಳ ಕಾಲ ಕುಟುಂಬಸ್ಥರೊಂದಿಗೆ ಮಾತನಾಡಿದ ಅವರು, ಮೃತ ಅಧಿಕಾರಿಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಲ್ಲಿಗೆ ಸಿಎಂ ಸಿದ್ದರಾಮಯ್ಯ ಆದೇಶದ ಮೇರೆಗೆ ಚಂದ್ರಶೇಖರನ್ ಮನೆಗೆ ಭೇಟಿ ನೀಡಿದ್ದೇನೆ. ಭೇಟಿ ವೇಳೆ ಚಂದ್ರಶೇಖರನ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿರುವೆ. ಸೂಕ್ತ ತನಿಖೆ ನಡೆಸಲು ಸಿಎಂ ದೆಹಲಿಯಿಂದ ಈಗಾಗಲೇ ಸೂಚನೆ ನೀಡಿದ್ದಾರೆ. ಈಗಾಗಲೇ ತನಿಖೆ ಕೂಡ ಪ್ರಾರಂಭವಾಗಿದೆ. ನಾನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನನ್ನ ಕರ್ತವ್ಯವನ್ನು ನಿರ್ವಹಿಸಲು ಭೇಟಿ ನೀಡಿದ್ದೇನೆ ಎಂದರು.
ಚಂದ್ರಶೇಖರನ್ ಅವರು ಕರ್ತವ್ಯದಲ್ಲಿದ್ದಾಗ ಇಂತಹ ಘಟನೆ ನಡೆದಿದೆ. ಹಾಗಾಗಿ ಅವರ ಕುಟುಂಬಕ್ಕೆ ಸಹಾಯವಾಗಬೇಕು ಎಂಬ ಕಾರಣದಿಂದ ಸಿಎಂ ಬಳಿ ಮೃತರ ಪತ್ನಿಯನ್ನು ಕರೆದುಕೊಂಡು ಹೋಗಲಾಗುವುದು. ತಮ್ಮ ಕುಟುಂಬದ ಬಗ್ಗೆ ಹಾಗೂ ತಮ್ಮ ಇಬ್ಬರು ಮಕ್ಕಳ ಓದು ಸೇರಿದಂತೆ ಎಲ್ಲವನ್ನು ಮೃತರ ಪತ್ನಿ ನನ್ನ ಮುಂದೆ ಹೇಳಿಕೊಂಡಿದ್ದಾರೆ. ಅವರ ಸಾವಿನ ಬಗ್ಗೆ ಇದೀಗ ತನಿಖೆ ನಡೆಯುತ್ತಿರುವುದರಿಂದ ಅದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ. ಇಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕೆಂದು ಹೇಳಿದರು.
ಸಾವಿನ ವಿಚಾರದಲ್ಲಿ ನಾವು ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಸಾವಿಗೆ ನ್ಯಾಯ ಒದಗಿಸಬೇಕಿದೆ. ಒಂದು ಕುಟುಂಬದಲ್ಲಿ ಸಾವು ಆದಾಗ ದುಃಖ ಉಂಟಾಗಿರುತ್ತದೆ. ಅದನ್ನು ರಾಜಕೀಯವಾಗಿ ನೋಡುವುದು ಸರಿಯಲ್ಲ. ಎಲ್ಲದಕ್ಕೂ ರಾಜಕೀಯ ಬಣ್ಣ ನೀಡುವುದು ಸರಿಯಲ್ಲ. ನಮ್ಮದು ಜನರ ಆಶೀರ್ವಾದದ ಮೇಲೆ ಇರುವ ಸರ್ಕಾರ. ಇಲ್ಲಿ ಏನೂ ಘಟನೆಯಾಗಿದೆಯೋ ಅದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಈ ನಡುವೆ ಚಂದ್ರಶೇಖರನ್ ಅವರ ನಿವಾಸದಲ್ಲಿ ಬುಧವಾರ ಸಿಐಡಿ ಪರಿಶೀಲನೆ ನಡೆಸಿದ್ದು,ಚಂದ್ರಶೇಖರನ್ ಅವರ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್‌ನಲ್ಲಿ ಪೆನ್ ಡ್ರೈವ್, ಲ್ಯಾಪ್‌ಟಾಪ್ ಹಾಗೂ ಇತರೆ ವಸ್ತುಗಳನ್ನು ಸಿಐಡಿ ವಶಕ್ಕೆ ಪಡೆದುಕೊಂಡಿದೆ.
ಏನಿದು ಅಕ್ರಮ?
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮುಖ್ಯ ಖಾತೆಯಲ್ಲಿ ಹಿಂದಿನ ಸಾಲಿನ ಹಾಗೂ 2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಮೊತ್ತದಲ್ಲಿ 88 ಕೋಟಿ ಹಣವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ ರಸ್ತೆಯ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಬ್ಯಾಂಕ್‌ನವರು ಫೆ.26ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಸಹಿ ಪಡೆದು ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಂತ-ಹಂತವಾಗಿ 187.33 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಮಾ.4ರಂದು 25 ಕೋಟಿ ರೂ., ಮಾ.6ರಂದು 25 ಕೋಟಿ ರೂ., ಮಾ.21ರಂದು 44 ಕೋಟಿ ರೂ., ಮಾ.22ರಂದು 43.33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ವರ್ಗಾವಣೆಯಾಗಿದೆ.
ಚಂದ್ರಶೇಖರನ್ ಡೆತ್ ನೋಟ್‌ನಲ್ಲಿ ಏನಿದೆ?
ಈ ಹಗರಣ ಬೆಳಕಿಗೆ ಬಂದಿದ್ದು, ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ (52) ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಬಳಿಕವಾಗಿದೆ. ಚಂದ್ರಶೇಖರನ್ ಆತ್ಮಹತ್ಯೆಗೂ ಮೊದಲು ವಾಲ್ಮೀಕಿ ನಿಗಮದಲ್ಲಿ 85 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ನಿಗಮದ ಅಧಿಕಾರಿಗಳ ವಿರುದ್ಧ 5 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಅಲ್ಲದೆ ಈ ಅಕ್ರಮದಲ್ಲಿ ನಿಗಮದ ಎಂಡಿ ಜೆ.ಜಿ.ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣನವರ್, ಯೂನಿಯನ್ ಬ್ಯಾಂಕ್ನ ಮ್ಯಾನೇಜರ್ ಶುಚಿಸ್ಮಿತಾ ರವುಲ್ ಪಾತ್ರವಿದೆ ಎಂದು ಉಲ್ಲೇಖಿಸಿದ್ದಾರೆ. ನಿಗಮದ ಎಂಡಿ ಅವರು ಅನುದಾನವನ್ನು ಒತ್ತಾಯಪೂರ್ವಕವಾಗಿ ವರ್ಗಾಯಿಸಿದ್ದಾರೆ. ನಮಗೆ ಇದರ ಒಳಸಂಚು ಅರ್ಥವೇ ಆಗಲಿಲ್ಲ. ನಿಗಮಕ್ಕೆ ಇನ್ನೂ ಬ್ಯಾಂಕ್ ಪಾಸ್ಬುಕ್ ಹಾಗೂ ಚೆಕ್ ಬುಕ್ ನೀಡಿಲ್ಲ. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಸರಿಯಾದ ಉತ್ತರ ನೀಡಿಲ್ಲ ಎಂದೂ ಉಲ್ಲೇಖಿಸಿದ್ದಾರೆ.
ನಾನು ನಿಗಮಕ್ಕೆ ಮೋಸ ಮಾಡಿಲ್ಲ, ಅವ್ಯವಹಾರದಲ್ಲಿ ಭಾಗಿಯಾಗಿಲ್ಲ. ವಂಚನೆಯನ್ನೂ ಮಾಡಿಲ್ಲ. ಆದ್ರೆ, ನಿಗಮದ ಹಣವನ್ನು ನಿಯಮಬಾಹಿರವಾಗಿ ಹಣ ವರ್ಗಾವಣೆ ಆಗಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಕೆಲಸದ ಒತ್ತಡದಲ್ಲಿ ನಾನು ಮಾಡಿರುವ ತಪ್ಪೇನೆಂದರೆ, ಖಾತೆಯ ಚೆಕ್ ಬುಕ್ ಮತ್ತು ಕ್ಯಾಶ್ ಪುಸ್ತಕ ಮುಕ್ತಾಯಗೊಳಿಸಿರುವುದು ಎಂದು ತಮ್ಮ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.