
ಆರೋಪಿ ಹಾರ್ದಿಕ್ ಮತ್ತು ಮೃತ ಸಹೋದರಿ ಹಿಮಾಶಿಖಾ
ಅವಳಿ ಸಹೋದರಿಯನ್ನೇ 84 ಬಾರಿ ಇರಿದು ಕೊಂದ ಎಂಜಿನಿಯರ್: ತಾಯಿಗೆ 'ಸರ್ಪ್ರೈಸ್' ಎಂದು ಹೇಳಿದ ಪಾಪಿ
ಆರೋಪಿಯನ್ನು ಹಾರ್ದಿಕ್ ಮತ್ತು ಮೃತ ಸಹೋದರಿಯನ್ನು ಹಿಮಾಶಿಖಾ ಎಂದು ಗುರುತಿಸಲಾಗಿದೆ. ಇಬ್ಬರೂ 25 ವರ್ಷದ ಅವಳಿಗಳಾಗಿದ್ದು, ಎಂಜಿನಿಯರ್‌ಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಭೀಕರ ಹಾಗೂ ಅಮಾನವೀಯ ಘಟನೆಯೊಂದು ನಡೆದಿದೆ. 25 ವರ್ಷದ ಯುವಕನೊಬ್ಬ ತನ್ನದೇ ಅವಳಿ ಸಹೋದರಿಯನ್ನು 84 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಆತ, ತನ್ನ ತಾಯಿಯ ಬಳಿ ಹೋಗಿ 'ನಿಮಗೊಂದು ಸರ್ಪ್ರೈಸ್ ಕಾದಿದೆ' ಎಂದು ಹೇಳಿರುವುದು ಆತನ ಕ್ರೌರ್ಯದ ಪರಮಾವಧಿಯನ್ನು ತೋರಿಸುತ್ತದೆ.
ಆರೋಪಿಯನ್ನು ಹಾರ್ದಿಕ್ ಮತ್ತು ಮೃತ ಸಹೋದರಿಯನ್ನು ಹಿಮಾಶಿಖಾ ಎಂದು ಗುರುತಿಸಲಾಗಿದೆ. ಇಬ್ಬರೂ 25 ವರ್ಷದ ಅವಳಿಗಳಾಗಿದ್ದು, ಎಂಜಿನಿಯರ್‌ಗಳಾಗಿದ್ದರು. ಈ ಹಿಂದೆ ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಹಾರ್ದಿಕ್, ಒಂದೂವರೆ ವರ್ಷದ ಹಿಂದೆ ಕೆಲಸ ಬಿಟ್ಟು ಸದಾ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುತ್ತಿದ್ದ. ಹಿಮಾಶಿಖಾ ಇಂಜಿನಿಯರಿಂಗ್ ಜೊತೆಗೆ ಎಂಬಿಎ ) ವ್ಯಾಸಂಗವನ್ನೂ ಮಾಡುತ್ತಿದ್ದಳು.
ತನಿಖಾ ವರದಿಗಳ ಪ್ರಕಾರ, ಹಾರ್ದಿಕ್ ಸಾಮಾಜಿಕ ಜಾಲತಾಣದ ಮೂಲಕ ಪುಣೆ ಮೂಲದ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ತಾಯಿ ನೀಲಿಮಾ ಮತ್ತು ಸಹೋದರಿ ಹಿಮಾಶಿಖಾ, 'ಮೊದಲು ನಿನ್ನ ವೃತ್ತಿಜೀವನದತ್ತ ಗಮನಹರಿಸು' ಎಂದು ಬುದ್ಧಿವಾದ ಹೇಳುತ್ತಿದ್ದರು. ಮಾರ್ಚ್ 6ರ ಸಂಜೆ ಇದೇ ವಿಚಾರವಾಗಿ ಅಣ್ಣ-ತಂಗಿಯ ನಡುವೆ ದೊಡ್ಡ ಜಗಳವೇ ನಡೆದಿದೆ. ಕೋಪದ ಭರದಲ್ಲಿ ತರಕಾರಿ ಹೆಚ್ಚುವ ಚಾಕುವಿನಿಂದ ಸಹೋದರಿ ಹಿಮಾಶಿಖಾ ಮೇಲೆ ದಾಳಿ ಮಾಡಿದ ಹಾರ್ದಿಕ್, ಆಕೆಯನ್ನು ಕೊಲೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ದೇಹದ ಮೇಲೆ 84 ಬಾರಿ ಇರಿದ ಗಾಯಗಳಿರುವುದು ಪತ್ತೆಯಾಗಿದೆ.
ತಾಯಿಗೂ ಚಾಕು ಇರಿತ
ಸಹೋದರಿಯನ್ನು ಕೊಂದ ಬಳಿಕ ಹಾರ್ದಿಕ್, ವಿಮಾ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ತನ್ನ ತಾಯಿ ನೀಲಿಮಾ ಅವರ ಕಚೇರಿಗೆ ತೆರಳಿದ್ದಾನೆ. 'ನಿಮಗೊಂದು ಸರ್ಪ್ರೈಸ್ ಇದೆ, ಮನೆಗೆ ಬನ್ನಿ' ಎಂದು ಹೇಳಿ ಕರೆದುಕೊಂಡು ಬಂದಿದ್ದಾನೆ. ಮನೆಗೆ ಬಂದ ತಕ್ಷಣ ಆತ ತಾಯಿಯ ಮೇಲೂ ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ 24 ಗಂಟೆಗಳ ಒಳಗೆ ಪೊಲೀಸರು ಆರೋಪಿ ಹಾರ್ದಿಕ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ, 'ನನ್ನ ವೃತ್ತಿಜೀವನದ ಬಗ್ಗೆ ಪದೇ ಪದೇ ಹೇಳುತ್ತಿದ್ದುದರಿಂದ ಮತ್ತು ಪ್ರೀತಿಯಿಂದ ದೂರವಿರಲು ಒತ್ತಾಯಿಸುತ್ತಿದ್ದರಿಂದ ನನಗೆ ಅವರ ಮೇಲೆ ತೀವ್ರ ಕೋಪ ಬಂದಿತ್ತು' ಎಂದು ತಪ್ಪೊಪ್ಪಿಕೊಂಡಿದ್ದಾನೆ.

