Union Budget 2026: ರಫ್ತು ಪ್ರಗತಿಗೆ ಕಂಟಕವಾದ ವ್ಯಾಪಾರ ಸಂರಕ್ಷಣಾ ನೀತಿ- ಹಾನಿ ತಗ್ಗಿಸಲು ಹರಸಾಹಸ
ರಫ್ತು ವಲಯವು ಜಿಡಿಪಿ ಬೆಳವಣಿಗೆಗಿಂತ ಹಿಂದಿದೆ. ವ್ಯಾಪಾರ ನೀತಿಯಲ್ಲಿನ ಮರುಹೊಂದಾಣಿಕೆ ಮತ್ತು ಜಾಗತಿಕ ಮೌಲ್ಯದ ಸರಪಣಿಗೆ ಭಾರತದ ಮರುಸೇರ್ಪಡೆ-ಇದು ವಿತ್ತ ಸಚಿವರ ಮೇಲಿರುವ ಗುರುತರ ಜವಾಬ್ದಾರಿ.

ಫೆಬ್ರುವರಿ ಒಂದರಂದು ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಬರುವ ವರ್ಷದ ತಮ್ಮ ದೃಷ್ಟಿಕೋನವನ್ನು ಮಂಡಿಸಲಿದ್ದಾರೆ. ನಾನಾ ಕ್ಷೇತ್ರಗಳಲ್ಲಿನ ಆರ್ಥಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದ ಕಾರ್ಯತಂತ್ರಗಳು ಹಾಗೂ ಅನುದಾನ ಹಂಚಿಕೆಗಳನ್ನು ಅವರು ಈ ಸಂದರ್ಭದಲ್ಲಿ ಅನಾವರಣ ಮಾಡಲಿದ್ದಾರೆ.
ಭಾರತದ ಅರ್ಥ ವ್ಯವಸ್ಥೆಯಲ್ಲಿ ಬಳಕೆ (ಖಾಸಗಿ ಅಂತಿಮ ಬಳಕೆ ವೆಚ್ಚ ಅಥವಾ PFCF) ಮತ್ತು ಬಂಡವಾಳ ವೆಚ್ಚದ (ಒಟ್ಟು ಸ್ಥಿರ ಬಂಡವಾಳ ರಚನೆ ಅಥವಾ GFCF) ಬಳಿಕ ಬೆಳವಣಿಗೆಗೆ ಮೂರನೇ ಚಾಲಕ ಶಕ್ತಿಯಾಗಿರುವ ಕ್ಷೇತ್ರವೆಂದರೆ ರಫ್ತು. ಹಣಕಾಸು ವರ್ಷ ೨೦೧೨ರಿಂದ ೨೦೨೬ರ ವರೆಗೆ ಇದು ಜಿಡಿಪಿಯ ಸರಾಸರಿ ಶೇ.219ರಷ್ಟಿತ್ತು. ಆದರೆ ಹಣಕಾಸು ವರ್ಷ 2013ರಿಂದ2026ರ ವರೆಗಿನ ಅವಧಿಯಲ್ಲಿ ಇದರ ನೈಜ ಬೆಳವಣಿಗೆಯು ಸರಾಸರಿ ಶೇ.5.5ತ್ತು. ಇದು ಇದೇ ಅವಧಿಯ ಶೇ.6.2ರಷ್ಟಿದ್ದ ನೈಜ ಜಿಡಿಪಿ ಬೆಳವಣಿಗೆಗಿಂತ ಕಡಿಮೆ.
ಇದರರ್ಥ ಸದ್ಯ ಭಾರತಕ್ಕೆ ರಫ್ತು ಕ್ಷೇತ್ರದ ಬೆಳವಣಿಗೆಯ ಮೇಲೆ ಇದು ಹೊರೆಯಾಗಿ ಪರಿಣಮಿಸಿದೆ. ಹಣಕಾಸು ವರ್ಷ ೨೦೧೩ರಿಂದ ರಫ್ತು ಮತ್ತು ಜಿಡಿಪಿ ಬೆಳವಣಿಗೆಯ ಅಂಕಿ-ಅಂಶಗಳನ್ನು ಈ ಕೆಳಗಿನ ಗ್ರಾಫ್ ಮೂಲಕ ವಿವರಿಸಲಾಗಿದೆ.
ಜಿಡಿಪಿ ಮತ್ತು ರಫ್ತಿನಲ್ಲಿ ಬೆಳವಣಿಗೆ (ಸ್ಥಿರ ಬೆಲೆಗಳಲ್ಲಿ)-ಗ್ರಾಫ್
1991 ವ್ಯಾಪಾರದ ಉದಾರೀಕರಣದ ಬಳಿಕ ಹಣಕಾಸು ವರ್ಷ 2014ರ ವರೆಗೆ ಪರಿಸ್ಥಿತಿ ಹೀಗಿರಲಿಲ್ಲ.
2014ರ ನಂತರ ಭಾರತವು ʼವ್ಯಾಪಾರ ಸಂರಕ್ಷಣಾ ನೀತಿʼಯತ್ತ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಮೊದಲು ಎಚ್ಚರಿಕೆ ನೀಡಿದವರು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಮತ್ತು ಆರ್ಥಿಕ ತಜ್ಞ ಶೌಮಿತ್ರ ಚಟರ್ಜಿ. ಇಂತಹುದೊಂದು ಬದಲಾವಣೆ ಆರ್ಥಿಕ ತರ್ಕ ಮತ್ತು ಪ್ರಾಯೋಗಿಕ ಪುರಾವೆಗಳೆರಡನ್ನೂ ಮೀರಿಸಿದೆ ಎಂಬುದು ಅವರ ವಾದವಾಗಿತ್ತು.
1992ರಲ್ಲಿ ಪ್ರಕಟವಾದ ನೀತಿ ಪತ್ರದಲ್ಲಿ ಅವರು ಹೀಗೆ ವಿಶ್ಲೇಷಿಸಿದ್ದರು: “1992 ಮತ್ತು 2019ರ ನಡುವಿನ ಅವಧಿಯಲ್ಲಿ ಸರಕು ಮತ್ತು ಸೇವೆಗಳ ನೈಜ ರಫ್ತು ಬೆಳವಣಿಗೆಯ ಸರಾಸರಿ ಸರಿಸುಮಾರು ಶೇ.11ರಷ್ಟಿತ್ತು ಇದು 1952 ಮತ್ತು 1991ರ ನಡುವೆ ದಾಖಲಾದ ಶೇ.4.5ರ ದರಕ್ಕಿಂತ ಎರಡರಷ್ಟು ಹೆಚ್ಚಾಗಿದೆ. ಈ ಎರಡೂ ಅವಧಿಗಳಲ್ಲಿ ಒಟ್ಟಾರೆ ಜಿಡಿಪಿ ಬೆಳವಣಿಗೆ ದರಗಳು ಕ್ರಮವಾಗಿ ಶೇ.6.5 ಮತ್ತು ಶೇ.3.5ರಷ್ಟಿದ್ದವು.”
ಈ ಸ್ಥಿತಿಗೆ ಭಾರತ ತಲುಪಿದ್ದಾದರೂ ಹೇಗೆ?
ವ್ಯಾಪಾರ ಸಂರಕ್ಷಣಾ ನೀತಿಯ ಕಡೆಗಿನ ಹಿಮ್ಮುಖ ಚಲನೆ ಏಕಾಏಕಿ ಸಂಭವಿಸಿದ ಸಂಗತಿಯಲ್ಲ. ಇದು ಕಳೆದ ಅನೇಕ ವರ್ಷಗಳ ಅವಧಿಯಲ್ಲಿ ನಾನಾ ಹಂತಗಳಲ್ಲಿ ಸಂಭವಿಸಿದೆ. ಅದರ ಕೆಲವು ಪ್ರಮುಖ ಮೈಲುಗಲ್ಲುಗಳನ್ನು ನಾವು ಇಲ್ಲಿ ಗುರುತಿಸಬಹುದಾಗಿದೆ:
೨೦೧೪ರಿಂದ ಹಂತಹಂತವಾಗಿ ಭಾರತವು ವಿಫಲ ಸಂರಕ್ಷಣಾ ನೀತಿಯತ್ತ ಮರಳಿತು. ಮುಖ್ಯವಾಗಿ ವಿದೇಶಿ ಪೈಪೋಟಿಯಿಂದ ದೇಶೀಯ ಉದ್ಯಮಗಳನ್ನು ರಕ್ಷಣೆ ಮಾಡುವುದು ಇದರ ಉದ್ದೇಶವಾಗಿತ್ತು. ಸರ್ಕಾರವು ಸದ್ದಿಲ್ಲದೆ ಸುಂಕದ ಗೋಡೆಗಳನ್ನು ಎತ್ತರಕ್ಕೆ ಏರಿಸಿತು ಮತ್ತು ಅದಕ್ಕೆ “ಆತ್ಮ ನಿರ್ಭರ ಭಾರತದತ್ತ ಹೆಜ್ಜೆ” ಎಂದು ಕರೆಯಲಾಯಿತು. ಇದಾದ ಬಳಿಕ ಚೀನಾ, ದಕ್ಷಿಣ ಕೋರಿಯಾ ಮತ್ತು ವಿಯೆಟ್ನಾಂ ದೇಶಗಳನ್ನು ಗುರಿಯಾಗಿಟ್ಟುಕೊಂಡು ʼಡಂಪಿಂಗ್ ವಿರೋಧಿʼ ಸುಂಕಗಳನ್ನು ವಿಧಿಸಲಾಯಿತು.
2023ರಲ್ಲಿ ಚೀನಾದಿಂದ ಬರುವ ಆಮದುಗಳಿಗೆ (345 ಉತ್ಪನ್ನಗಳು) ಕಡಿವಾಣ ಹಾಕುವ ಉದ್ದೇಶದಿಂದ ಗುಣಮಟ್ಟ ನಿಯಂತ್ರಣ ಆದೇಶಗಳನ್ನು ಹೊರಡಿಸಲಾಯಿತು. ದೇಶದಲ್ಲಿರುವ ಕಳಪೆ ಗುಣಮಟ್ಟದ ಪರಿಸರ ವ್ಯವಸ್ಥೆ ಮತ್ತು ಸಾಮರ್ಥ್ಯಗಳ ಬಗ್ಗೆ ಅರಿವಿದ್ದರೂ ಕೂಡ ಅಂತಹ ೮೪ ಆದೇಶಗಳನ್ನು ಜಾರಿಗೆ ತರಲಾಯಿತು. ಈ ಆದೇಶಗಳು ವ್ಯಾಪಾರಕ್ಕೆ ಹಾನಿ ಮಾಡುತ್ತಿವೆ, ಇವುಗಳನ್ನು ರದ್ದುಪಡಿಸಬೇಕು ಎಂದು 2025ರ ಮಾರ್ಚ್ ತಿಂಗಳಲ್ಲಿ ಮತ್ತೊಮ್ಮೆ ಒತ್ತಾಯ ಮಾಡಿದ ಮೊದಲಿಗರೆಂದರೆ ಸುಬ್ರಹ್ಮಣಿಯನ್ ಮತ್ತು ಚಟರ್ಜಿ.
ಬಂದ್ ಆಯಿತು ರಫ್ತು ಎಂಜಿನ್
ಅದಾದ ಕೆಲವೇ ದಿನಗಳಲ್ಲಿ ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರು ಕೂಡ ಇದೇ ವಿಷಯವನ್ನು ಪ್ರಸ್ತಾಪ ಮಾಡಿದರು. ಇಂತಹ ನಿರ್ಬಂಧಗಳನ್ನು ವಿಧಿಸುವುದರಿಂದ ಅಗ್ಗದ ಮತ್ತು ಅತ್ಯಂತ ನಿರ್ಣಾಯಕವಾದ ಕಚ್ಛಾ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಿದಂತೆ ಆಗುತ್ತದೆ. ಇದರಿಂದ ಜವಳಿ ಉತ್ಪನ್ನಗಳ ರಫ್ತಿಗೆ ಹಾನಿಯುಂಟಾಗುತ್ತದೆ ಎಂದು ಅವರು ತಿಳಿಸಿದರು.
ಈ ರೀತಿಯ ಬದಲಾವಣೆಗಳನ್ನು ಮಾಡಿದ್ದರಿಂದ ರಫ್ತು ಎಂಜಿನ್ ಬಂದ್ ಆಯಿತು. ಯಾಕೆಂದರೆ ಕಚ್ಛಾ ವಸ್ತುಗಳು, ಮಧ್ಯವರ್ತಿ ಸರಕುಗಳು ಮತ್ತು ಬಿಡಿಭಾಗಗಳ ಆಮದನ್ನೇ ನಿರ್ಬಂಧಿಸುವುದರಿಂದ ರಫ್ತು ಮಾಡುವ ಉತ್ಪನ್ನಗಳ ಗುಣಮಟ್ಟದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ ಎಂಬುದು ಸಾಬೀತಾಯಿತು.
ಇಂತಹ ನಿರ್ಬಂಧಗಳ ಕಾರಣದಿಂದಲೇ ಕಳೆದ ವರ್ಷ ಶೇ.25ರಷ್ಟು ʼರೆಸಿಪ್ರೋಕಲ್ ಸುಂಕʼ (ಪರಸ್ಪರ ಸುಂಕ)ವನ್ನು ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಚೋದನೆ ನೀಡಿತು. ಇದರಿಂದಾಗಿ ಭಾರತ ಹಂತಹಂತವಾಗಿ ಆ ನಿರ್ಬಂಧಗಳನ್ನು ತೆರವು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸಿತು.
2025ರ ಬಜೆಟ್ ನಿಂದ ಆರಂಭಿಸಿ ಭಾರತವು ಸುಂಕಗಳನ್ನು ಕಡಿತಗೊಳಿಸುತ್ತ ಹೋಯಿತು. ಮೊದಲು ಅಮೆರಿಕಕ್ಕೆ, ಆ ಬಳಿಕ ಮುಕ್ತ ವ್ಯಾಪಾರ ಒಪ್ಪಂದದ ಸಂದರ್ಭದಲ್ಲಿ ಬ್ರಿಟನ್-ಗೆ ಮತ್ತು ಈಗ ಇತರ ದೇಶಗಳಿಗೂ ಸುಂಕಗಳನ್ನು ಕಡಿಮೆ ಮಾಡಲು ಮುಂದಾಗುತ್ತಿದೆ.
2017ರಲ್ಲಿ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದ (FTA)ಗಳಿಗೆ ಸಂಬಂಧಿಸಿದ 68 ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳನ್ನು ಭಾರತ ಏಕಪಕ್ಷೀಯವಾಗಿ ರದ್ದುಗೊಳಿಸಿತು. ಆ ಬಳಿಕ ಹೆಚ್ಚುತ್ತಿರುವ ವ್ಯಾಪಾರ ಕೊರತೆಗೆ ನಿಯಂತ್ರಣ ಹೇರಲು ಅದು ತನ್ನೆಲ್ಲ ದ್ವಿಪಕ್ಷೀಯ ಎಫ್.ಟಿ.ಎಗಳ ವಿಚಾರದಲ್ಲಿ ಮರುಸಂಧಾನ ಮಾಡಲು ಶುರುಹಚ್ಚಿಕೊಂಡಿತು. ಇಂತಹ ಕ್ರಮವನ್ನು ೨೦೧೮ರ ನೀತಿ ಆಯೋಗದ ವರದಿ ಮತ್ತು 2021-22ರ ಆರ್ಥಿಕ ಸಮೀಕ್ಷೆ ಕೂಡ ಅನುಮೋದಿಸಿದವು. ಇಂತಹ ಸಂರಕ್ಷಣಾತ್ಮಕ ಪ್ರವೃತ್ತಿಯು ಭಾರತವನ್ನು ಬಹುಪಕ್ಷೀಯ ಎಫ್.ಟಿ.ಎ.ಗಳಿಂದ ದೂರವಿರುವಂತೆ ಮಾಡಿತು.
ಬಹುಪಕ್ಷೀಯ FTAಗಳಿಗೆ ತಿಲಾಂಜಲಿ
2018ರಲ್ಲಿ 'ಟ್ರಾನ್ಸ್-ಪೆಸಿಫಿಕ್ ಪಾಲುದಾರಿಕೆಗಾಗಿ ಸಮಗ್ರ ಮತ್ತು ಪ್ರಗತಿಪರ ಒಪ್ಪಂದ'ದಿಂದ (CPTPP) ಭಾರತವು ಹೊರಗುಳಿಯಿತು, 2019ರಲ್ಲಿ 'ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ'ಯಿಂದ (RCEP) ಹಿಂದೆ ಸರಿಯಿತು ಮತ್ತು 2022 ರಲ್ಲಿ 'ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟಿನ' (IPEF) ವ್ಯಾಪಾರ ವೇದಿಕೆಯಿಂದ ದೂರ ಉಳಿಯಿತು. ಈ ಒಕ್ಕೂಟಗಳು ಜಾಗತಿಕ ಜಿಡಿಪಿ ಮತ್ತು ವ್ಯಾಪಾರದ ಬಹುಭಾಗವನ್ನು ಪ್ರತಿನಿಧಿಸುತ್ತವೆ. ಬಹುಪಕ್ಷೀಯ FTAಗಳು ಏಕಕಾಲದಲ್ಲಿ ಹಲವಾರು ಮಾರುಕಟ್ಟೆಗಳೊಂದಿಗೆ ನಾನಾ ವಸ್ತುಗಳಿಗೆ ಸುಂಕ ಮತ್ತು ಆಡಳಿತದ ಒಂದೇ ಮಾದರಿಯನ್ನು ನೀಡುವ ಅತ್ಯುನ್ನತ ಸಾಧನಗಳಾಗಿವೆ ಎಂಬುದನ್ನು ಅರಿಯದೆ, ಭಾರತವು ಬಹುಪಕ್ಷೀಯ ಒಪ್ಪಂದಗಳಿಗಿಂತ ದ್ವಿಪಕ್ಷೀಯ ಒಪ್ಪಂದಗಳನ್ನೇ ಆರಿಸಿಕೊಂಡಿತು. ಇದಲ್ಲದೆ, ಬಹುಪಕ್ಷೀಯ FTAಗಳನ್ನು ಬಿಟ್ಟುಕೊಡುವುದು ಎಂದರೆ 'ಜಾಗತಿಕ ಮೌಲ್ಯ ಸರಪಳಿ'ಗಳಿಂದ (GVCs) ವಂಚಿತವಾಗುವುದು ಎಂದರ್ಥ.
2018ರ ನಂತರ ಜಾಗತಿಕ ಬಹುರಾಷ್ಟ್ರೀಯ ಕಂಪನಿಗಳು (MNCs) ಅಳವಡಿಸಿಕೊಂಡ 'ಚೀನಾ + 1' ತಂತ್ರದಿಂದ ಭಾರತಕ್ಕೆ ಹೆಚ್ಚಿನ ಲಾಭವೇನೂ ಆಗಲಿಲ್ಲ. ಹೆಚ್ಚಿನ ಕಂಪನಿಗಳು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆಯನ್ನು ಹೊಂದಿದ ದೇಶಗಳಿಗೆ ಸ್ಥಳಾಂತರಗೊಂಡವು ('ಫ್ರೆಂಡ್-ಶೋರಿಂಗ್') ಅಥವಾ ಮರಳಿ ಅಮೆರಿಕ ಮತ್ತು ಅದರ ನೆರೆಯ ದೇಶಗಳಿಗೆ ತೆರಳಿದವು ('ನಿಯರ್-ಶೋರಿಂಗ್'). ಚೀನಾ ಕೂಡ ಅಮೆರಿಕದ ಮಾರುಕಟ್ಟೆಯನ್ನು ತಲುಪಲು ಮೆಕ್ಸಿಕೋ ಮತ್ತು ಇತರ ಲ್ಯಾಟಿನ್ ಅಮೆರಿಕನ್ ದೇಶಗಳಲ್ಲಿ ಹಾಗೂ ಯುರೋಪಿಯನ್ ಮಾರುಕಟ್ಟೆಯನ್ನು ತಲುಪಲು ನೈಜೀರಿಯಾ ಮತ್ತು ಮೊರಾಕ್ಕೊಗಳಲ್ಲಿ ತನ್ನ ಘಟಕಗಳನ್ನು ಸ್ಥಾಪಿಸುತ್ತಿದೆ.
ಭಾರತವು ಇಂತಹ ಬೆಳವಣಿಗೆಗಳ ಕಡೆಗೆ ಗಮನ ಹರಿಸುವಲ್ಲಿ ವಿಫಲವಾಗಿದೆ ಮತ್ತು ಹೆಚ್ಚಿನ MNCಗಳು RCEP ದೇಶಗಳಿಗೆ ವಲಸೆ ಹೋಗಿವೆ ಎಂಬ ವಿಷಯ ನಮಗೆ "ಮಾಧ್ಯಮ ವರದಿಗಳ ಮೂಲಕ ತಿಳಿಯಿತು" ಎಂದು 2021ರ ಸಂಸದೀಯ ಸಮಿತಿಯ ವರದಿಯಲ್ಲಿ ವಿಷಾದ ವ್ಯಕ್ತಪಡಿಸಲಾಗಿತ್ತು.
ಭಾರತವು ಸಬ್ಸಿಡಿಗಳ (PLI ಮತ್ತು DLI ಯೋಜನೆಗಳು) ಮೂಲಕ ಸ್ಮಾರ್ಟ್ಫೋನ್ ಮತ್ತು ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲು ಅನೇಕ MNCಗಳನ್ನು ಒಪ್ಪಿಸಿದೆ. ಆದರೆ ಇವು ಹೆಚ್ಚಾಗಿ ಕಡಿಮೆ ಮೌಲ್ಯವರ್ಧನೆ ಹೊಂದಿರುವ ಬಿಡಿ ಭಾಗಗಳನ್ನು ಕೇವಲ ಜೋಡಣೆ ಮಾಡುವ ಘಟಕಗಳಾಗಿವೆ.
ಐಫೋನ್, ಸೋಲಾರ್ ಪ್ಯಾನಲ್, ವಜ್ರಗಳು ಮತ್ತು ಪೆಟ್ರೋಕೆಮಿಕಲ್ಗಳ ಮೇಲಿನ ಮೌಲ್ಯವರ್ಧನೆ ಎಷ್ಟೊಂದು ಕಡಿಮೆಯಿದೆ ಎಂದರೆ, "PLI ಪ್ರೋತ್ಸಾಹಕಗಳು ಮತ್ತು ಇತರ ರಿಯಾಯಿತಿಗಳನ್ನು ಲೆಕ್ಕಹಾಕಿದ ನಂತರ, ನೈಜ ಗಳಿಕೆಯು ಶೂನ್ಯಕ್ಕೆ ಸನಿಹದಲ್ಲಿದೆ. ಅಂದರೆ, ಸ್ಮಾರ್ಟ್ಫೋನ್ಗಳ ಹೆಚ್ಚಿನ ರಫ್ತು ಮೌಲ್ಯವು ನಿವ್ವಳ ಲಾಭಕ್ಕೆ ಹೆಚ್ಚು ಕೊಡುಗೆ ನೀಡುತ್ತಿಲ್ಲ" ಎಂದು 2025ರ ಜಾಗತಿಕ ವ್ಯಾಪರ ಸಂಶೋಧನಾ ಉಪಕ್ರಮ (GTRI) ವರದಿಯು ಹೇಳಿದೆ.
ಮುಂದಿನ ಹಾದಿ ಎತ್ತ?
ಮೇಲಿನ ವಿಶ್ಲೇಷಣೆಯು ಭಾರತವು ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸುತ್ತದೆ: ಭಾರತವು ಸಂರಕ್ಷಣಾ ನೀತಿಯನ್ನು ಸಂಪೂರ್ಣವಾಗಿ ಕೈಬಿಡಬೇಕು, ಬಹುಪಕ್ಷೀಯ FTAಗಳು ಮತ್ತು ಜಾಗತಿಕ ಮೌಲ್ಯ ಸರಪಳಿಗಳನ್ನು (GVCs) ಸೇರಬೇಕು, ಸಬ್ಸಿಡಿಗಳ ಬದಲಿಗೆ ಸಂಶೋಧನೆ ಮತ್ತು ಅಭಿವೃದ್ಧಿ (R&D) ಆಧಾರಿತ ಉತ್ಪಾದನೆಗೆ ಉತ್ತೇಜನ ನೀಡಬೇಕು ಮತ್ತು ಸಾಕ್ಷ್ಯಾಧಾರಿತ ನೀತಿಗಳನ್ನು ಅಳವಡಿಸಿಕೊಳ್ಳಬೇಕು.
ಸೇವಾ ರಫ್ತಿನ ಪ್ರಾಮುಖ್ಯತೆ ಮತ್ತು ವ್ಯಾಪಾರ ಕೊರತೆ
ಇಲ್ಲಿ ಕೆಳಗೆ ನೀಡಲಾಗಿರುವ ಗ್ರಾಫ್ ತೋರಿಸುವಂತೆ, ಸರಕುಗಳ ರಫ್ತು ಬೃಹತ್ ವ್ಯಾಪಾರ ಕೊರತೆಯನ್ನು ಉಂಟುಮಾಡಿದರೂ, ಸೇವಾ ವಲಯದ ರಫ್ತುಗಳು ಸೃಷ್ಟಿಸುವ ಲಾಭದಿಂದಾಗಿ ಭಾರತದ ಒಟ್ಟಾರೆ ವ್ಯಾಪಾರ ಕೊರತೆಯು ತುಲನಾತ್ಮಕವಾಗಿ ನಿಯಂತ್ರಣದಲ್ಲಿದೆ. ಉದಾಹರಣೆಗೆ, ಏಪ್ರಿಲ್-ಡಿಸೆಂಬರ್ 2025ರ ಅವಧಿಯಲ್ಲಿ, ಸರಕು ವ್ಯಾಪಾರದಿಂದ ಉಂಟಾದ ಕೊರತೆಯು (-)248 ಶತಕೋಟಿ ಡಾಲರ್ ಆಗಿತ್ತು. ಆದರೆ ಸೇವಾ ವ್ಯಾಪಾರದ ಲಾಭವು ಇದನ್ನು (-)96.6 ಶತಕೋಟಿ ಡಾಲರ್-ಗೆ ಇಳಿಸಿತು. ಆದರೂ, ಭಾರತವು ಸೇವಾ ವಲಯಕ್ಕೆ ಸಂಬಂಧಿಸಿದಂತೆ ವಿವರವಾದ ದತ್ತಾಂಶವನ್ನು ಪ್ರಕಟಿಸಿಲ್ಲ, ಪ್ರತ್ಯೇಕ ಸಚಿವಾಲಯವನ್ನು ಹೊಂದಿಲ್ಲ ಮತ್ತು ಸರಕುಗಳ ರಫ್ತಿಗೆ ನೀಡುವಂತೆ ಸೇವೆಗಳ ರಫ್ತಿಗೆ ಹೆಚ್ಚಿನ ಪ್ರೋತ್ಸಾಹಕ ಯೋಜನೆಗಳನ್ನು ನೀಡಿಲ್ಲ.
2021 ರಿಂದ ಭಾರತವು ಏಳು ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದಗಳಿಗೆ (FTAs) ಸಹಿ ಹಾಕಿದೆ, ಇವುಗಳ ಫಲಿತಾಂಶವು ಮುಂಬರುವ ಕೆಲವು ವರ್ಷಗಳಲ್ಲಿ ತಿಳಿಯಲಿದೆ. ಇವುಗಳಲ್ಲಿ ಕೇವಲ ಮೂರು ದೇಶಗಳು ಮಾತ್ರ ಭಾರತದ ಅಗ್ರ 20 ವ್ಯಾಪಾರ ಪಾಲುದಾರರ ಪಟ್ಟಿಯಲ್ಲಿವೆ. ಭಾರತವು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಮಾಡುತ್ತಿರುವಂತೆ ಇತರ ದೇಶಗಳ ಜೊತೆಗೂ FTAಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ. ಅದರೊಂದಿಗೆ, ತನ್ನ ತಕ್ಷಣದ ನೆರೆಹೊರೆಯ ದೇಶಗಳು, ಆಸಿಯಾನ್ ಮತ್ತು ಆಫ್ರಿಕನ್ ರಾಷ್ಟ್ರಗಳನ್ನು ನಿರ್ಲಕ್ಷಿಸುವುದನ್ನು ನಿಲ್ಲಿಸಬೇಕು.
ಸುಧಾರಣೆಯತ್ತ ಗಮನಹರಿಸಿ
ವ್ಯಾಪಾರ ಕೊರತೆಯನ್ನು ಮುಕ್ತ ವ್ಯಾಪಾರ ಒಪ್ಪಂದಗಳಿಂದ ಪ್ರತ್ಯೇಕವಾಗಿ ನೋಡಬೇಕು. ಯಾಕೆಂದರೆ ಕಳಪೆ ರಫ್ತು ಪ್ರಮಾಣವು ದೇಶೀಯ ಉತ್ಪನ್ನಗಳ ಸ್ಪರ್ಧಾತ್ಮಕತೆಯ ಕೊರತೆ, ಉನ್ನತ ತಂತ್ರಜ್ಞಾನದ ಸಾಮರ್ಥ್ಯಗಳು ಮತ್ತು ಸಂಪನ್ಮೂಲಗಳ ಕೊರತೆಯನ್ನು ಪ್ರತಿಬಿಂಬಿಸುತ್ತದೆ (ಬಹುಶಃ ಇದೇ ಕಾರಣಕ್ಕೆ ಈ ಹಿಂದೆ ಭಾರತವನ್ನು "ಪ್ಯಾಕ್ಸ್ ಸಿಲಿಕಾ"ನಿಂದ ಹೊರಗಿಡಲಾಗಿತ್ತು). ಈಗ ಗಮನವು ಈ ಕ್ಷೇತ್ರಗಳ ಸುಧಾರಣೆಯತ್ತ ಸರಿಯಬೇಕು.
ಅಮೆರಿಕದೊಂದಿಗಿನ ಪ್ರಸ್ತುತ ವ್ಯಾಪಾರ ಬಿಕ್ಕಟ್ಟು ಮತ್ತು ಚೀನಾ ಹಾಗೂ ರಷ್ಯಾದಂತಹ ಪ್ರಮುಖ ಶಕ್ತಿಗಳೊಂದಿಗೆ ಆಗಾಗ ಬದಲಾಗುತ್ತಿರುವ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳು, ನಮಗೆ ತುರ್ತಾಗಿ ಒಂದು ಸ್ಪಷ್ಟ ದೃಷ್ಟಿಕೋನ, ದೀರ್ಘಕಾಲೀನ ಯೋಜನೆಗಳು ಮತ್ತು ಕಾರ್ಯತಂತ್ರಗಳ ಅಗತ್ಯವಿದೆ ಎಂಬುದನ್ನು ಸೂಚಿಸುತ್ತವೆ. ವ್ಯಾಪಾರ ಅಥವಾ ರಾಜತಾಂತ್ರಿಕತೆಯ ವಿಷಯದಲ್ಲಿ ಕೇವಲ ತಾತ್ಕಾಲಿಕ ಮತ್ತು ತುಂಡು-ತುಂಡು ಕ್ರಮಗಳು ಸಾಲದು.
ಹಣಕಾಸು ಸಚಿವರು ಇವನ್ನೆಲ್ಲ ಪರಿಗಣಿಸುವರೇ?

