
ಕೇಂದ್ರ ಬಜೆಟ್ 2026: ಯಾವುದು ಅಗ್ಗ? ಯಾವುದು ದುಬಾರಿ?
ಕೇಂದ್ರ ಬಜೆಟ್ 2026ರಲ್ಲಿ ವಿದೇಶಿ ಪ್ರವಾಸ, ಶಿಕ್ಷಣ ಮತ್ತು ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗಿದ್ದು, ಕಲ್ಲಿದ್ದಲು ಮತ್ತು ಷೇರು ವಹಿವಾಟು ದುಬಾರಿಯಾಗಿದೆ. ಸಂಪೂರ್ಣ ಅಗ್ಗ-ದುಬಾರಿ ಪಟ್ಟಿ ಇಲ್ಲಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಮಧ್ಯಮ ವರ್ಗದವರಿಗೆ ಮತ್ತು ರೋಗಿಗಳಿಗೆ ಹಲವು ಸಮಾಧಾನಕರ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ, ಆದಾಯ ತೆರಿಗೆ ಪಾವತಿದಾರರಿಗೆ ಯಾವುದೇ ಹೊಸ ವಿನಾಯಿತಿ ನೀಡಿಲ್ಲ. ಹಾಗಿದ್ದರೆ ಕೇಂದ್ರ ಬಜೆಟ್ 2026ರ ನಂತರ ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಮತ್ತು ಯಾವುದು ದುಬಾರಿಯಾಗಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ
ಯಾವುದು ಅಗ್ಗ?
ಸರ್ಕಾರವು ಆಮದು ಸುಂಕ ಕಡಿತಗೊಳಿಸಿರುವುದರಿಂದ ಈ ಕೆಳಗಿನವುಗಳ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.
• ವಿದೇಶಿ ಪ್ರವಾಸ: ವಿದೇಶಿ ಟೂರ್ ಪ್ಯಾಕೇಜ್‌ಗಳ ಮೇಲಿನ ಟಿಸಿಎಸ್ (TCS) ದರವನ್ನು ಶೇ. 2ಕ್ಕೆ ಇಳಿಸಲಾಗಿದೆ.
• ವಿದೇಶಿ ಶಿಕ್ಷಣ: ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಣ ರವಾನೆ ಮಾಡುವುದು ಈಗ ಸುಲಭ ಮತ್ತು ಅಗ್ಗ.
• ಕ್ಯಾನ್ಸರ್ ಔಷಧಗಳು: 17 ಅತ್ಯಗತ್ಯ ಕ್ಯಾನ್ಸರ್ ಔಷಧಗಳ ಮೇಲಿನ ಮೂಲ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ.
• ಎಲೆಕ್ಟ್ರಾನಿಕ್ ಸರಕುಗಳು: ಮೈಕ್ರೋವೇವ್ ಓವನ್ ಮತ್ತು ಅದರ ಬಿಡಿಭಾಗಗಳು, ಟಿವಿ ಬಿಡಿಭಾಗಗಳು, ಕ್ಯಾಮೆರಾ ಮತ್ತು ಅದರ ಭಾಗಗಳು.
• ಗೇಮಿಂಗ್: ವೀಡಿಯೋ ಗೇಮ್ ತಯಾರಿಕೆಗೆ ಬಳಸುವ ಬಿಡಿಭಾಗಗಳ ಬೆಲೆ ಇಳಿಕೆ.
• ಚರ್ಮದ ವಸ್ತುಗಳು ಮತ್ತು ಪಾದರಕ್ಷೆಗಳ ಮೇಲಿನ ಸುಂಕ ಕಡಿತ.
• ಕಾಫಿ ಮತ್ತು ಇತರ ವೆಂಡಿಂಗ್ ಯಂತ್ರಗಳ ಬೆಲೆ ಇಳಿಕೆ.
• ಪರಿಸರ ಸ್ನೇಹಿ ಇಂಧನಕ್ಕೆ ಸಂಬಂಧಿಸಿದ ಉಪಕರಣಗಳು.
ಯಾವುದು ದುಬಾರಿ?
ಕೆಲವು ವಲಯಗಳ ಮೇಲೆ ತೆರಿಗೆ ಅಥವಾ ದಂಡವನ್ನು ಹೆಚ್ಚಿಸಿರುವುದರಿಂದ ಇವುಗಳ ಬೆಲೆ ಅಥವಾ ವೆಚ್ಚ ಹೆಚ್ಚಾಗಲಿದೆ.
ಕಲ್ಲಿದ್ದಲು:ಕಲ್ಲಿದ್ದಲಿನ ಮೇಲಿನ ಸುಂಕ ಹೆಚ್ಚಳವಾಗಿದ್ದು, ಇದು ಅಡುಗೆ ಮತ್ತು ಇತರ ಕೆಲಸಗಳಿಗೆ ಬಳಸುವವರಿಗೆ ಹೊರೆಯಾಗಲಿದೆ.
ಷೇರು ಮಾರುಕಟ್ಟೆ ವಹಿವಾಟು: ಸ್ಟಾಕ್ ಆಪ್ಷನ್ಸ್ ಮತ್ತು ಫ್ಯೂಚರ್ಸ್ ಟ್ರೇಡಿಂಗ್ ವೆಚ್ಚಗಳು ಹೆಚ್ಚಾಗಲಿವೆ.
ತೆರಿಗೆ ಮಿಸ್-ರಿಪೋರ್ಟಿಂಗ್ ದಂಡ: ಆದಾಯ ತೆರಿಗೆ ವರದಿಯಲ್ಲಿ ತಪ್ಪು ಮಾಹಿತಿ ನೀಡಿದರೆ ಈಗ ತೆರಿಗೆ ಮೊತ್ತದ ಶೇ. 100 ರಷ್ಟು ದಂಡ ವಿಧಿಸಲಾಗುತ್ತದೆ.
ಆಸ್ತಿ ಘೋಷಣೆ ಮಾಡದಿದ್ದರೆ ದಂಡ: ಚರ ಆಸ್ತಿಗಳ ಬಗ್ಗೆ ಮಾಹಿತಿ ನೀಡದಿದ್ದಲ್ಲಿ ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ.
ಇತರ ಪ್ರಮುಖ ಮುಖ್ಯಾಂಶಗಳು
ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ, ಆದರೆ ಹೊಸ ಆದಾಯ ತೆರಿಗೆ ಕಾಯ್ದೆಯು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ಪರಮಾಣು ವಿದ್ಯುತ್ ಯೋಜನೆಗಳ ಆಮದುಗಳ ಮೇಲೆ 2035ರವರೆಗೆ ಸುಂಕ ವಿನಾಯಿತಿ ನೀಡಲಾಗಿದೆ.

