Actor Darshan Case | ಪವಿತ್ರಾ ಗೌಡ ಮ್ಯಾನೇಜರ್ ಅರೆಸ್ಟ್
ಪವಿತ್ರಾ ಗೌಡ ಮ್ಯಾನೇಜರ್ ದೇವರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Actor Darshan Case | ರೇಣುಕಾ ಸ್ವಾಮಿ ಕೊಲೆ ಪ್ರಕಣದಲ್ಲಿ ಈಗಾಗಲೇ ದರ್ಶನ್(D BOSS) ಸೇರಿದಂತೆ 16 ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇದೀಗ ಪವಿತ್ರಾ ಗೌಡ ಮ್ಯಾನೇಜರ್ ದೇವರಾಜನನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರು ರಸ್ತೆಯಲ್ಲಿ ದೇವರಾಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ನಡೆದ ದಿನ, ರೇಣುಕಾಸ್ವಾಮಿ ಕೊಲೆಯಾದ ಶೆಡ್‌ಗೆ ಪವಿತ್ರಾ ಜತೆಗೆ ದೇವರಾಜ್ ಕೂಡ ಹೋಗಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದೇವರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ನಂತರ ಪವಿತ್ರಾ ಗೌಡ ನೇರವಾಗಿ ತಮ್ಮ ಮನೆಗೆ ಹೋಗಿದ್ದರು. ರೇಣುಕಾ ಸ್ವಾಮಿ ಮೇಲೆ ಮೊದಲು ಹಲ್ಲೆ ನಡೆಸಿದ್ದೇ ಪವಿತ್ರಾ ಗೌಡ ಎನ್ನಲಾಗಿದೆ. ಪವಿತ್ರಾ ಗೌಡ ನೋಡುತ್ತಿದ್ದಂತೆ ರೇಣುಕಾಸ್ವಾಮಿ ಪವಿತ್ರಾ ಕಾಲಿಗೆ ಬಿದ್ದು ತಪ್ಪಾಯ್ತು ಅಂತ ಕ್ಷಮೆ ಕೇಳಿದ್ದನಂತೆ. ಸದ್ಯ ಪವಿತ್ರಾ ಮನೆಯಲ್ಲಿ ಪೊಲೀಸರು ಆ ದಿನ ಪವಿತ್ರಾ ಧರಿಸಿದ್ದ ಬಟ್ಟೆ ಹಾಗೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದ ಚಪ್ಪಲಿಯನ್ನು ಸೀಜ್ ಮಾಡಲಿದ್ದಾರೆ. ಪ್ರಕರಣದಲ್ಲಿ ಪವಿತ್ರಾ ಚಪ್ಪಲಿ ಕೂಡ ಮಹತ್ವದ ಸಾಕ್ಷ್ಯವಾಗಲಿದೆ.
ಏನಿದು ಪ್ರಕರಣ?
ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬವರನ್ನು ಜೂನ್ 8ರಂದು ಕಿಡ್ನಾಪ್ ಮಾಡಿ ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಜೂನ್ 9ರಂದು ಸುಮನಹಳ್ಳಿಯ ರಾಜಕಾಲುವೆ ಬಳಿ ಬೀದಿ ನಾಯಿಗಳು ಎಳೆದಾಡುವಾಗ ಶವ ಪತ್ತೆಯಾಗಿತ್ತು. ಅದೇ ದಿನ ರಾಮ್ ದೋರ್ ಎಂಬ ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ನಡೆಸಿದ್ದರು.
ಅಪರಿಚಿತ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ತನಿಖೆ ಆರಂಭಿಸಿದ್ದರು. ಇದರ ಮಧ್ಯೆಯೇ, ಗಿರಿನಗರದ ಮೂವರು ಆರೋಪಿಗಳು ತಾವೇ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶರಣಾಗಿದ್ದರು. ಹಣಕಾಸು ವಿಚಾರವಾಗಿ ಕೊಲೆ ಮಾಡಿರುವುದಾಗಿ ಅವರು ಹೇಳಿದ್ದರು. ಅನುಮಾನಗೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ, ನಟ ದರ್ಶನ್ ಕೈವಾಡ ಇರುವುದು ಬಯಲಾಗಿತ್ತು. ಆರೋಪಿಗಳೇ ದರ್ಶನ್ ಹೆಸರು ಹೇಳಿದ ಕಾರಣ ನಟ ದರ್ಶನ್ ಸೇರಿ 16 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ದರ್ಶನ್ ಎ2 ಆಗಿದ್ದಾರೆ.