
Union Budget-2026| ಹಣಕಾಸು ಆಯೋಗದಡಿ ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ. ಅನುದಾನ ಘೋಷಣೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಜೆಟ್ನ ಪ್ರಮುಖ ಅಂಶಗಳು, ಆದಾಯ ತೆರಿಗೆ ಬದಲಾವಣೆಗಳು ಮತ್ತು ಆರ್ಥಿಕ ಸುಧಾರಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸತತ ಒಂಬತ್ತನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ. ಏಪ್ರಿಲ್ 2026 ರಿಂದ ಮಾರ್ಚ್ 2027 ರ ಹಣಕಾಸು ವರ್ಷದ ಈ ಬಜೆಟ್, ಆರ್ಥಿಕ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳುವುದು ಮತ್ತು ವಿತ್ತೀಯ ಶಿಸ್ತನ್ನು ಕಾಪಾಡುವುದರ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ. ವಿಶೇಷವಾಗಿ, ಅಮೆರಿಕದ ಸುಂಕಗಳು ಸೇರಿದಂತೆ ಜಾಗತಿಕ ವ್ಯಾಪಾರ ಸಂಘರ್ಷಗಳಿಂದ ಭಾರತದ ಆರ್ಥಿಕತೆಯನ್ನು ರಕ್ಷಿಸುವ ಸುಧಾರಣಾ ಕ್ರಮಗಳನ್ನು ಈ ಬಜೆಟ್ ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.
Live Updates
- 1 Feb 2026 11:32 AM IST
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಘೋಷಣೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಣ್ಣ ಮತ್ತು ಂಧ್ಯಮ ಕೈಗಾರಿಕೆಗಳಿಗೆ ಬೂಸ್ಟ್ ನೀಡಿದ್ದು, ಹಣಕಾಸು ಹಂಚಿಕೆಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ ಘೋಷಿಸಲಾಗಿದ್ದು, ಎರಡನೇ ಹಾಗೂ ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.

- 1 Feb 2026 11:29 AM IST
ದೇಶವನ್ನು ಜಾಗತಿಕ ಚಿಪ್ ತಯಾರಿಕಾ ಹಬ್ ಮಾಡಲು ಐಎಸ್ಎಂ 2.0 ಘೋಷಣೆ.
ನಾವು ಭಾರತ ಸೆಮಿಕಂಡಕ್ಟರ್ ಮಿಷನ್ 2.0 ಅನ್ನು ಪ್ರಾರಂಭಿಸುತ್ತೇವೆ ಮತ್ತು ತಂತ್ರಜ್ಞಾನ ಹಾಗೂ ನುರಿತ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸಲು ಉದ್ಯಮ-ನೇತೃತ್ವದ ಸಂಶೋಧನೆ ಮತ್ತು ತರಬೇತಿ ಕೇಂದ್ರಗಳ ಮೇಲೆ ಕೇಂದ್ರೀಕರಿಸುತ್ತೇವೆ ಎಂದು ವಿತ್ತ ಸಚಿವೆ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
- 1 Feb 2026 11:25 AM IST
ಭಾರತವನ್ನು ಬಯೋ-ಫಾರ್ಮಾ ಹಬ್ ಆಗಿ ಮಾಡುವ ಘೋಷಣೆ; ನಿಫ್ಟಿ ಫಾರ್ಮಾ ಮತ್ತು ಬಿಎಸ್ಇ ಹೆಲ್ತ್ಕೇರ್ ಇಂಡೆಕ್ಸ್ ಶೇ. 1.7-2 ರಷ್ಟು ಏರಿಕೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತವನ್ನು ಜಾಗತಿಕ ಬಯೋ-ಫಾರ್ಮಾ ಅಭಿವೃದ್ಧಿ ಕೇಂದ್ರವನ್ನಾಗಿ ಮಾಡುವ ಪ್ರಮುಖ ಘೋಷಣೆಯನ್ನು ಮಾಡಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಔಷಧೀಯ ವಲಯದ ಷೇರುಗಳು ಭರ್ಜರಿ ಜಿಗಿತ ಕಂಡಿವೆ. ಈ ಘೋಷಣೆಯ ನಂತರ ನಿಫ್ಟಿ ಫಾರ್ಮಾ ಮತ್ತು ಬಿಎಸ್ಇ ಹೆಲ್ತ್ಕೇರ್ ಸೂಚ್ಯಂಕಗಳು ಶೇಕಡಾ 1.7 ರಿಂದ 2 ರಷ್ಟು ಏರಿಕೆ ದಾಖಲಿಸಿವೆ.
- 1 Feb 2026 11:22 AM IST
ಕೇಂದ್ರ ಬಜೆಟ್: 2000 ಕೈಗಾರಿಕಾ ಕ್ಲಸ್ಟರ್ಗಳ ಪುನಶ್ಚೇತನ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ 10,000 ಕೋಟಿ ನಿಧಿ ಘೋಷಣೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ದೇಶಾದ್ಯಂತ ಇರುವ ಸುಮಾರು 2000 ಹಳೆಯ ಕೈಗಾರಿಕಾ ಕ್ಲಸ್ಟರ್ಗಳನ್ನು ಆಧುನೀಕರಿಸಲು ಮತ್ತು ಅವುಗಳಿಗೆ ಮರುಜೀವ ನೀಡಲು ಸರ್ಕಾರ ನಿರ್ಧರಿಸಿದೆ. ಸಣ್ಣ ಉದ್ಯಮಗಳ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ 10,000 ಕೋಟಿ ರೂಪಾಯಿಗಳ ನಿಧಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
- 1 Feb 2026 11:21 AM IST
ಕೇರಳ, ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳಿಗೆ ಅರ್ಥ್ ಮಿನರಲ್ ಕಾರಿಡಾರ್ ಘೋಷಣೆ
ಕೇರಳ, ತಮಿಳುನಾಡು, ಒಡಿಶಾ ಹಾಗೂ ಆಂಧ್ರ ಪ್ರದೇಶಗಳಿಗೆ ಕೇಂದ್ರ ಬಜೆಟ್ನಲ್ಲಿ ಅರ್ಥ್ ಮಿನರಲ್ ಕಾರಿಡಾರ್ ಘೋಷಿಸುವ ಮೂಲಕ ಈ ವರ್ಷ ಚುನಾವಣೆ ಎದುರಿಸಲಿರುವ ಕೇರಳ ಹಾಗೂ ತಮಿಳುನಾಡಿಗೆ ಬಂಪರ್ ಘೋಷಣೆ ಮಾಡಿದೆ.
- 1 Feb 2026 11:12 AM IST
ನಾವು ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡಿದ್ದೇವೆ
ನಾವು 12 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಾಗಿನಿಂದ, ದೇಶದ ಆರ್ಥಿಕ ಪಥವು ಸ್ಥಿರತೆ, ವಿತ್ತೀಯ ಶಿಸ್ತು, ನಿರಂತರ ಬೆಳವಣಿಗೆ ಮತ್ತು ಸಾಧಾರಣ ಹಣದುಬ್ಬರದಿಂದ ಗುರುತಿಸಲ್ಪಟ್ಟಿದೆ. ಇದು ಅನಿಶ್ಚಿತತೆ ಮತ್ತು ಅಡೆತಡೆಗಳ ಸಮಯದಲ್ಲಿಯೂ ನಾವು ಮಾಡಿದ ಪ್ರಜ್ಞಾಪೂರ್ವಕ ಆಯ್ಕೆಗಳ ಫಲಿತಾಂಶವಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
- 1 Feb 2026 11:10 AM IST
ಅಂದಾಜು 11 ಲಕ್ಷ ಕೋಟಿ ಬಜೆಟ್ ಗಾತ್ರ
ಸಂಸತ್ನಲ್ಲಿ ಒಂಬತ್ತನೇ ಬಜೆಟ್ ಮಂಡಿಸುತ್ತಿರುವ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಇದೊಂದು ಆತ್ಮ ನಿರ್ಭರತೆಯ ಬಜೆಟ್ ಎಂದಿದ್ದು, ಬಜೆಟ್ನ ಗಾತ್ರ ಅಂದಾಜು 11 ಲಕ್ಷ ಕೋಟಿ ಎಂದು ತಿಳಿಸಿದ್ದಾರೆ.

- 1 Feb 2026 10:47 AM IST
ಬಜೆಟ್ಗೆ ಕೇಂದ್ರ ಸಂಪುಟ ಅನುಮೋದನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದೆ.
- 1 Feb 2026 10:36 AM IST
ಕೇಂದ್ರ ಬಜೆಟ್ ಮೇಲೆ ಯಾವುದೇ ನಿರೀಕ್ಷೆ ಇಲ್ಲ: ಸಂಸದೆ ಪ್ರಿಯಾಂಕಾ ಗಾಂಧಿ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಕೇಂದ್ರ ಬಜೆಟ್ ಮೇಲೆ ಈ ಬಾರಿ ಯಾವುದೇ ನಿರೀಕ್ಷೆ ಇಲ್ಲ ಎಂದು ಕಾಂಗ್ರೆಸ್ ವರಿಷ್ಠೆ, ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

- 1 Feb 2026 10:05 AM IST
ಸಂಸತ್ ಭವನಕ್ಕೆ ತಮ್ಮ ತಂಡದೊಂದಿಗೆ ಆಗಮಿಸಿದ ವಿತ್ತ ಸಚಿವೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಒಂಬತ್ತನೇ ಬಜೆಟ್ ಮಂಡನೆ ಮಾಡಲಿದ್ದು, ಅವರು ಪಂಕಜ್ ಚೌಧರಿ ಹಾಗೂ ಇತರೆ ಸದಸ್ಯರಿರುವ ತಮ್ಮ ತಂಡದೊಂದಿಗೆ ಸಂಸತ್ತಿಗೆ ಆಗಮಿಸಲಿದ್ದಾರೆ.

