ಪಶ್ಚಿಮ ಬಂಗಾಳ ಚುನಾವಣೆ: ಶಾಲೆಗಳಲ್ಲಿ ಭದ್ರತಾ ಪಡೆಗಳ ವಾಸ್ತವ್ಯ, ಶೈಕ್ಷಣಿಕ ಚಟುವಟಿಕೆಗಳು ಅಸ್ತವ್ಯಸ್ತ
x

ಪಶ್ಚಿಮ ಬಂಗಾಳ ಚುನಾವಣೆ: ಶಾಲೆಗಳಲ್ಲಿ ಭದ್ರತಾ ಪಡೆಗಳ ವಾಸ್ತವ್ಯ, ಶೈಕ್ಷಣಿಕ ಚಟುವಟಿಕೆಗಳು ಅಸ್ತವ್ಯಸ್ತ

ರಾಜಕೀಯವಾಗಿ ಸೂಕ್ಷ್ಮ ಪ್ರದೇಶವೆಂದೇ ಗುರುತಿಸಲಾಗುವ ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ವಿಧಾನಸಭಾ ಕ್ಷೇತ್ರದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.


Click the Play button to hear this message in audio format

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ಶಾಲಾ ಆವರಣಗಳಲ್ಲಿ ಬೀಡುಬಿಟ್ಟಿವೆ. ಇದರಿಂದಾಗಿ ವಿದ್ಯಾರ್ಥಿಗಳ ದೈನಂದಿನ ತರಗತಿಗಳಿಗೆ ತೀವ್ರ ಅಡ್ಡಿಯಾಗಿದ್ದು, ಹೈಬ್ರಿಡ್ (ಆನ್‌ಲೈನ್-ಆಫ್‌ಲೈನ್) ಕಲಿಕೆಗೆ ಮೊರೆಹೋಗುವ ಅನಿವಾರ್ಯತೆ ಎದುರಾಗಿದ್ದು, ವಾರ್ಷಿಕ ಪರೀಕ್ಷೆಗಳ ಹೊಸ್ತಿಲಲ್ಲೇ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದು ಶಿಕ್ಷಕರು ಹಾಗೂ ಪೋಷಕರಲ್ಲಿ ತೀವ್ರ ಕಳವಳ ಮೂಡಿಸಿದೆ.

ರಾಜಕೀಯವಾಗಿ ಸೂಕ್ಷ್ಮ ಪ್ರದೇಶವೆಂದೇ ಗುರುತಿಸಲಾಗುವ ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ವಿಧಾನಸಭಾ ಕ್ಷೇತ್ರದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಇಲ್ಲಿನ ರೆಫ್ಯೂಜಿ ಕಾಲೋನಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪೋಲೆರ್ಹಾಟ್ ಪ್ರೌಢಶಾಲೆಯನ್ನು ಭದ್ರತಾ ಪಡೆಗಳ ತಾತ್ಕಾಲಿಕ ಕ್ಯಾಂಪ್‌ಗಳಾಗಿ ಪರಿವರ್ತಿಸಲಾಗಿದೆ. "ಮಾರ್ಚ್ 2ರಿಂದಲೇ ಶಾಲೆಯಲ್ಲಿ ತರಗತಿಗಳನ್ನು ರದ್ದುಗೊಳಿಸಲಾಗಿದೆ" ಎಂದು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮಾನಸಿ ಕುಂಡು ಸ್ಪಷ್ಟಪಡಿಸಿದ್ದಾರೆ. ಪೋಲೆರ್ಹಾಟ್ ಶಾಲೆಯಲ್ಲಿರುವ ಒಟ್ಟು 4,600 ವಿದ್ಯಾರ್ಥಿಗಳ ಪಾಠ-ಪ್ರವಚನಗಳಿಗಾಗಿ ಆನ್‌ಲೈನ್-ಆಫ್‌ಲೈನ್ ಮೊರೆಹೋಗಲಾಗಿದೆ, ಕಾರಣ ಶಾಲೆಯ 11 ಕೊಠಡಿಗಳನ್ನು ಭದ್ರತಾ ಸಿಬ್ಬಂದಿಗೆ ಬಿಟ್ಟುಕೊಡಲಾಗಿದೆ.

ಎಲ್ಲ ಕಡೆಯೂ ಇದೇ ಸಮಸ್ಯೆ

ಮುರ್ಷಿದಾಬಾದ್ ಹಾಗೂ ಕೋಲ್ಕತ್ತಾದ ಹಲವು ಶಾಲೆಗಳಲ್ಲೂ ಇದೇ ದೃಶ್ಯ ಸಾಮಾನ್ಯವಾಗಿದೆ. ಮುರ್ಷಿದಾಬಾದ್‌ನ ಜಯಕೃಷ್ಣಪುರ ಎಬಿಎಸ್ ವಿದ್ಯಾಪೀಠ ಹಾಗೂ ಕೋಲ್ಕತ್ತಾದ ಸೇಂಟ್ ಪೀಟರ್ಸ್ ಶಾಲೆಯ ಕಟ್ಟಡಗಳನ್ನು ಕೇಂದ್ರ ಪಡೆಗಳ ವಸತಿಗಾಗಿ ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ಮುಗಿಯುವವರೆಗೆ (ಸುಮಾರು ಎರಡೂವರೆ ತಿಂಗಳು) ಪಡೆಗಳು ಇಲ್ಲಿಯೇ ಉಳಿಯುವ ಸಾಧ್ಯತೆ ಇದ್ದು, ಏಪ್ರಿಲ್‌ನಲ್ಲಿ ನಡೆಯಬೇಕಿದ್ದ 5ರಿಂದ 10ನೇ ತರಗತಿ ಪರೀಕ್ಷೆಗಳ ಭವಿಷ್ಯ ಅತಂತ್ರವಾಗಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಡಿಜಿಟಲ್ ಉಪಕರಣಗಳು ಮತ್ತು ಇಂಟರ್ನೆಟ್ ಸೌಲಭ್ಯವಿಲ್ಲದಿರುವುದು ಮತ್ತೊಂದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಶಿಕ್ಷಣ ತಜ್ಞೆ ಅರುಂಧತಿ ರಾಯ್‌ಚೌಧರಿ ಕಳವಳ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಶಾಲೆಗಳನ್ನು ಭದ್ರತಾ ಪಡೆಗಳ ವಸತಿಗೆ ಬಳಸದಂತೆ ನಿವೃತ್ತ ಶಿಕ್ಷಕರು, ಪೋಷಕರು ಮತ್ತು ಶಿಕ್ಷಣ ತಜ್ಞರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಶಾಲಾ ಕಟ್ಟಡಗಳ ಬದಲಾಗಿ ಬಳಕೆಯಾಗದ ಸರ್ಕಾರಿ ಆಡಿಟೋರಿಯಂ, ಮಾರುಕಟ್ಟೆ ಸಂಕೀರ್ಣ ಅಥವಾ ಬಯಲು ಪ್ರದೇಶಗಳಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸುವಂತೆ 'ಶಿಕ್ಷಣಾನುರಾಗಿ ಐಕ್ಯ ಮಂಚ' ಸಂಘಟನೆಯು ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದೆ. ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬ್ರತ್ಯ ಬಸು ಕೂಡ ಕೇಂದ್ರದ ಈ ನಡೆಯನ್ನು ಟೀಕಿಸಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಪ್ರಸ್ತುತ ಬಂಗಾಳದಲ್ಲಿ ಎರಡು ಹಂತಗಳಲ್ಲಿ 480 ಕಂಪನಿಗಳಷ್ಟು ಕೇಂದ್ರ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

Read More
Next Story