
Union budget 2026: ಬೆಂಗಳೂರಿಗೆ ಹೈಸ್ಪೀಡ್ ರೈಲು, ಕರಾವಳಿಗೆ ಸಮುದ್ರ ವಿಮಾನದ ಕೊಡುಗೆ
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕರ್ನಾಟಕ, ಒಡಿಶಾ, ಕೇರಳ ರಾಜ್ಯಗಳ ಪ್ರಮುಖ ತಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಬಜೆಟ್ನಲ್ಲಿ ರಾಜ್ಯಕ್ಕೆ ಪ್ರತ್ಯೇಕವಾಗಿ ಹೆಚ್ಚಿನ ಕೊಡುಗೆ ನೀಡದಿದ್ದರೂ, ರಾಜ್ಯದ ಆರ್ಥಿಕತೆಗೆ ವೇಗ ನೀಡುವ ಹೈಸ್ಪೀಡ್ ರೈಲ್ವೆ ಕಾರಿಡಾರ್ಗಳು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಪ್ರವಾಸೋದ್ಯಮವನ್ನು ಉತ್ತೇಜನ ನೀಡಲು ಕರ್ನಾಟಕ, ಒಡಿಶಾ, ಕೇರಳ ರಾಜ್ಯಗಳ ಪ್ರಮುಖ ತಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲಾಗುವುದು. ಇದರೊಂದಿಗೆ, ದೇಶದ 15 ಪ್ರಮುಖ ಪುರಾತತ್ವ ಸ್ಥಳಗಳನ್ನು ಆಯ್ದುಕೊಂಡು ಅವುಗಳ ಸಮಗ್ರ ನವೀಕರಣಕ್ಕೆ ಸರ್ಕಾರ ಮುಂದಾಗಿದೆ. 'ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ' ಆದ್ಯತೆ ನೀಡಲಾಗುತ್ತದೆ. ರಾಜ್ಯದ ಪಶ್ಚಿಮ ಘಟ್ಟಗಳ ಚಾರಣ ಮತ್ತು ಕರಾವಳಿಯ ಆಮೆ ಹಾದಿಗಳು ವಿಶ್ವದ ಪ್ರವಾಸೋದ್ಯಮ ಭೂಪಟದಲ್ಲಿ ಪ್ರಮುಖ ಸ್ಥಾನ ಪಡೆಯಲಿವೆ.
ರಾಜ್ಯದ ಸುದೀರ್ಘ ಕರಾವಳಿಯ ಸಾರಿಗೆ ಸಾಮರ್ಥ್ಯವನ್ನು ಹೆಚ್ಚಿಸಲು 'ಕರಾವಳಿ ಸರಕು ಯೋಜನೆ'ಯನ್ನು ಘೋಷಿಸಲಾಗಿದೆ. ಇದು ಮಂಗಳೂರು ಮತ್ತು ಕಾರವಾರ ಬಂದರುಗಳ ಮೂಲಕ ಸರಕು ಸಾಗಣೆಯ ಪಾಲನ್ನು ಹೆಚ್ಚಿಸಲಿದೆ. ಅಲ್ಲದೆ, ಗುಡ್ಡಗಾಡು ಮತ್ತು ದೂರದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಸಮುದ್ರ ವಿಮಾನಗಳ ತಯಾರಿಕೆಗೆ ಬೆಂಬಲ ನೀಡಲಾಗುವುದು. ಇದು ಪ್ರವಾಸೋದ್ಯಮ ಮತ್ತು ತುರ್ತು ಸಾರಿಗೆಗೆ ಸಹಕಾರಿಯಾಗಲಿದೆ. ಅಲ್ಲದೇ, ದೂರದ ಮತ್ತು ದುರ್ಗಮ ಪ್ರದೇಶಗಳ ಸಂಪರ್ಕಕ್ಕಾಗಿ ಸರ್ಕಾರವು ಸಮುದ್ರ ವಿಮಾನಗಳ ತಯಾರಿಕೆಗೆ ಉತ್ತೇಜನ ನೀಡಲಾಗಿದೆ. ಇದು ರಾಜ್ಯದ ಕರಾವಳಿ ಪ್ರದೇಶಗಳಿಗೆ ವರದಾನವಾಗಲಿದೆ.
ಘೋಷಣೆಯಾಗಿರುವ 7 ಪ್ರಮುಖ ಹೈಸ್ಪೀಡ್ ರೈಲ್ವೆ ಕಾರಿಡಾರ್ಗಳಲ್ಲಿ ಬೆಂಗಳೂರಿಗೆ ಆದ್ಯತೆ ನೀಡಲಾಗಿದೆ. ಮುಂಬೈ-ಪುಣೆ, ದೆಹಲಿ-ವಾರಾಣಸಿಯಂತಹ ಮಾರ್ಗಗಳ ಜೊತೆಗೆ, ಬೆಂಗಳೂರನ್ನು ಬೆಸೆಯುವ ಮೂರು ಪ್ರಮುಖ ಮಾರ್ಗಗಳಿವೆ. ಹೈದರಾಬಾದ್ - ಬೆಂಗಳೂರು, ಚೆನ್ನೈ - ಬೆಂಗಳೂರು, ಹೈದರಾಬಾದ್ - ಚೆನ್ನೈಗೆ ಹೈಸ್ಪೀಡ್ ರೈಲು ನೀಡಲಾಗಿದೆ. ಈ ಕಾರಿಡಾರ್ಗಳು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಇಳಿಸುವುದಲ್ಲದೆ, ವಾಣಿಜ್ಯ ಚಟುವಟಿಕೆಗಳಿಗೆ ಹೊಸ ಆಯಾಮ ನೀಡಲಿವೆ.

