
ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಅಧಿಕ ಹಿಂದೂಗಳ ಹೆಸರು ನಾಪತ್ತೆ? ಯೋಗಿ ಆದಿತ್ಯನಾಥ್ ಕಳವಳ
ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಅಧಿಕ ಹಿಂದೂ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. 2027ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಶೀಲನೆಗೆ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ದೇಶಾದ್ಯಂತ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಒಂದು ಕೋಟಿಗೂ ಅಧಿಕ ಹಿಂದೂ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವ ಅರ್ಹ ಮತದಾರರನ್ನು ಗುರುತಿಸಿ, ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಪಕ್ಷದ ಕಾರ್ಯಕರ್ತರು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿ, ಸಂಘಟನಾತ್ಮಕ ಬಲವರ್ಧನೆ ಮತ್ತು ಚುನಾವಣಾ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಸಿದೆ. ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ವಿಧಾನಸಭಾ ಮತದಾರರ ಪಟ್ಟಿಯಿಂದ ಅಪಾರ ಸಂಖ್ಯೆಯ ಹಿಂದೂ ಮತದಾರರ ಹೆಸರುಗಳು ಕೈಬಿಟ್ಟಿವೆ ಎಂದು ಆರೋಪಿಸಿದ್ದಾರೆ. ತಮ್ಮ ವಾದಕ್ಕೆ ಬೆಂಬಲವಾಗಿ ಕೆಲವು ಅಂಕಿಅಂಶಗಳನ್ನೂ ಉಲ್ಲೇಖಿಸಿದ್ದಾರೆ.
ಅವರ ಪ್ರಕಾರ, ಪಂಚಾಯಿತಿ ಚುನಾವಣೆಯ ಮತದಾರರ ಪಟ್ಟಿಯಲ್ಲಿರುವ ಸುಮಾರು 66 ಲಕ್ಷ ಜನರ ಹೆಸರುಗಳು ವಿಧಾನಸಭಾ ಮತದಾರರ ಪಟ್ಟಿಯಲ್ಲಿ ಕಾಣೆಯಾಗಿವೆ. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸುಮಾರು 55 ಲಕ್ಷ ಫಲಾನುಭವಿಗಳು ಮತದಾರರಾಗಿ ನೋಂದಣಿಯಾಗಿಲ್ಲ. ಅಲ್ಲದೆ, 18ರಿಂದ 19 ವರ್ಷದೊಳಗಿನ ಸುಮಾರು 4.5 ಲಕ್ಷ ಯುವಕರ ಹೆಸರುಗಳೂ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿದ್ದಾರೆ.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿರುವ ಯೋಗಿ, ಪ್ರತಿಯೊಂದು ಮತಗಟ್ಟೆಯ ಮತದಾರರ ಪಟ್ಟಿಯನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದಾರೆ. ಹೆಸರು ಬಿಟ್ಟುಹೋಗಿರುವ ಅರ್ಹ ಮತದಾರರನ್ನು ಗುರುತಿಸಿ, ಅವರ ಹೆಸರು ಸೇರ್ಪಡೆಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ (ಬಿಎಲ್ಒ) ಸಮನ್ವಯ ಸಾಧಿಸಿ ವಿಶೇಷ ಅಭಿಯಾನ ನಡೆಸಬೇಕು ಎಂದು ಸೂಚಿಸಿದ್ದಾರೆ.
ಪಕ್ಷದ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳೂ ಈ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅಭಿಯಾನದ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಸಾರ್ವಜನಿಕರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಕೈಬಿಟ್ಟಿದ್ದರೆ ತಕ್ಷಣವೇ ಸೇರ್ಪಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
2017 ಮತ್ತು 2022ರ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ, 2027ರ ಚುನಾವಣೆಯಲ್ಲೂ ಅಧಿಕಾರ ಉಳಿಸಿಕೊಳ್ಳುವ ಗುರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ, ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಿಜೇಶ್ ಪಾಠಕ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು.
