
UPSC Results 2025: ಫಲಿತಾಂಶ ಪ್ರಕಟ: ರಾಜಸ್ಥಾನದ ಅನುಜ್ ಅಗ್ನಿಹೋತ್ರಿಗೆ ಪ್ರಥಮ ಸ್ಥಾನ
ಯುಪಿಎಸ್‌ಸಿ ಸಿವಿಲ್ ಸರ್ವಿಸಸ್ 2025ರ ಪೂರ್ವಭಾವಿ ಪರೀಕ್ಷೆಯು ಕಳೆದ ವರ್ಷ ಮೇ 25ರಂದು ನಡೆದಿತ್ತು. ಇದಾದ ಬಳಿಕ ಆಗಸ್ಟ್ 22 ರಿಂದ ಆಗಸ್ಟ್ 31ರವರೆಗೆ ಮುಖ್ಯ ಪರೀಕ್ಷೆ ಆಯೋಜಿಸಲಾಗಿತ್ತು.
ದೇಶದ ಅತ್ಯುನ್ನತ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) 2025ನೇ ಸಾಲಿನ ಸಿವಿಲ್ ಸರ್ವಿಸಸ್ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ರಾಜಸ್ಥಾನದ ಕೋಟಾ ಮೂಲದ ಅನುಜ್ ಅಗ್ನಿಹೋತ್ರಿ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ದೇಶಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಒಟ್ಟು 1,087 ಹುದ್ದೆಗಳ ಭರ್ತಿಗಾಗಿ ನಡೆದ ಈ ಪ್ರಕ್ರಿಯೆಯಲ್ಲಿ 958 ಅಭ್ಯರ್ಥಿಗಳು ವಿವಿಧ ಸೇವೆಗಳಿಗೆ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದು, ಅತಿ ಹೆಚ್ಚು ಅಂಕ ಗಳಿಸಿದ ಟಾಪ್ 10 ಸಾಧಕರ ಪಟ್ಟಿಯಲ್ಲಿ ಮೂವರು ಮಹಿಳೆಯರು ಸ್ಥಾನ ಪಡೆದುಕೊಂಡಿದ್ದಾರೆ. ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ಗಳಾದ upsc.gov.in ಮತ್ತು upsconline.nic.in ಮೂಲಕ ಅಂತಿಮ ಮೆರಿಟ್ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ.
ಹುದ್ದೆಗಳ ವಿವರ
ಯುಪಿಎಸ್‌ಸಿ ಸಿವಿಲ್ ಸರ್ವಿಸಸ್ 2025ರ ಪೂರ್ವಭಾವಿ ಪರೀಕ್ಷೆಯು ಕಳೆದ ವರ್ಷ ಮೇ 25ರಂದು ನಡೆದಿತ್ತು. ಇದಾದ ಬಳಿಕ ಆಗಸ್ಟ್ 22 ರಿಂದ ಆಗಸ್ಟ್ 31ರವರೆಗೆ ಮುಖ್ಯ ಪರೀಕ್ಷೆ ಆಯೋಜಿಸಲಾಗಿತ್ತು. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ನಡೆಸಲಾದ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) 2026ರ ಫೆಬ್ರವರಿ 27ರಂದು ಮುಕ್ತಾಯಗೊಂಡ ಬೆನ್ನಲ್ಲೇ ಇದೀಗ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ. ಈ ಬಾರಿಯ ನೇಮಕಾತಿಯಲ್ಲಿ ಒಟ್ಟು 1,087 ಹುದ್ದೆಗಳಿದ್ದು, ಪ್ರತಿಷ್ಠಿತ ಐಎಎಸ್ ಹುದ್ದೆಗಳಿಗೆ 180, ಐಪಿಎಸ್‌ಗೆ 150 ಹಾಗೂ ಐಎಫ್‌ಎಸ್ ಸೇವೆಗೆ 55 ಸ್ಥಾನಗಳನ್ನು ಮೀಸಲಿಡಲಾಗಿದೆ. ಇದರ ಜೊತೆಗೆ ಕೇಂದ್ರ ಸೇವೆಗಳ ಗ್ರೂಪ್ 'ಎ' ವಿಭಾಗದಲ್ಲಿ 507 ಹಾಗೂ ಗ್ರೂಪ್ 'ಬಿ' ವಿಭಾಗದಲ್ಲಿ 195 ಹುದ್ದೆಗಳಿವೆ. ವಿಶೇಷ ಚೇತನ ಅಭ್ಯರ್ಥಿಗಳಿಗಾಗಿ 42 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಸದ್ಯ 348 ಅಭ್ಯರ್ಥಿಗಳ ಆಯ್ಕೆಯನ್ನು ತಾತ್ಕಾಲಿಕವಾಗಿ ಪರಿಗಣಿಸಲಾಗಿದ್ದು, ಇಬ್ಬರು ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಫಲಿತಾಂಶ ಪ್ರಕಟವಾದ 15 ದಿನಗಳೊಳಗೆ ಅಭ್ಯರ್ಥಿಗಳ ವೈಯಕ್ತಿಕ ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಐಎಎಸ್-ಐಪಿಎಸ್ ಕೇಡರ್ ಹಂಚಿಕೆ ನೀತಿಯಲ್ಲಿ ಮಹತ್ವದ ಬದಲಾವಣೆ
ಈ ವರ್ಷದಿಂದ ಯುಪಿಎಸ್‌ಸಿ ಆಯ್ಕೆಯಾದ ಅಭ್ಯರ್ಥಿಗಳ ಕೇಡರ್ ಹಂಚಿಕೆಯಲ್ಲಿ ಭಾರಿ ಬದಲಾವಣೆಯನ್ನು ತಂದಿದೆ. 2017ರಿಂದ ಜಾರಿಯಲ್ಲಿದ್ದ 'ವಲಯ ವ್ಯವಸ್ಥೆ'ಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ರದ್ದುಪಡಿಸಿದ್ದು, ಅದರ ಬದಲಾಗಿ ನೂತನ 'ಕೇಡರ್ ಹಂಚಿಕೆ ನೀತಿ 2026' ಅನ್ನು ಪರಿಚಯಿಸಿದೆ. ಇದರ ಅನ್ವಯ ಇನ್ಮುಂದೆ ಐಎಎಸ್, ಐಪಿಎಸ್ ಹಾಗೂ ಐಎಫ್‌ಒಎಸ್ ಅಧಿಕಾರಿಗಳ ಕೇಡರ್ ಹಂಚಿಕೆಯನ್ನು 'ಸೈಕಲ್ ವ್ಯವಸ್ಥೆ'ಯ ಮೂಲಕ ಮಾಡಲಾಗುತ್ತದೆ. ಹಳೆಯ ವ್ಯವಸ್ಥೆಯಲ್ಲಿ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತರ, ಪಶ್ಚಿಮ, ದಕ್ಷಿಣ, ಮಧ್ಯ ಮತ್ತು ಪೂರ್ವ ಎಂಬ ಐದು ಭೌಗೋಳಿಕ ವಲಯಗಳಾಗಿ ವಿಂಗಡಿಸಲಾಗಿತ್ತು. ಆದರೆ ಹೊಸ ನೀತಿಯು ಈ ಭೌಗೋಳಿಕ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಿದೆ.
ಭೌಗೋಳಿಕ ವಲಯ ರದ್ದು, ನೂತನ 4 ಗುಂಪುಗಳ ಸೃಷ್ಟಿ
ಹೊಸ ನೀತಿಯಡಿ ಒಟ್ಟು 25 ಕೇಡರ್‌ಗಳನ್ನು ಇಂಗ್ಲಿಷ್ ಅಕ್ಷರಮಾಲೆಯ (A ಯಿಂದ Z) ಆಧಾರದ ಮೇಲೆ ನಾಲ್ಕು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲನೇ ಗುಂಪಿನಲ್ಲಿ ಎಜಿಎಂಯುಟಿ, ಆಂಧ್ರಪ್ರದೇಶ, ಅಸ್ಸಾಂ-ಮೇಘಾಲಯ, ಬಿಹಾರ ಹಾಗೂ ಛತ್ತೀಸ್‌ಗಢ ರಾಜ್ಯಗಳಿವೆ. ಎರಡನೇ ಗುಂಪಿನಲ್ಲಿ ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ ಹಾಗೂ ಮಧ್ಯಪ್ರದೇಶ ಸೇರಿವೆ. ಮೂರನೇ ಗುಂಪಿನಲ್ಲಿ ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ ಮತ್ತು ತಮಿಳುನಾಡು ರಾಜ್ಯಗಳನ್ನು ಸೇರಿಸಲಾಗಿದ್ದು, ನಾಲ್ಕನೇ ಗುಂಪಿನಲ್ಲಿ ತೆಲಂಗಾಣ, ತ್ರಿಪುರ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸ್ಥಾನ ಪಡೆದಿವೆ.
ಹಳೆಯ ವ್ಯವಸ್ಥೆಯಲ್ಲಿ ಅಭ್ಯರ್ಥಿಯೊಬ್ಬರು ಉತ್ತರ ವಲಯದಲ್ಲಿ ಹರಿಯಾಣವನ್ನು ಮೊದಲ ಆಯ್ಕೆಯಾಗಿ ನೀಡಿದ್ದರೆ, ಒಂದು ವೇಳೆ ಆ ರಾಜ್ಯ ಸಿಗದಿದ್ದಾಗ ಪಕ್ಕದ ರಾಜಸ್ಥಾನ ಅಥವಾ ಉತ್ತರ ಪ್ರದೇಶ ದೊರೆಯುವ ಅವಕಾಶವಿತ್ತು. ಆದರೆ ನೂತನ ಅಕ್ಷರಮಾಲೆ ಆಧಾರಿತ ಸೈಕಲ್ ವ್ಯವಸ್ಥೆಯಲ್ಲಿ, ಹರಿಯಾಣದ ಜೊತೆಗೆ ಅದೇ ಎರಡನೇ ಗುಂಪಿನಲ್ಲಿರುವ ಜಾರ್ಖಂಡ್, ಕರ್ನಾಟಕ ಅಥವಾ ಕೇರಳ ರಾಜ್ಯಗಳ ಕೇಡರ್ ಹಂಚಿಕೆಯಾಗುವ ಸಾಧ್ಯತೆಗಳಿರುತ್ತವೆ. ಇನ್ನು, ಕಳೆದ ವರ್ಷದ ಅಂತಿಮ ಕಟ್-ಆಫ್ ಅಂಕಗಳನ್ನು ಗಮನಿಸುವುದಾದರೆ, ಸಾಮಾನ್ಯ ವರ್ಗಕ್ಕೆ 87.98, ಇಡಬ್ಲ್ಯೂಎಸ್ 85.92, ಒಬಿಸಿ 87.28, ಎಸ್‌ಸಿ 79.03 ಹಾಗೂ ಎಸ್‌ಟಿ ಅಭ್ಯರ್ಥಿಗಳಿಗೆ 74.23 ಅಂಕಗಳನ್ನು ನಿಗದಿಪಡಿಸಲಾಗಿತ್ತು.

