Bhabanipur defeat: Mamata Banerjee moves High Court!
x

ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ 

ಭವಾನಿಪುರ ಸೋಲು: ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ!

ಇತ್ತೀಚೆಗೆ ನಡೆದ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಅವರು 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಆಘಾತಕಾರಿ ಸೋಲು ಕಂಡಿದ್ದರು.


Click the Play button to hear this message in audio format

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಕಾನೂನು ಹೋರಾಟ ಆರಂಭವಾಗಿದೆ. ಭವಾನಿಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಜೂ. 16) ಕಲ್ಕತ್ತಾ ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ನಡೆದ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಅವರು 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಆಘಾತಕಾರಿ ಸೋಲು ಕಂಡಿದ್ದರು. ಸದ್ಯ ಈ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಮಮತಾ ಆರೋಪಿಸಿದ್ದು, ಫಲಿತಾಂಶದ ನ್ಯಾಯಾಂಗ ಪರಿಶೀಲನೆಗೆ ಕೋರಿ ಅಫಿಡವಿಟ್ ಸಲ್ಲಿಸಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ ಎಣಿಕೆ ದಿನದ ವಿವಾದ

2011 ರಿಂದ ಸತತ ಮೂರು ಬಾರಿ ಭವಾನಿಪುರ ಕ್ಷೇತ್ರವನ್ನು ಗೆದ್ದಿದ್ದ ಮಮತಾ ಬ್ಯಾನರ್ಜಿ ಅವರಿಗೆ ಈ ಸೋಲು ಭಾರಿ ಹಿನ್ನಡೆಯಾಗಿತ್ತು. ಮೇ 4ರ ಮತ ಎಣಿಕೆಯ ದಿನದಂದೇ ದಕ್ಷಿಣ ಕೋಲ್ಕತ್ತಾದ ಎಣಿಕೆ ಕೇಂದ್ರದಲ್ಲಿ ಪಾರದರ್ಶಕತೆ ಇರಲಿಲ್ಲ ಮತ್ತು ಚುನಾವಣಾ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಟಿಎಂಸಿ ಆರೋಪಿಸಿತ್ತು. ಎಣಿಕೆ ಕೇಂದ್ರದ ಗದ್ದಲದ ವೇಳೆ ತಮ್ಮನ್ನು ತಳ್ಳಲಾಗಿತ್ತು ಎಂದೂ ಮಮತಾ ದೂರಿದ್ದರು. ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ವೇಳೆ ಹಿರಿಯ ಟಿಎಂಸಿ ನಾಯಕರಾದ ಕುನಾಲ್ ಘೋಷ್, ಡೆರೆಕ್ ಒ'ಬ್ರೇನ್ ಮತ್ತು ಡೋಲಾ ಸೇನ್ ಅವರು ಮಮತಾ ಅವರಿಗೆ ಸಾಥ್ ನೀಡಿದರು.

ನಂದಿಗ್ರಾಮ್ ಇತಿಹಾಸ ಮರುಕಳಿಸಿತೇ?

ಈ ಹಿಂದಿನ 2021ರ ವಿಧಾನಸಭಾ ಚುನಾವಣೆಯಲ್ಲೂ ನಂದಿಗ್ರಾಮ್ ಕ್ಷೇತ್ರದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದ ಮಮತಾ ಬ್ಯಾನರ್ಜಿ, ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ, ಈಗ ಭವಾನಿಪುರ ಫಲಿತಾಂಶದ ವಿರುದ್ಧವೂ ಅವರು ಕಾನೂನು ಹೋರಾಟಕ್ಕೆ ಇಳಿದಿದ್ದಾರೆ.

ವಿರೋಧ ಪಕ್ಷದ ನಾಯಕಿ ಸ್ಥಾನಕ್ಕೂ ಸವಾಲು

ಇದೇ ವೇಳೆ, ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಋತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕಿಯಾಗಿ ಗುರುತಿಸಿರುವ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಟಿಎಂಸಿ ಶಾಸಕ ಸೋವಂದೇಬ್ ಚಟ್ಟೋಪಾಧ್ಯಾಯ ಸಲ್ಲಿಸಿರುವ ಮತ್ತೊಂದು ಪ್ರಮುಖ ಅರ್ಜಿಯ ವಿಚಾರಣೆಯೂ ಹೈಕೋರ್ಟ್‌ನಲ್ಲಿ ನಡೆಯಿತು. ಟಿಎಂಸಿ ಪರ ಹಿರಿಯ ವಕೀಲ ಹಾಗೂ ಸಂಸದ ಕಲ್ಯಾಣ್ ಬ್ಯಾನರ್ಜಿ ವಾದ ಮಂಡಿಸಿದ್ದು, ಸ್ಪೀಕರ್ ನಿರ್ಧಾರ ಸಾಂವಿಧಾನಿಕ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಂಗ ಹಸ್ತಕ್ಷೇಪಕ್ಕೆ ಕೋರಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ರಾವ್ ಅವರ ಪೀಠ ಕೈಗೆತ್ತಿಕೊಂಡಿದೆ.

Read More
Next Story